ಮಾರಿಕಾಂಬಾ ದೇವಿಯ ದರ್ಶನಕ್ಕೆ ಜನಸಾಗರ

KannadaprabhaNewsNetwork |  
Published : Sep 27, 2025, 12:01 AM IST
26ಎಸ್.ಆರ್‌.ಎಸ್‌7ಪೊಟೋ1 (ನಗರದ ಶ್ರೀ ಮಾರಿಕಾಂಬಾ ದೇವಿಯ ದರ್ಶನಕ್ಕೆ ಶುಕ್ರವಾರ ಹತ್ತಾರು ಸಾವಿರ ಭಕ್ತರು ಆಗಮಿಸಿ ದರ್ಶನ ಪಡೆದರು.)26ಎಸ್.ಆರ್‌.ಎಸ್‌7ಪೊಟೋ2 (ದೇವಿಯನ್ನು ಕಣ್ತುಂಬಿಕೊಂಡು ಇಷ್ಟಾರ್ಥ ಸಿದ್ಧಿಗೆ ಮೊರೆಯಿಡಲು ತಂಡೋಪತಂಡವಾಗಿ ಆಗಮಿಸಿದರು.) | Kannada Prabha

ಸಾರಾಂಶ

ಶಿರಸಿ ಶ್ರೀ ಮಾರಿಕಾಂಬಾ ದೇವಿಯ ದರ್ಶನಕ್ಕೆ ಶುಕ್ರವಾರ ಹತ್ತಾರು ಸಾವಿರ ಭಕ್ತರು ಆಗಮಿಸಿ ದರ್ಶನ ಪಡೆದರು. ಅಂದಾಜಿನ ಪ್ರಕಾರ ದರ್ಶನಕ್ಕೆ 20 ಸಾವಿರ ಭಕ್ತರು ಆಗಮಿಸಿರಬಹುದು ಎಂಬ ಮಾಹಿತಿಯಿದೆ.

ಶಿರಸಿ: ಬೇಡಿದ ವರವನ್ನು ದಯಮಾಲಿಸುವ ಜಗನ್ಮಾತೆ ನಗರದ ಶ್ರೀ ಮಾರಿಕಾಂಬಾ ದೇವಿಯ ದರ್ಶನಕ್ಕೆ ಶುಕ್ರವಾರ ಹತ್ತಾರು ಸಾವಿರ ಭಕ್ತರು ಆಗಮಿಸಿ ದರ್ಶನ ಪಡೆದರು. ನವರಾತ್ರಿಯ ಸಂದರ್ಭದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದು ದೇಗುಲದ ಇತಿಹಾಸದಲ್ಲೇ ದಾಖಲೆ ಎನ್ನುವ ಮಾತುಗಳು ಕೇಳಿಬಂದವು.

ಲಲಿತಾ ಪಂಚಮಿಯ ದಿನವಾದ ನವರಾತ್ರಿಯ ಐದನೇ ದಿನ ಶುಕ್ರವಾರ ದೇವಿಯ ವಾರ. ಹೀಗಾಗಿ ಭಕ್ತರು ದೇವಿಯನ್ನು ಕಣ್ತುಂಬಿಕೊಂಡು ಇಷ್ಟಾರ್ಥ ಸಿದ್ಧಿಗೆ ಮೊರೆಯಿಡಲು ತಂಡೋಪತಂಡವಾಗಿ ಆಗಮಿಸಿದರು. ಅಂದಾಜಿನ ಪ್ರಕಾರ ದರ್ಶನಕ್ಕೆ 20 ಸಾವಿರ ಭಕ್ತರು ಆಗಮಿಸಿರಬಹುದು ಎಂಬ ಮಾಹಿತಿಯಿದೆ. ಇನ್ನು ಮಧ್ಯಾಹ್ನ ಅನ್ನಪ್ರಸಾದವನ್ನು ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಸ್ವೀಕರಿಸಿದರು. ದರ್ಶನ ಹಾಗೂ ಅನ್ನಪ್ರಸಾದಕ್ಕೆ ಸರತಿಯ ಸಾಲೇ ಕಂಡಬಂತು. ಶಾಲೆಗಳಿಗೆ ರಜೆ ಇರುವುದರಿಂದ ದೂರದೂರುಗಳಿಂದ ಸಹಸ್ರಸಹಸ್ರ ಸಂಖ್ಯೆಯಲ್ಲಿ ಭಕ್ತರು ತಮ್ಮ ಮಕ್ಕಳೊಂದಿಗೆ ಆಗಮಿಸಿದರು. ಇನ್ನು ದೇವಸ್ಥಾನದ ಸಭಾಮಂಟಪದಲ್ಲಿ ನವರಾತ್ರಿಯ ವಿವಿಧ ಸ್ಪರ್ಧೆಗಳು ತುರುಸಿನಿಂದ ನಡೆದವು.

