ರಾಜ್ಯದಲ್ಲಿ ಕೋಟ್ಯಾಂತರ ರು. ಅಭಿವೃದ್ಧಿ ಕಾಮಗಾರಿ ಚಾಲ್ತಿ: ಸಚಿವ ರಾಮಲಿಂಗಾರೆಡ್ಡಿ

KannadaprabhaNewsNetwork |  
Published : Oct 31, 2024, 01:05 AM IST
ಎಆರ್ ಟಿ ಒ  | Kannada Prabha

ಸಾರಾಂಶ

ರಾಜ್ಯಾದ್ಯಂತ ಹಲವು ಕಡೆ ಹೊಸ ಆರ್ ಟಿಒ ಕಚೇರಿಗಳ ಕಟ್ಟಡ ಕಾಮಗಾರಿಗಳು ನಡೆಯುತ್ತಿರುವುದರ ಜೊತೆಗೆ ಚಾಲನಾ ತರಬೇತಿ ಟ್ರ್ಯಾಕ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿಯೂ ಚಾಲನಾ ತರಬೇತಿ ಟ್ರ್ಯಾಕ್ ನಿರ್ಮಿಸಲು ಸಚಿವ ಡಾ.ಎಂ.ಸಿ.ಸುಧಾಕರ್ ೩.೫ ಎಕರೆ ಜಮೀನು ಗುರುತಿಸಿದ್ದು, ಟ್ರ್ಯಾಕ್ ಕಾಮಗಾರಿ ಪ್ರಗತಿಯಲ್ಲಿದೆ. ತಾಲೂಕಿಗೆ ಅವಶ್ಯಕವಿರುವ ಬಸ್‌ಗಳ ವ್ಯವಸ್ಥೆಗಳನ್ನು ಮಾಡಿಕೊಡಲಾಗುವುದು.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಬಿಜೆಪಿ ಪಕ್ಷದವರು ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲವೆಂದು ಆರೋಪ ಮಾಡುತ್ತಿದ್ದು, ರಾಜ್ಯದಲ್ಲಿ ಕೋಟ್ಯಾಂತರ ರು.ಗಳ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಈ ಎಲ್ಲಾ ಕಾರ್ಯಗಳಿಗೆ ಹಣ ಎಲ್ಲಿಂದ ಬಂತೆಂದು ಬಿಜೆಪಿ ಪಕ್ಷದ ವಿರುದ್ಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಕಿಡಿಕಾರಿದರು.

ತಾಲೂಕಿನ ಕೋನಪಲ್ಲಿಯ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಎಆರ್ ಟಿಒ ಕಚೇರಿಯ ಕಟ್ಟಡವನ್ನು ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಹಾಗೂ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಉದ್ಘಾಟಿಸಿದರು.

ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ರಾಜ್ಯಾದ್ಯಂತ ಹಲವು ಕಡೆ ಹೊಸ ಆರ್ ಟಿಒ ಕಚೇರಿಗಳ ಕಟ್ಟಡ ಕಾಮಗಾರಿಗಳು ನಡೆಯುತ್ತಿರುವುದರ ಜೊತೆಗೆ ಚಾಲನಾ ತರಬೇತಿ ಟ್ರ್ಯಾಕ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿಯೂ ಚಾಲನಾ ತರಬೇತಿ ಟ್ರ್ಯಾಕ್ ನಿರ್ಮಿಸಲು ಸಚಿವ ಡಾ.ಎಂ.ಸಿ.ಸುಧಾಕರ್ ೩.೫ ಎಕರೆ ಜಮೀನು ಗುರುತಿಸಿದ್ದು, ಟ್ರ್ಯಾಕ್ ಕಾಮಗಾರಿ ಪ್ರಗತಿಯಲ್ಲಿದೆ. ತಾಲೂಕಿಗೆ ಅವಶ್ಯಕವಿರುವ ಬಸ್‌ಗಳ ವ್ಯವಸ್ಥೆಗಳನ್ನು ಮಾಡಿಕೊಡಲಾಗುವುದು ಎಂದರು.

