ಕೊಪ್ಪಳ: ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್‌ಗೇಟ್ ಅಳವಡಿಸುವ ಕಾರ್ಯ ಡಿ. 20ರಿಂದ ಆರಂಭವಾಗಬೇಕು ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತುಂಗಭದ್ರಾ ಜಲಾಶಯವು ನಮ್ಮ ಭಾಗದ ಲಕ್ಷಾಂತರ ರೈತರ ಜೀವನಾಡಿಯಾಗಿದ್ದು, ಪ್ರಸ್ತುತ ಹಳೆಯದಾಗಿರುವ ಜಲಾಶಯದ ಎಲ್ಲ 33 ಕ್ರಸ್ಟ್ ಗೇಟ್ ಬದಲಾಯಿಸಲು ₹52 ಕೋಟಿ ವೆಚ್ಚದಲ್ಲಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಅದರಂತೆ ಪ್ರಸ್ತುತ ಕ್ರಸ್ಟ್‌ಗೇಟ್ ಕಳಚುವುದು ಮತ್ತು ಇತರ ಕೆಲವು ಕಾರ್ಯ ತ್ವರಿತವಾಗಿ ಕೈಗೊಳ್ಳಬೇಕು. ನೂತನ ಕ್ರಸ್ಟ್‌ಗೇಟ್ ಅಳವಡಿಸುವ ಕಾರ್ಯ ಡಿ. 20ರಿಂದ ಆರಂಭಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಮತ್ತು ಈ ಕಾಮಗಾರಿಯು ಕಡ್ಡಾಯವಾಗಿ ಟೈಮ್ ಬಾಂಡ್ ಒಳಗೆ ಪೂರ್ಣಗೊಳ್ಳಬೇಕೆಂದು ಸೂಚನೆ ನೀಡಿದರು.
ನಮ್ಮ ರೈತರು ಎರಡನೇ ಬೆಳೆಗೆ ನೀರನ್ನು ತ್ಯಾಗ ಮಾಡಿದ್ದಾರೆ. ಇದನ್ನು ನಾವೆಲ್ಲರೂ ಅರಿತುಕೊಂಡ ಕೆಲಸ ಮಾಡಬೇಕು. ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಸೇರಿ ಎಲ್ಲ 33 ಕ್ರಸ್ಟ್‌ಗೇಟ್ ಬದಲಾಯಿಸುವುದಾಗಿ ರೈತರಿಗೆ ಮಾತು ನೀಡಿದ್ದು, ಅದನ್ನು ಉಳಿಸಿಕೊಳ್ಳಬೇಕಿದೆ. 2026ರ ಜೂನ್ ತಿಂಗಳಲ್ಲಿ ಜಲಾಶಯದಲ್ಲಿ ನೀರು ಸಂಗ್ರಹವಾಗುತ್ತದೆ. ಮುಂಗಾರು ಬೆಳೆಗಳಿಗೆ ನೀರು ಒದಗಿಸಲು ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಹಾಗಾಗಿ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಅಳವಡಿಸುವ ಕಾರ್ಯ ಮೇ ತಿಂಗಳೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಲು ಗುತ್ತಿಗೆದಾರರು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಂಬಂಧಿಸಿದಂತೆ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು. ಗೇಟ್ ಅಳವಡಿಸುವ ಕಾರ್ಯ ನಡೆಯುವ ಸ್ಥಳಕ್ಕೆ ಯಾರನ್ನೂ ಬಿಡಬಾರದು. ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗದಂತೆ ಕುಡಿಯುವ ನೀರು ಪೂರೈಕೆ ಸಮರ್ಪಕವಾಗಿ ಮಾಡಬೇಕು ಎಂದರು.ಕನೀನಿನಿ ಮುನಿರಾಬಾದ್ ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಶ್ರೀನಿವಾಸ ಬಿ. ಮಲ್ಲಿಗವಾಡ ಹಾಗೂ ಹೊಸಪೇಟೆ ಟಿಬಿ ಡ್ಯಾಮಿನ ಟಿಬಿ ಬೋರ್ಡ್ ಅಧೀಕ್ಷಕ ಅಭಿಯಂತರ ಎಸ್. ನಾರಾಯಣ ನಾಯಕ ಸಚಿವರಿಗೆ ಕಾಮಗಾರಿ ಕಾರ್ಯಗತ ಮಾಡುವ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಮುನಿರಾಬಾದ್ ಕೇಂದ್ರ ವಲಯದ ಕಾರ್ಯಪಾಲಕ ಅಭಿಯಂತರ ಪ್ರೀತಿ ಪತ್ತಾರ, ಟಿಬಿ ಬೋರ್ಡ್ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ, ವಡ್ಡರ ಹಟ್ಟಿ ವಿಭಾಗದ ಕಾರ್ಯಪಾಲಕ ಅಭಿಯಂತರ ಎಂ.ಎಸ್. ಗೋಡೆಕರ್, ಮುನಿರಾಬಾದ್ ವಲಯದ ತಾಂತ್ರಿಕ ಸಹಾಯಕ ಯಲ್ಲಪ್ಪ, ವಿನಾಯಕ ಬಿ., ಬಸಪ್ಪ ಜಾನಕರ್, ಲಿಂಗರಾಜ್ ಹಾಗೂ ರಾಘವೇಂದ್ರ, ಸಹಾಯಕ ಕಾರ್ಯಪಾಲಕ ಅಭಿಯಂತರ ಧರಂರಾಜ್, ಸಹಾಯಕ ಎಂಜಿನಿಯರ್ ಹುಲಿರಾಜ್ ಮತ್ತು ಕಿರಣ ಉಪಸ್ಥಿತರಿದ್ದರು.