ಕನ್ನಡಪ್ರಭ ವಾರ್ತೆ ಮದ್ದೂರು
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾಗಿದ್ದ ಅನುದಾನವನ್ನು ಸರಿಯಾಗಿ ನೀಡುತ್ತಿಲ್ಲ. ರಾಜ್ಯದ ಸಂಸದರು, ಸಚಿವರು ತಮ್ಮ ಜವಾಬ್ದಾರಿ ಮರೆತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ಕೊಪ್ಪದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ಬಾರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ 3000 ಕೋಟಿಯಷ್ಟು ಅನುದಾನವನ್ನು ರಾಜ್ಯಕ್ಕೆ ತಂದಿತು. ರಾಜ್ಯದಿಂದ ಆರಿಸಿ ಕಳಿಸಿದ ಸಂಸದರು ಕೇಂದ್ರದ ಕ್ಯಾಬಿನೆಟ್ ಚರ್ಚೆಯಲ್ಲಿ ಅನುದಾನ ಕೇಳದೆ ಸಂಬಂಧವಿಲ್ಲವಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದ ಸಂಸದರು ಸರ್ಕಾರದ ವಿರುದ್ಧ ಮಾತ್ರ ಮಾತನಾಡಲು ಮುಂದೆ ಬರುತ್ತಾರೆ. ಪ್ರಧಾನಿ ಬಳಿ ಅನುದಾನ ಕೇಳುವ ಧೈರ್ಯ ಯಾರಿಗೂ ಇಲ್ಲ. ಇವರಿಗೆ ಮರ್ಯಾದೆ ಇಲ್ಲ. ಕೇಂದ್ರ ಮಾಡಬೇಕಾದ ಅಭಿವೃದ್ಧಿ ಕಾರ್ಯಗಳನ್ನು ರಾಜ್ಯ ಸರ್ಕಾರ ಜನರ ಹಿತಕ್ಕಾಗಿ ಮಾಡುತ್ತಿದೆ. ನಮ್ಮ ಜಿಲ್ಲೆಯ ಅಧಿಕಾರಿಗಳು ಜನರ ಅಭಿವೃದ್ಧಿಗಾಗಿ ಸಾಕಷ್ಟು ಪ್ರಾಮಾಣಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.ನಾವು ಎಷ್ಟೇ ಪ್ರಾಮಾಣಿಕವಾಗಿ ಜನರ ಸಮಸ್ಯೆ ಆಲಿಸಿ ಪರಿಹರಿಸುವ ಕೆಲಸ ಮಾಡಿದರೂ ಕೆಲವರಿಗೆ ತೃಪ್ತಿಯೇ ಇಲ್ಲ. ಕಳೆದ ಬಾರಿ ಸರ್ಕಾರ ಕಳೆದ ಐದು ವರ್ಷದಲ್ಲಿ ಮಾಡಿದ ಅಭಿವೃದ್ಧಿ ಕೆಲಸ ಮತ್ತು ನಮ್ಮ ಸರ್ಕಾರ ಬಂದ ಎರಡೂವರೆ ವರ್ಷದಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕೆಲಸಗಳನ್ನು ಅವಲೋಕಿಸಿ ನೋಡಿ ಯಾರೂ ಎಷ್ಟು ಕೆಲಸ ಮಾಡಿದ್ದಾರೆ ಎಂಬುದರ ಬಗ್ಗೆ ನಿಮಗೆ ಸ್ಪಷ್ಟತೆ ದೊರೆಯುತ್ತದೆ ಎಂದರು.