ವಿರೋಧ ಪಕ್ಷ ಬಿಜೆಪಿಯವರು ಸುಖಾ ಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಾರಿಗೆ ಇಲಾಖೆಯಲ್ಲಿ ಯಾವುದೇ ನೇಮಕಾತಿಯಾಗಿರಲಿಲ್ಲ, ಹೊಸ ಬಸ್‌ಗಳೂ ಓಡಲಿಲ್ಲ, ನಮ್ಮ ಸರ್ಕಾರವು ಮಾಡುತ್ತಿರುವ ಸಾರಿಗೆ ಇಲಾಖೆಯ ಕ್ರಾಂತಿಗಳನ್ನು ಹಾಗೂ ಶಕ್ತಿಯೋಜನೆಯಿಂದ ಆದ ಅನುಕೂಲಗಳನ್ನು ಬಿಜೆಪಿಯವರು ಪರಿಗಣಿಸಿಯೇ ಇಲ್ಲ. ಸುಖಾ ಸುಮ್ಮನೇ ನಮ್ಮ ಸರ್ಕಾರದ ಮೇಲೆ ಅಪಪ್ರಚಾರ ಮಾಡತೊಡಗಿದ್ದಾರೆಂದು ಕಿಡಿಕಾರಿದರು.

ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಚಿಂತಾಮಣಿಯಲ್ಲಿ ಎಆರ್ ಟಿಒ ಕಚೇರಿಯನ್ನು ಪ್ರಾರಂಭಿಸಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿದ್ದು, ೨೦೧೮ರಲ್ಲಿ ಮಂಜೂರಾತಿ ಸಿಕ್ಕು ಈಗ ಹೊಸ ಕಟ್ಟಡ ನಿರ್ಮಾಣವಾಗಿದ್ದು, ಪ್ರಾರಂಭದಲ್ಲಿ ೬.೫ ಎಕರೆ ಜಮೀನನ್ನು ಕಾಮಗಾರಿಗೆ ಕೊಡಿಸಲಾಗಿದೆ, ನಂತರ ಚಾಲನಾ ತರಬೇತಿ ಟ್ರ್ಯಾಕ್‌ ನಿರ್ಮಾಣಕ್ಕಾಗಿ ಕಳೆದ ವರ್ಷ ಸೆಪ್ಟಂಬರ್ ತಿಂಗಳಲ್ಲಿ ನಾವು ಹೆಚ್ಚುವರಿಯಾಗಿ ೩.೫ ಎಕರೆ ಜಮೀನನ್ನು ಮಂಜೂರು ಮಾಡಿಸಿಕೊಟ್ಟಿದ್ದೇವೆ. ಕಚೇರಿ ಕಟ್ಟಡಕ್ಕೆ ೫.೭೫ ಕೋಟಿ ರು. ಅನುದಾನ ಬಿಡುಗಡೆಯಾಗಿತ್ತು, ಚಾಲನಾ ತರಬೇತಿ ಟ್ರ್ಯಾಕ್ ನಿರ್ಮಿಸಲು ೫ ಕೋಟಿ ರು. ಅನುದಾನ ಮಂಜೂರು ಮಾಡಿ ಈಗ ಕಾಮಗಾರಿ ಪ್ರಗತಿಯಲ್ಲಿದೆಯೆಂದರು.

ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಸಿಇಒ ಪ್ರಕಾಶ್ ನಿಟ್ಟಾಲಿ, ಸಾರಿಗೆ ಆಯುಕ್ತ ಯೋಗೀಶ್, ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್‌ ಚೌಕ್ಸೆ, ಕರ್ನಾಟಕ ಜಾನಪದ ಆಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಕೋನಪಲ್ಲಿ ಗ್ರಾಪಂ ಅಧ್ಯಕ್ಷೆ ಮಮತಾ ನರಸಿಂಹಮೂರ್ತಿ, ನಗರಸಭೆ ಅಧ್ಯಕ್ಷ ಜಗನ್ನಾಥ್, ಉಪಾಧ್ಯಕ್ಷೆ ರಾಣಿಯಮ್ಮ, ಕೃಷಿಕ ಸಮಾಜದ ಅಧ್ಯಕ್ಷ ಸಂತೇಕಲ್ಲಹಳ್ಳಿ ಗೋವಿಂದಪ್ಪ, ಜಂಟಿ ಸಾರಿಗೆ ಆಯುಕ್ತೆ ಜಿ.ಎನ್ ಗಾಯಿತ್ರಿದೇವಿ, ತಹಸೀಲ್ದಾರ್ ಸುದರ್ಶನ್‌ ಯಾದವ್, ತಾಪಂ ಇಒ ಎಸ್.ಆನಂದ್, ಡಿವೈಎಸ್‌ಪಿ ಮುರಳೀಧರ್ ಮತಿತ್ತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