ಅಧ್ಯಕ್ಷ ಚುನಾವಣೆಯಲ್ಲಿ ಅಡ್ಡ ಮತದಾನ ವಿವಾದ

KannadaprabhaNewsNetwork |  
Published : Jan 31, 2024, 02:20 AM ISTUpdated : Feb 01, 2024, 05:13 PM IST
೩೨ | Kannada Prabha

ಸಾರಾಂಶ

ಗೋಣಿಕೊಪ್ಪ ಮತ್ತು ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಬಿಜೆಪಿ ಬೆಂಬಲಿತ ಸದಸ್ಯರಿಗೆ ಆಣೆ ಪ್ರಮಾಣ ಮಾಡಿಸಿದರೂ ಅಡ್ಡ ಮತದಾನ ಮಾಡಿ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಎರಡು ಪಂಚಾಯಿತಿಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆ ಮಾಡಿರುವ ಬಗ್ಗೆ ಈಗ ವ್ಯಾಪಕ ಚರ್ಚೆ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಗೋಣಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಅಧಿಕ ಮಂದಿ ಸದಸ್ಯರಿದ್ದರೂ ಸೋಮವಾರ ನಡೆದ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ 12 ಸದಸ್ಯರಿಂದ ಮಂಗಳವಾರ ದೇವಾಲಯದಲ್ಲಿ ಆಣೆ ಪ್ರಮಾಣ ಮಾಡಿಸಲಾಗಿದೆ.

ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಮಂಗಳವಾರ ನಡೆದಿದ್ದು, ಮತದಾನಕ್ಕೂ ಮುನ್ನ 12 ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿಂದ ಬಸವೇಶ್ವರ ದೇವಾಲಯದಲ್ಲಿ ಪ್ರಮಾಣ ಮಾಡಿಸಿ ಮತದಾನ ನಡೆದಿದೆ. ಆದರೆ ಇಲ್ಲೂ ಕೂಡ ಅಡ್ಡ ಮತದಾನವಾಗಿದ್ದು, ಪಂಚಾಯಿತಿ ಅಧಿಕಾರ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದೆ.

ಗೋಣಿಕೊಪ್ಪ ಮತ್ತು ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಬಿಜೆಪಿ ಬೆಂಬಲಿತ ಸದಸ್ಯರಿಗೆ ಆಣೆ ಪ್ರಮಾಣ ಮಾಡಿಸಿದರೂ ಅಡ್ಡ ಮತದಾನ ಮಾಡಿ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಎರಡು ಪಂಚಾಯಿತಿಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆ ಮಾಡಿರುವ ಬಗ್ಗೆ ಈಗ ವ್ಯಾಪಕ ಚರ್ಚೆ ನಡೆಯುತ್ತಿದೆ. 

ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಸದಸ್ಯರನ್ನು ಪೊನ್ನಂಪೇಟೆ ಬಸವೇಶ್ವರ ದೇವಾಲಯದಲ್ಲಿ ಬೆಳಗ್ಗೆ ಒಟ್ಟಿಗೆ ಸೇರಿಸಿ ನಾವೆಲ್ಲರೂ ಬಿಜೆಪಿ ಪಕ್ಷ ಸೂಚಿಸುವ ಅಭ್ಯರ್ಥಿಗೆ ಮತ ಹಾಕುತ್ತೇವೆ ಎಂದು ಪ್ರಮಾಣ ಮಾಡಿಸಲಾಗಿದೆ. ಆದರೆ ಮತದಾನದಲ್ಲಿ ನಾಲ್ವರು ಸದಸ್ಯರು ಅಡ್ಡ ಮತದಾನ ಮಾಡಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. 

ಸೋಮವಾರ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ನಡೆದ ಬೆಳವಣಿಗೆ ಹಿನ್ನೆಲೆಯಲ್ಲಿ ಮಂಗಳವಾರ ಬಿಜೆಪಿಯ ಮುಖಂಡರು ಎಲ್ಲ 12 ಮಂದಿ ಗ್ರಾಪಂ ಸದಸ್ಯರನ್ನು ಬೆಕ್ಕೆಸುಡ್ಲೂರಿನ ದೇವಾಲಯದಲ್ಲಿ ಪ್ರಮಾಣ ಮಾಡಿಸಿದಾಗ ಅವರೆಲ್ಲರೂ ತಾವು ಬಿಜೆಪಿ ಅಭ್ಯರ್ಥಿಗಳಾದ ರಾಜೇಶ್ ಹಾಗೂ ಗೀತಾ ಅವರಿಗೆ ಮತವನ್ನು ಹಾಕಿದ್ದೇವೆ ಎಂದು ಪ್ರಮಾಣ ಮಾಡಿ ಅಡ್ಡ ಬಿದ್ದು ಬಂದಿದ್ದಾರೆ.

ಹಾಗೆ ಹಾತೂರಿನ ಭದ್ರಕಾಳಿ ದೇವಾಲಯಕ್ಕೆ ತೆರಳಿ ಕರ್ಪೂರ ಬೆಳಗಿಸಿ ಅಲ್ಲಿಯೂ ಕೂಡ 12 ಸದಸ್ಯರು ಪ್ರಮಾಣ ಮಾಡಿ ಬಂದಿದ್ದಾರೆ. ಹಾಗಾದರೆ 12 ಸದಸ್ಯರು ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಮತ ಹಾಕಿದ್ದರೆ ಗೆಲ್ಲ ಬೇಕಾಗಿತ್ತು. ಮೂರು ಮತಗಳು ಬಿಜೆಪಿಗೆ ಕಡಿಮೆಯಾಗಲು ಕಾರಣವೇನು ಎಂಬುದು ನಿಗೂಢ ಪ್ರಶ್ನೆಯಾಗಿದೆ. 

ಆಣೆ, ಪ್ರಮಾಣ ಎಲ್ಲವೂ ನಡೆದರೂ ಗೋಣಿಕೊಪ್ಪ ಹಾಗೂ ಪೊನ್ನಂಪೇಟೆಯಲ್ಲಿ ಅಡ್ಡ ಮತದಾನ ಮಾಡಿದ ಸದಸ್ಯರು ಯಾರು ಎಂಬುದು ತಿಳಿಯದಾಗಿದೆ. ಅಡ್ಡ ಮತದಾನದಲ್ಲಿ ಭಾಗವಹಿಸಿ ಆಣೆ ಪ್ರಮಾಣ ಮಾಡಿದವರಿಗೆ ಸದ್ಯದಲ್ಲಿ ಭಗವಂತ ತಕ್ಕ ಶಿಕ್ಷೆ ನೀಡುತ್ತಾನೆ ಎಂಬ ನಂಬಿಕೆಯಲ್ಲಿ ಇದೀಗ ಬಿಜೆಪಿಯ ನಿಷ್ಠಾವಂತ ಸದಸ್ಯರು ದೇವರ ಮೊರೆ ಹೋಗಿದ್ದಾರೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...