ಕುಕನೂರು: ಶಬರಿಮಲೈ ಅಯ್ಯಪ್ಪಸ್ವಾಮಿ ದೇವರ ದರ್ಶನ ಪಡೆದು ಮರಳಿ ಊರಿಗೆ ಬರುತ್ತಿದ್ದ ತಾಲೂಕಿನ ಮಾಲಾಧಾರಿಗಳು ದಾರಿ ಮಧ್ಯೆ ಸಂಭವಿಸಿದ ರಸ್ತೆ ಅವಘಾತದಲ್ಲಿ ಓರ್ವ ಬಾಲಕಿ ಸೇರಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಶುಕ್ರವಾರ ಬೆಳಗ್ಗೆ ತುಮಕೂರಿನಲ್ಲಿ ನಿಂತ ಲಾರಿಗೆ ಅಯ್ಯಪ್ಪ ಭಕ್ತರ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ನಾಲ್ವರು ಮೃತಪಟ್ಟಿದ್ದಾರೆ.
ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳುವ ಮುನ್ನ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ಬಡಿಸಿದ್ದ 1ನೇ ತರಗತಿಯ ಏಳು ವರ್ಷದ ಬಾಲಕಿ ಸಾಕ್ಷಿ ಸಹ ಸಾವನ್ನಪ್ಪಿರುವುದು ಇಡೀ ಕುಕನೂರು ಕಂಬನಿ ಮಿಡಿಯುವಂತೆ ಮಾಡಿದೆ. ''''ದೇವರು ಆ ಎಳೆ ಜೀವ ಯಾಕ್ ಕರಕೊಂಡ'''', ''''ದೇವರು ಕ್ರೂರಿ'''' ಎಂದು ಹೆತ್ತ ಕರುಳು ಹಾಗೂ ಕುಟುಂಬಸ್ಥರು ದೇವರಿಗೆ ಹಿಡಿಶಾಪ ಹಾಕುತ್ತಿದ್ದರು.ಮಗಳು ಸಾಕ್ಷಿಯೊಂದಿಗೆ ತಂದೆ ಹುಲುಗಪ್ಪ ಅಯ್ಯಪ್ಪಸ್ವಾಮಿಗೆ ತೆರಳಿದ್ದ, ಮಗಳ ಸಾವನ್ನು ಕಣ್ಣಾರೆ ಕಂಡು ತಾನೂ ಗಂಭೀರ ಗಾಯಗಳಿಂದ ಬಳಲುತ್ತಿದ್ದಾನೆ. ಇತ್ತ ಸಾಕ್ಷಿ ತಾಯಿ ನನ್ನ ಮಗಳು ನನಗೆ ಬೇಕು ಎಂದು ಕಣ್ಣೀರು ಹಾಕುತ್ತಿದ್ದಳು.
ಕೂಲಿಕಾರ್ಮಿಕರು:ಪಟ್ಟಣದಿಂದ ಅಯ್ಯಪ್ಪಸ್ವಾಮಿ ದೇವರ ದರ್ಶನಕ್ಕೆ ತೆರಳಿದ್ದ ಭಕ್ತಾದಿಗಳು ಕೂಲಿಕಾರ್ಮಿಕರಾಗಿದ್ದರು. ಗಾರೆ, ಬಾರ್ ಬೆಂಡಿಂಗ್, ಬಸ್ ಚಾಲಕಾಗಿ ಕೆಲಸ ಮಾಡುತ್ತಿದ್ದರು. ಇವರ ದುಡಿಮೆಯನ್ನೇ ನಂಬಿರುವ ಕುಟುಂಬಗಳ ನೋವು ಹೇಳತೀರದಾಗಿದೆ.
ಗಾಂಧಿ ನಗರದಲ್ಲಿರುವ ಸಾಕ್ಷಿ ಹುಲಗಪ್ಪ ಮತ್ತು ಮಾರುತಿ ತೊಂಡಿಹಾಳ, ೧ನೇ ವಾರ್ಡಿನ ವೆಂಕಟೇಶ ಘಾಟಿ ಮತ್ತು ನಿಟ್ಟಾಲಿ ಗ್ರಾಮದ ಗವಿಸಿದ್ದಪ್ಪರೆಡ್ಡಿ ಮನೆಗಳ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.