ಸೋಮರಡ್ಡಿ ಅಳವಂಡಿ ಕೊಪ್ಪಳ
ಪ್ರಾಧಿಕಾರದಲ್ಲಿ ಗುತ್ತಿಗೆ ಆಧಾರದ ಮೇಲೆ ದ್ವಿತೀಯ ದರ್ಜೆಯ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ರವೀಂದ್ರ ಕುಮಾರ್ ಕರಾಮತ್ತು ಮಾಡಿ ನಿವೇಶನ ಕೋರಿ ಲಕ್ಷ ಲಕ್ಷ ಪಾವತಿಸಿದವರಿಗೆ ಪಂಗನಾಮ ಹಾಕಿ ಪರಾರಿಯಾಗಿದ್ದಾನೆ. ಪ್ರಾಧಿಕಾರದಲ್ಲಿ ಕಳೆದ 15 ವರ್ಷಗಳಿಂದ ನಾನಾ ಅಕ್ರಮ ಎಸೆದು ಕೋಟಿ ಕೋಟಿ ಲೂಟಿ ಮಾಡಿರುವುದು ಈಗ ಬೆಳಕಿಗೆ ಬಂದಿದ್ದು, ಪ್ರಾಧಿಕಾರದ ಆಯುಕ್ತರದ ಶರಣಪ್ಪ ಸಲ್ಲಿಸಿದ ದೂರಿನ ಆಧಾರದ ಮೇಲೆ ತನಿಖೆ ಚುರುಕುಗೊಂಡಿದೆ.
ಬೆಳಕಿಗೆ ಬಂದಿದ್ದು ಹೇಗೆ?: ಪ್ರಾಧಿಕಾರದಲ್ಲಿ ನಿವೇಶನಕ್ಕಾಗಿ ಫಲಾನುಭವಿಗಳು ಲಕ್ಷ ಲಕ್ಷ ಹಣ ನೀಡಿ ನಾಲ್ಕಾರು ವರ್ಷವಾದರೂ ನಿವೇಶನ ನೀಡದೇ ಇರುವುದರಿಂದ ಪ್ರಶ್ನೆ ಮಾಡಿ ಪ್ರಾಧಿಕಾರಕ್ಕೆ ಗಂಗಾವತಿ ಮಹಿಳೆಯರುಗಳು ಸೇರಿದಂತೆ ಅನೇಕರು ದೂರು ನೀಡಿದ್ದಾರೆ.ಹೀಗೆ, ದೂರು ನೀಡಿದ ಆಧಾರದ ಮೇಲೆ ಪರಿಶೀಲನೆ ಮಾಡಿದಾಗ ಪ್ರಾಧಿಕಾರದಲ್ಲಿ ಈ ಕುರಿತು ಯಾವುದೇ ಹಣ ಜಮೆ ಆಗಿರಲಿಲ್ಲ, ಇದರಿಂದ ಗಲಿಬಿಲಿಗೊಂಡ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ಇರುವ ದಾಖಲಾತಿ ತಡಕಾಡಿದರೆ ಎಲ್ಲಿಯೂ ನಯಾ ಪೈಸೆ ಜಮೆ ಆಗಿರಲಿಲ್ಲ. ಆಗ ದೂರಿನಲ್ಲಿ ಸಲ್ಲಿಸಿದ ಮಾಹಿತಿ ಅಡಿ ಯಾವ ಬ್ಯಾಂಕಿಗೆ ಹಣ ಜಮೆಯಾಗಿದೆ ಎನ್ನುವುದನ್ನು ಆಧರಿಸಿ ಬ್ಯಾಂಕಿನಲ್ಲಿ ಮಾಹಿತಿ ಪಡೆಯಲು ಮುಂದಾದಾಗ ಇದೆಲ್ಲವೂ ಬೆಳಕಿಗೆ ಬಂದಿದೆ.
ಎಂಟು ಕೋಟಿಗೂ ಅಧಿಕ ಲೂಟಿ: ಪ್ರಾಧಿಕಾರದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರವೀಂದ್ರ ಕುಮಾರ್ ಹಾಗೂ ಈ ಹಿಂದೆ ಕಾರ್ಯ ನಿರ್ವಹಿಸಿದ ಆಯುಕ್ತರೊಬ್ಬರ ಸಹಕಾರದಿಂದ ಸುಮಾರು ಎಂಟು ಕೋಟಿ ಅಧಿಕ ಹಣ ಲೂಟಿ ಮಾಡಿದ್ದಾರೆ ಎನ್ನಲಾಗಿದೆ.
ಸರ್ಕಾರಿ ನೌಕರ: ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ರವೀಂದ್ರ ಕುಮಾರ್ ಪ್ರಾಧಿಕಾರದ ಅಧ್ಯಕ್ಷರಿಗೆ ಹಾಗೂ ಆಯುಕ್ತರಿಗೆ ಸರ್ಕಾರಿ ನೌಕರ ಎನ್ನುವಂತೆ ಬಿಂಬಿಸಿ ಮಾಡಬಾರದನ್ನೆಲ್ಲ ಮಾಡಿ ಲೂಟಿ ಮಾಡಿದ್ದಾನೆ. ಈ ಹಿಂದೆ ಈತನ ಅಕ್ರಮದ ಬಗ್ಗೆ ವಾಸನೆ ಬಂದಿದ್ದರಿಂದ ಈತನನ್ನು ಪ್ರಾಧಿಕಾರದಿಂದ ಬಿಡುಗಡೆ ಮಾಡಿದರೂ ಬೇರೆಡೆಗೆ ವರ್ಗಾವಣೆಯಾಗಿ ಹೋಗದೆ ಇದ್ದಾಗ ಈತ ಗುತ್ತಿಗೆ ನೌಕರ ಎಂದು ಗೊತ್ತಾಗಿದೆ. ಆದರೂ ಈತ ಪ್ರಭಾವ ಬಳಸಿ, ಮತ್ತೆ ಉಳಿದುಕೊಂಡಿದ್ದಾನೆ.
ವಂಚನೆ ಮಾಡಿರುವುದು ಬೆಳಕಿಗೆ ಬಂದ ಹಿನ್ನೆಲೆ ದೂರು ದಾಖಲಾಗಿದೆ. ಅಕ್ರಮದ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಸನ್ನ ಗಡಾದ ತಿಳಿಸಿದ್ದಾರೆ.