1.43 ಕೋಟಿ ರು. ಮೌಲ್ಯದ 2ಕೆಜಿ ಬಂಗಾರ ಜಪ್ತಿ; ಕಳ್ಳನ ಬಂಧನ

KannadaprabhaNewsNetwork | Published : Oct 22, 2024 12:10 AM

ಸಾರಾಂಶ

ವಿಶೇಷ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ 2 ಕೆಜಿ 5 ತೊಲೆ ಬಂಗಾರ ಆಭರಣಗಳೊಂದಿಗೆ ಪೊಲೀಸ್‌ ಸಿಬ್ಬಂದಿ ಹಾಗೂ ಎಸ್ಪಿ ಪುಟ್ಟಮಾದಯ್ಯ ಇದ್ದಾರೆ.

ಕನ್ನಡಪ್ರಭ ವಾರ್ತೆ ಸಿಂಧನೂರು

ಬರೋಬ್ಬರಿ 1.43 ಕೋಟಿ ರು. ಮೌಲ್ಯದ ಬಂಗಾರದ ಆಭರಣ ಕಳ್ಳತನ ಪ್ರಕರಣವನ್ನು ಸಿಂಧನೂರು ನಗರ ಪೊಲೀಸರು ಘಟನೆ ನಡೆದ ಒಂದು ವಾರದಲ್ಲಿಯೇ ವಿಶೇಷ ಕಾರ್ಯಾಚರಣೆ ನಡೆಸಿ ಭೇದಿಸಿದ್ದು, 2 ಕೆಜಿ 5 ತೊಲೆ ಬಂಗಾರದ ಆಭರಣಗಳ ಸಮೇತ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ತಿಳಿಸಿದ್ದಾರೆ.

ನಗರದ ಶಹರ ಪೊಲೀಸ್ ಠಾಣೆಯಲ್ಲಿ ಸೋಮವಾರ ರಾತ್ರಿ ಸುದ್ದಿಗೋಷ್ಠಿನಡೆಸಿ, ಸಿಕಂದರ ಬಾದ್ ಮೂಲದ ಇಬ್ಬರು ಬಂಗಾರ ವ್ಯಾಪಾರಿಗಳಾದ ದರಮೇಶ ಕುಮಾರ್ ಹಾಗೂ ನಿರ್ಮಲ್ ಕುಮಾರ ಜೈನ್ ಎನ್ನುವವರು ಕಮಿಷನ್ ಆಧಾರದ ಮೇಲೆ ಬಂಗಾರ ಮಾರಾಟ ಮಾಡಲು ಸಿಕಂದರಬಾದ್‌ನ ಬಂಗಾರ ವ್ಯಾಪಾರಿ ಭರತ್ ಕುಮಾರ್ ಎನ್ನುವವರಿಂದ ಕೋಟ್ಯಂತರ ರು. ಮೌಲ್ಯದ ಬಂಗಾರದ ಆಭರಣಗಳನ್ನು ಅಕ್ಟೋಬರ್ 12 ರಂದು ರಾಯಚೂರು ಜಿಲ್ಲೆಗೆ ತಂದಿದ್ದರು. ಅವರಿಬ್ಬರು ಸಿಂಧನೂರು ನಗರದ ಜೈನ್ ಧರ್ಮಶಾಲೆ ಕೋಣೆಯೊಂದರಲ್ಲಿ ಬಂಗಾರ ಸಮೇತ ವಾಸ್ತವ್ಯ ಹೂಡಿದ್ದರು. ಮರುದಿನ ಸಿಂಧನೂರಿನ ಹಲವೆಡೆ ಬಂಗಾರ ವ್ಯಾಪಾರ ಮಾಡುವ ಉದ್ದೇಶ ಹೊಂದಿದ್ದರು. ಇದ್ದ ಇಬ್ಬರ ಪೈಕಿ ಬಂಧಿತ ಆರೋಪಿ ನಿರ್ಮಲ್ ಕುಮಾರ್ ಜೈನ್ ಎಂಬಾತ ದರಮೇಶನಿಗೆ ತಿಳಿಯದಂತೆ ಎಲ್ಲಾ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಮಾನ್ವಿ ಪಟ್ಟಣದ ಬಾಲಾಜಿ ಕಂಪರ್ಟ್ಸ್ ವಸತಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದನು. ನಂತರ ಬಂಗಾರದ ಮೂಲ ಮಾಲೀಕ ಭರತ್ ಕುಮಾರನಿಗೆ ಬಂಗಾರ ಕಳ್ಳತನವಾದ ವಿಷಯ ತಿಳಿದು ಸಿಂಧನೂರು ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಬಹುಕೋಟಿ ಮೌಲ್ಯದ ಬಂಗಾರದ ಕಳ್ಳತನದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಂಧನೂರು ಉಪವಿಭಾಗದ ಡಿವೈಎಸ್ಪಿ ಬಿ.ಎಸ್.ತಳವಾರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ವೈಜ್ಞಾನಿಕ ವಿಧಾನಗಳಿಂದ ಕಳ್ಳನನ್ನು ಪತ್ತೆ ಹಚ್ಚಿ ಆತನಿಂದ ಸಿಕಂದರಬಾದ್ ಬಂಗಾರ ಸೇರಿದಂತೆ ವಿವಿಧೆಡೆ ಕಳ್ಳತನ ಮಾಡಿದ್ದ ಒಟ್ಟು 2 ಕೆಜಿ 5 ತೊಲೆ ಬಂಗಾರದ ಆಭರಣ ಹಾಗೂ ₹40,150 ನಗದು ವಶಪಡಿಸಿಕೊಳ್ಳಲಾಗಿದೆ. ಒಟ್ಟು ಬಂಗಾರದ ಆಭರಣಗಳ ಮೌಲ್ಯ 1 ಕೋಟಿ 43 ಲಕ್ಷದ 92 ಸಾವಿರ ರು. ಎಂದು ಅಂದಾಜಿಸಲಾಗಿದೆ ಎಂದು ವಿವರಿಸಿದರು. ಸಿಂಧನೂರು ಉಪವಿಭಾಗಧೀಕಾರಿ ಬಿಎಸ್ ತಳವಾರ, ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ದುರುಗಪ್ಪ ಡೊಳ್ಳಿನ್, ಪಿಎಸ್‌ಐಗಳಾದ ಯರಿಯಪ್ಪ, ಬಸವರಾಜ ಸೇರಿ ಪೊಲೀಸ್ ಪೇದೆಗಳು ಇದ್ದರು.

Share this article