ಶಿಕಾರಿಪುರದಲ್ಲಿ ಕೋಟ್ಯಂತರ ರು. ವಂಚನೆ: ಗ್ರಾಹಕರ ಗೋಳು

KannadaprabhaNewsNetwork | Published : Oct 7, 2023 2:19 AM

ಸಾರಾಂಶ

- ಶಿಕಾರಿಪುರ ಪಟ್ಟಣ ಬಳಿ ಜಮಾಯಿಸಿದ ಸೊಸೈಟಿ ಗ್ರಾಹಕರು: ತನಿಖೆ ನಡೆಸಿ, ನ್ಯಾಯ ದೊರಕಿಸಲು ಒತ್ತಾಯ
ಕನ್ನಡಪ್ರಭ ವಾರ್ತೆ, ಶಿಕಾರಿಪುರ ರಾಜಸ್ಥಾನದ ಉದಯಪುರ ಮೂಲದ ಆದರ್ಶ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಹೆಸರಿನಲ್ಲಿ ಪಟ್ಟಣದ ವ್ಯಕ್ತಿಯೊಬ್ಬರು ಹಲವರಿಗೆ ಕೋಟ್ಯಂತರ ರು. ಮೋಸ ಮಾಡಿದ್ದು, ಪ್ರಕರಣದ ಬಗ್ಗೆ ಸೂಕ್ತ ತನಿಖೆ ಕೈಗೊಂಡು ನೊಂದವರಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಮೋಸಕ್ಕೊಳಗಾದ ಹಲವರು ಪಟ್ಟಣ ಠಾಣೆಗೆ ಶುಕ್ರವಾರ ಸಂಜೆ ಧಾವಿಸಿ ದೂರು ನೀಡಿದರು. ಅರಸು ನಗರದ ಸವಿತಾ ಎಂಬ ಮಹಿಳೆ ಪಟ್ಟಣ ಠಾಣೆ ಪಿಎಸ್‌ಐ ಪ್ರಶಾಂತ್ ಅವರ ಬಳಿ ತನಗೆ ಮೋಸವಾದ ಬಗ್ಗೆ ಅಳುತ್ತಾ ನ್ಯಾಯಕ್ಕಾಗಿ ಮೊರೆಯಿಟ್ಟರು. ಪಟ್ಟಣದ ಹೆಸರಾಂತ ಹೋಟೆಲ್‌ನ ಕುಟುಂಬದ ವ್ಯಕ್ತಿಯೋರ್ವ ಎಲ್ಐಸಿ ಏಜೆಂಟ್ ಸಹ ಆಗಿದ್ದು, ಅವರಿಂದ ನಮಗೆ ಮೋಸವಾಗಿದೆ. ಇದೀಗ ನನ್ನ ಗಂಡ ಸತ್ತಿದ್ದಾರೆ, ಮಗಳ ಮದುವೆಗೆ ₹3.5 ಲಕ್ಷ ಹಣವನ್ನು ಆದರ್ಶ ಸೊಸೈಟಿಯಲ್ಲಿ ಭದ್ರತಾ ಠೇವಣಿಯಾಗಿಸಿದೆ. ಆ ಹಣ ಈಗ ಸಿಗದೇ ಮೋಸಕ್ಕೆ ಒಳಗಾಗಿದ್ದೇನೆ. ಪ್ರತಿನಿಧಿಯು ಒರಿಜಿನಲ್ ಬಾಂಡ್ ಪಡೆದು ಡೂಪ್ಲಿಕೇಟ್ ಬಾಂಡ್ ನೀಡಿದ್ದಾರೆ. ಈ ಕುರಿತು ಕೇಳಲು ತೆರಳಿದಾಗ ಸಬೂಬು ಹೇಳಿದರು. ಈಗ ಮನೆಗೆ ತೆರಳಿದರೆ ಕುಂಭಕೋಣಂಗೆ ಪೂಜೆಗಾಗಿ ತೆರಳಿದವರು 8 ತಿಂಗಳು ಕಳೆದರೂ ಇನ್ನೂ ವಾಪಸ್ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದರು. ಜಯಶ್ರೀ ಟಾಕೀಸ್ ಹಿಂಭಾಗದ ಫಾಮಿದಾ ಎನ್ನುವ ಮಹಿಳೆ ₹4 ಲಕ್ಷದ ಮೊತ್ತದ ಬಾಂಡ್ ತೋರಿಸುತ್ತ, ಹಣ ವಾಪಸ್ ಕೊಡಿಸುವಂತೆ ಮನವಿ ಮಾಡಿದರು. ಶ್ರೀಧರ ಅಡಿಗ ಎನ್ನುವ ಹೋಟೆಲ್ ಮಾಲೀಕರು ₹74 ಲಕ್ಷ, ಮತ್ತೋರ್ವ ಹೋಟೆಲ್ ಉದ್ಯಮಿ ಗೋಪಾಲಕೃಷ್ಣ ಹೆಬ್ಬಾರ್ ₹12.80 ಲಕ್ಷ, ರಾಘವೇಂದ್ರ ಬಡಾವಣೆಯ ಪಾರ್ವತಮ್ಮ ₹3 ಲಕ್ಷ, ಕಮಲಮ್ಮ ₹3 ಲಕ್ಷ, ದೊಡ್ಡಕೇರಿ ಮೋಹನ್ ₹6 ಲಕ್ಷ, ಗಬ್ಬೂರಿನ ವಿಷ್ಣು ₹50 ಸಾವಿರ, ಅರಸು ನಗರದ ಮಾಲತೇಶ್ ₹80 ಸಾವಿರ ಸೇರಿದಂತೆ ಇನ್ನೂ ಹಲವರು ಠಾಣೆ ಎದುರು ಆಗಮಿಸಿ ಪ್ರಕರಣ ಕುರಿತು ಸೂಕ್ತ ತನಿಖೆ ನಡೆಸಬೇಕು, ಎಲ್ಐಸಿ ಹಣ ಕಟ್ಟುವುದಾಗಿ ನಂಬಿಸಿ ಹಣ ಪಡೆದು ಕಟ್ಟದೇ ಮೋಸ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ, ನ್ಯಾಯ ದೊರಕಿಸಬೇಕು ಎಂದು ಠಾಣೆಯಲ್ಲಿ ಅಳಲು ತೋಡಿಕೊಂಡರು. - - - ಕೋಟ್ಸ್‌ 28 ರಾಜ್ಯದ 806 ಬ್ರಾಂಚ್‌ನಲ್ಲಿ 20 ಲಕ್ಷಕ್ಕೂ ಹೆಚ್ಚು ಜನರಿಂದ ₹8000 ಕೋಟಿ ವಂಚನೆಯ ಬೃಹತ್ ಪ್ರಕರಣ ಇದಾಗಿದೆ. ನಿರ್ದೇಶಕರಾದ ಮುಕೇಶ್ ಮೋದಿ, ರಾಹುಲ್ ಮೋದಿ ಸೇರಿ 11ಕ್ಕೂ ಹೆಚ್ಚು ಜನರ ಬಂಧಿಸಲಾಗಿದೆ. ಸಂಸ್ಥೆ ಬಾಂಡ್ ನೀಡದೇ ನಕಲಿ ಬಾಂಡ್ ನೀಡಿರುವುದು ಸೇರಿ ಹಲವು ಬಗೆಯ ಮೋಸ ಪಟ್ಟಣದಲ್ಲಿ ನಡೆದಿದೆ. ಜನರಿಗಾದ ಮೋಸದ ಕುರಿತು ಸಮಗ್ರ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡುವಂತೆ ಸ್ಥಳೀಯರ ಒತ್ತಾಯವಾಗಿದೆ - ಶ್ರೀಧರ ಅಡಿಗ, ಸಂತ್ರಸ್ತ, ಶಿಕಾರಿಪುರ ಹಲವು ತಿಂಗಳಿಂದ ಮನೆಗೆ ಬಾರದೇ ನಾಪತ್ತೆಯಾಗಿದ್ದ ಎಲ್ಐಸಿ ಪ್ರತಿನಿಧಿ ಹಾಗೂ ಸೊಸೈಟಿ ಪ್ರತಿನಿಧಿ ಮುರಳಿ ಪುತ್ರ ಶುಕ್ರವಾರ ಮನೆಗೆ ಆಗಮಿಸಿದ್ದನ್ನು ಕಂಡ ಸ್ಥಳೀಯರು ಮನೆಗೆ ತೆರಳಿ, ಹಣ ನೀಡುವಂತೆ ಒತ್ತಾಯಿಸಿದರು. ಆಗ ಮನೆ ಎದುರು ಜನ ಬಂದು ಗಲಾಟೆ ಮಾಡುತ್ತಿದ್ದಾರೆ ಎನ್ನುವ ದೂರಿಗೆ ರಕ್ಷಣೆ ನೀಡಲು ಪೊಲೀಸರು ಮುಂದಾದರು. ಅದಕ್ಕೆ ಪ್ರತಿಯಾಗಿ ಜನರು ಠಾಣೆಗೆ ಆಗಮಿಸಿ ದೂರು ನೀಡಲು ಮುಂದಾಗಿದ್ದಾರೆ. ಇಷ್ಟು ದಿನ ಮೋಸಕ್ಕೆ ಒಳಗಾದವರಿಗೆ ಸುಳ್ಳು ಹೇಳುತ್ತಾ ದಿನದೂಡುತ್ತಾ ಬಂದಿದ್ದರು. ನೂರಾರು ಜನರಿಗೆ ಮೋಸ ಆಗಿದ್ದು ಎಲ್ಲ ದೂರನ್ನು ಸೇರಿಸಿ ಸಮಗ್ರ ತನಿಖೆ ನಡೆಸಬೇಕು - ಗೋಪಾಲಕೃಷ್ಣ ಹೆಬ್ಬಾರ್, ಸಂತ್ರಸ್ತ, ಶಿಕಾರಿಪುರ - - - -6 ಕೆ.ಎಸ್.ಕೆ.ಪಿ 3: ಆದರ್ಶ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬಾಂಡ್ ಪಡೆದು ಮೋಸಕ್ಕೆ ಒಳಗಾದ ಸ್ಥಳೀಯ ಜನರು ಶುಕ್ರವಾರ ಶಿಕಾರಿಪುರ ಪಟ್ಟಣ ಠಾಣೆ ಎದುರು ಸೇರಿರುವುದು.

Share this article