ಹಿರಿಯ ಚಲನಚಿತ್ರ ಕಲಾವಿದ ಶಿವರಾಜಕುಮಾರ, ಅವರ ಪತ್ನಿ ಗೀತಾ ಶಿವರಾಜಕುಮಾರ, ಮಾಜಿ ಸಚಿವ, ಶಾಸಕ ಸುನೀಲಕುಮಾರ ಸೇರಿ ಹಲವರು ದೇವಿಯ ದರ್ಶನ ಪಡೆದರು.

ಸೆ. 27ರಂದು ಬೆಳಗ್ಗೆ ಧ್ಯಾನಮಾಲಿಕೆ ಸ್ಪರ್ಧೆ ಹಾಗೂ ಸಂಜೆ 10ನೇ ವರ್ಗದ ವಿಭಾಗದವರಿಗೆ ಭಗವದ್ಗೀತೆ ಶ್ಲೋಕ ಕಂಠಪಾಠ ಸ್ಪರ್ಧೆ ನಡೆಯಲಿದೆ. ಆನಂತರ ಸುಮಿತ್ರಾನಂದ ಬೆಂಗಳೂರು ಕೀರ್ತನೆ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ.

ಸ್ವರ್ಣವಲ್ಲಿ ಮಠದಲ್ಲಿ ಶರನ್ನವರಾತ್ರಿ ಉತ್ಸವ: ಶರನ್ನವರಾತ್ರಿ ಉತ್ಸವದ ಅಂಗವಾಗಿ ಸ್ವರ್ಣವಲ್ಲೀಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಬ್ರಾಹ್ಮೀಮುಹೂರ್ತದಲ್ಲಿ ಮತ್ತು ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾಯಂಕಾಲ ಶ್ರೀಚಕ್ರಾರ್ಚನೆಯನ್ನು ಹಾಗೂ ಶ್ರೀದೇವಿಯ ಮತ್ತು ಶಾರದಾ ಪೂಜೆಗೈದರು.ಗಣಪತಿ ಪೂಜೆ, ಪಂಚಾಮೃತ ಅಭಿಷೇಕ, ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ, ದೇವಿ ಭಾಗವತ, ಅಧ್ಯಾತ್ಮ ರಾಮಾಯಣ, ಪುರಾಣ, ಶತರುದ್ರ, ಬ್ರಹ್ಮಾಸ್ತ್ರ ಜಪ, ಚಂಡಿ ಪಾರಾಯಣ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ವೈದಿಕರಿಂದ ನೆರವೇರಿದವು. ಹೊನ್ನಾವರ ಶ್ರೀ ರಾಮಕ್ಷತ್ರಿಯ ಸಂಘದ ಶಿಷ್ಯರು ಹಾಗೂ ವೈಯಕ್ತಿಕ ಸೇವಾಕರ್ತರು ಶ್ರೀ ದೇವಿಯ ಸನ್ನಿಧಿಯಲ್ಲಿ ಸೇವೆಯನ್ನು ಸಲ್ಲಿಸಿ, ಶ್ರೀಗಳಿಂದ ತೀರ್ಥ, ಆಶೀರ್ವಾದ, ಮಂತ್ರಾಕ್ಷತೆ ಪಡೆದರು.ಸಾಯಂಕಾಲ ನಡೆದ ಶರನ್ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲೀಯ ಶ್ರೀ ಮಾತೃಮಂಡಳಿ ಮತ್ತು ಮಾತೃವೃಂದ ಅವರಿಂದ ಭಜನೆ, ಸ್ಮಿತಾ ಹೆಗಡೆ ಕುಂಟೇಮನೆ ಅವರಿಂದ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮ ನೆರವೇರಿತು. ಪ್ರಕಾಶ ಹೆಗಡೆ ಯಡಳ್ಳಿ ಹಾರ್ಮೋನಿಯಂ ಮತ್ತು ಮಂಜುನಾಥ ಮೋಟಿನಸರ ತಬಲಾದಲ್ಲಿ ಸಹಕರಿಸಿದರು. ಉಷಾ ಭಟ್ಟ ಸೂರಿಮನೆ ಬೆಂಗಳೂರು ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಕಲಾವಿದರಿಗೆ ಪ್ರಮಾಣಪತ್ರ, ಸ್ಮರಣಿಕೆ ಮತ್ತು ಸುವರ್ಣಮಂತ್ರಾಕ್ಷತೆಯನ್ನು ನೀಡಲಾಯಿತು. ಆರ್.ಎನ್. ಭಟ್ಟ ಸುಗಾವಿ ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ಹತ್ತು ವರ್ಷವಾದ್ರೂ ನೇಕಾರರ ಮನೆಗಳಿಗಿಲ್ಲ ಮುಕ್ತಿ
ಭೀಮಾನದಿ ನೀರಿನ ಹರಿವು ಮತ್ತೆ ಏರಿಕೆ