ಕನ್ನಡಪ್ರಭ ವಾರ್ತೆ ಕೋಲಾರಗುರು ಪೂರ್ಣಿಮಾ ಅಂಗವಾಗಿ ನಗರದ ಸಾಯಿಬಾಬಾ ಮಂದಿರದಲ್ಲಿ ಭಾನುವಾರ ವಿಶೇಷ ಪೂಜೆ, ಅದ್ದೂರಿ ಹೂವಿನ ಅಲಂಕಾರ, ವಾದ್ಯಗೋಷ್ಟಿ ಏರ್ಪಡಿಸಲಾಗಿದ್ದು, ಬಾಬಾ ದರ್ಶನಕ್ಕೆ ಸುಮಾರು ೨೦ ಸಾವಿರಕ್ಕೂ ಮೀರಿದ ಭಕ್ತ ಸಾಗರ ಹರಿದು ಬಂದಿದ್ದು, ಎಲ್ಲರಿಗೂ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಅಫೆಕ್ಸ್ ಬ್ಯಾಂಕ್ ನಿರ್ದೇಶಕ ಬ್ಯಾಲಹಳ್ಳಿ ಗೋವಿಂದಗೌಡ ಹಬ್ಬದೂಟದ ವ್ಯವಸ್ಥೆ ಮಾಡಿಸಿದ್ದುದು ವಿಶೇಷವಾಗಿತ್ತು.ಪ್ರತಿ ವರ್ಷದಂತೆ ಈ ವರ್ಷವೂ ನಗರದ ಬಾಬಾ ಮಂದಿರದಲ್ಲಿ ಮುಂಜಾನೆಯಿಂದಲೇ ಗುರುವಿನ ಕೃಪೆ ಪಡೆಯಲು ಸಹಸ್ರಾರು ಮಂದಿ ಸರದಿ ಸಾಲಿನಲ್ಲಿ ನಿಂತಿದ್ದುದು ಕಂಡು ಬಂತು. ಬಾಬಾ ಮಂದಿರದಿಂದ ರೈಲ್ವೆ ನಿಲ್ದಾಣದವರೆಗೂ ಜನರು ಸಾಲುಗಟ್ಟಿ ನಿಂತಿದ್ದರು.ಮುಂಜಾನೆಯ ಅಭಿಷೇಕ, ಗುರು ಭಜನೆಯೊಂದಿಗೆ ಪೂಜಾ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಸಾಯಿಬಾಬಾ ಮೂರ್ತಿ ಹಾಗೂ ಇಡೀ ದೇವಾಲಯವನ್ನು ಮುಖಂಡ ನಂದಿನಿ ನಾರಾಯಣಸ್ವಾಮಿ ಮತ್ತಿತರ ದಾನಿಗಳ ನೆರವಿನಿಂದ ವಿಶೇಷ ಹೂವಿನ ಅಲಂಕಾರಗೊಳಿಸಲಾಗಿತ್ತು.ಪೊಲೀಸ್ ಬಂದೋಬಸ್ತ್
ಬ್ಯಾಲಹಳ್ಳಿ ಗೋವಿಂದಗೌಡ ಮಾಧ್ಯಮದೊಂದಿಗೆ ಮಾತನಾಡಿ, ಗುರುಪೌರ್ಣಿಮವನ್ನು ಪ್ರತಿ ವರ್ಷವೂ ಆಚರಿಸುತ್ತಿದ್ದು, ಗುರುವಿನ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆ,ಗೊಂದಲವಾಗದಂತೆ ಊಟದ ವ್ಯವಸ್ಥೆ ಕಲ್ಪಿಸುವ ಸಂಕಲ್ಪದೊಂದಿಗೆ ತಾವು ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.
ಸಚಿವ ಕೆಎಚ್ಚೆಂರಿಂದ ಪೂಜೆಇದೇ ಸಂದರ್ಭದಲ್ಲಿ ರಾಜ್ಯ ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ತಮ್ಮ ಬೆಂಬಲಿಗರೊಂದಿಗೆ ದೇವಾಲಯಕ್ಕೆ ಆಗಮಿಸಿ ಸುಮಾರು ೪೦ ನಿಮಿಷ ವಿಶೇಷ ಪೂಜೆ ಸಲ್ಲಿಸಿದರು. ಶಿರಡಿ ಮಾದರಿಯಲ್ಲಿ ಇಲ್ಲಿಯೂ ಕಾಕಡಾರತಿ ನಡೆಸಿದ್ದು, ಸಚಿವರು ಭಜನೆ ಮಾಡಿದರು. ಸಚಿವರ ಆಗಮನದಿಂದ ದರ್ಶನ ಬಂದ್ ಆದ ಕಾರಣ ಸಾವಿರಾರು ಮಂದಿ ಸರದಿ ಸಾಲಿನಲ್ಲಿ ಸಂಕಷ್ಟ ಅನುಭವಿಸಿದರು. ಅಣ್ಣಿಹಳ್ಳಿ ನಾಗರಾಜ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಶಿಧರ್, ನೆನುಮನಹಳ್ಳಿ ಚಂದ್ರಶೇಖರ್, ಕೆಜಿಎಫ್ ನಗರದ ಅಮರೇಂದ್ರಮೌನಿ, ಒಬಿಸಿ ಮುನಿಸ್ವಾಮಿ, ಭಾರ್ಗವರಾಮ್, ಮುಖಂಡರಾದ ನಗರಸಭಾ ಸದಸ್ಯ ರಾಕೇಶ್, ಎಸ್‌ಎಸ್‌ಎಲ್‌ವಿ ಸ್ಟೋರ್‍ಸ್‌ನ ಶ್ರೀನಾಥ್ ಮತ್ತಿತರರು ಇದ್ದರು.