2018ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಸ್ಥಾನ ಪಡೆದ ಕುಮಾರಸ್ವಾಮಿ ಅವರು ರೈತರ ಸಾಲವನ್ನು ಮನ್ನಾ ಘೋಷಣೆ ಮಾಡಿದರೂ ಇಂದಿಗೂ ಎಷ್ಟೋ ರೈತರ ಸಾಲ ಮನ್ನವಾಗಿಲ್ಲ. ಅವರು ಮಾಡಿದ ಸಾಲ ಮನ್ನದ ಮೊತ್ತವನ್ನು ನಮ್ಮ ಸರ್ಕಾರ ಪಾವತಿಸುತ್ತಿದೆ. ಇಲ್ಲಿಯವರೆಗೆ 480 ಕೋಟಿಯಷ್ಟು ಸಾಲ ಪಾವತಿಸಿದೆ. ಇನ್ನೂ 400 ರಿಂದ 500 ಕೋಟಿ ಬಾಕಿ ಉಳಿದಿದೆ ಎಂದರು.ನಾನು ನಾಲ್ಕು ಬಾರಿ ಎಂಎಲ್‌ಎ ಹಾಗೂ ಒಂದು ಬಾರಿ ಎಂಪಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನಾಗಮಂಗಲ ಕ್ಷೇತ್ರದಿಂದ 2018ರಲ್ಲಿ ಸ್ಪರ್ಧಿಸಿದ್ದ ನನ್ನನ್ನು ಜನರು ಸರಿಸುಮಾರು 50 ಸಾವಿರ ಮತಗಳ ಅಂತರದಿಂದ ಸೋಲಿಸಿದರು. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದರೂ ಕೈ ಹಿಡಿಯಲಿಲ್ಲ ಎಂದು ಭಾವುಕರಾದರು.
ಕೋಡಿ ಶ್ರೀಗಳ ಹೇಳಿಕೆ ವೈಯಕ್ತಿಕ; ಉತ್ತರ ನೀಡಲ್ಲ: ಚಲುವರಾಯಸ್ವಾಮಿಮದ್ದೂರು:
ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಕೋಡಿ ಮಠದ ಶ್ರೀಗಳು ನೀಡಿರುವ ಹೇಳಿಕೆ ಅವರ ವೈಯಕ್ತಿಕ. ಈ ಬಗ್ಗೆ ನಾನು ಉತ್ತರ ನೀಡಲ್ಲ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಸೇರಿದಂತೆ ರಾಜಕೀಯವಾಗಿ ಮಠಾಧೀಶರು ಏನೇ ಹೇಳಿಕೆ ನೀಡಿದರೂ ಅದು ಅವರ ಧರ್ಮ ಪೀಠಗಳಲ್ಲಿನ ಹೇಳಿಕೆ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದರು.
ಈಗಾಗಲೇ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಬ್ರೇಕ್ ಪಾಸ್ಟ್ ಮೂಲಕ ಸಿಎಂ ಬದಲಾವಣೆ ಕುರಿತಂತೆ ಮಾಧ್ಯಮದವರಿಗೆ ಉತ್ತರ ಕೊಟ್ಟಿದ್ದಾರೆ. ಸರ್ಕಾರ ಮಟ್ಟದಲ್ಲಿ ಏನೇ ಬದಲಾವಣೆಯಾದರೂ ಹೈಕಮಾಂಡ್ ತೀರ್ಮಾನಕ್ಕೆ ಸಚಿವರು, ಶಾಸಕರು ಬದ್ಧರಾಗಿರುತ್ತಾರೆ. ಈ ಬಗ್ಗೆ ಸಿಎಂ, ಡಿಸಿಎಂ ಸ್ಪಷ್ಟನೆ ನೀಡಿದ್ದಾರೆ. ಬೇರೆಯವರ ಹೇಳಿಕೆ ಅವರ ವೈಯಕ್ತಿಕ ಎಂದರು.ಅಧಿಕಾರ ಶಾಶ್ವತವಲ್ಲ ಎಂದು ಹೇಳಿರುವುದು ರಾಜಕೀಯ ವೈರಾಗ್ಯವಲ್ಲ. ಜನರಿಗೆ ಎಷ್ಟೇ ಸಹಾಯ ಮಾಡಿದರೂ ನೆನೆಯಲ್ಲ. ಈ ಬಗ್ಗೆ ಅಸಮಾಧಾನವಿಲ್ಲ ಎಂದ ಸಚಿವರು, ರಾಜ್ಯದ ಅಭಿವೃದ್ಧಿಯನ್ನು ಕೇಂದ್ರವೇ ಮಾಡುತ್ತಿದೆ. ರಾಜ್ಯ ಸರ್ಕಾರ ಯಾವುದೇ ಕೆಲಸ ಮಾಡುತ್ತಿಲ್ಲ. ಅವರೇ ರಾಜ್ಯಕ್ಕೆ ಅನುದಾನ ಕೊಡಿಸಲಿ ಎಂದು ಬಿಜೆಪಿ- ಜೆಡಿಎಸ್ ನವರ ಹೇಳಿಕೆ, ಪ್ರತಿಭಟನೆಗೆ ತಿರುಗೇಟು ನೀಡಿದರು.