ಹೊಸಪೇಟೆ: ನಗರದಲ್ಲಿ ಮತದಾನ ಜಾಗೃತಿ ಜಾಥಾ ನಡೆಸಲು ಕರೆ ತಂದಿದ್ದ ಮಂಗಳಮುಖಿಯರು, ನಮಗೇನು ಸೌಲಭ್ಯ ಕೊಟ್ಟಿದ್ದೀರಿ ಅಂತ ಜಾಗೃತಿ ಮೂಡಿಸಬೇಕು? ನಿಮಗೆ ಬೇಕಾದಾಗ ಮಾತ್ರ ನಮ್ಮನ್ನು ಕರೆದು ನಮ್ಮ ಕಷ್ಟಗಳಿಗೆ ಸ್ಪಂದಿಸದೇ ನಿರ್ಲಕ್ಷಿಸುತ್ತೀರಿ ಎಂದು ದೂರಿ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳದೇ ವಾಪಸಾದ ಪ್ರಸಂಗ ಗುರುವಾರ ನಡೆಯಿತು.
ನಮ್ಮ ಜೀವನದ ಬಗ್ಗೆ ಯಾರಿಗೂ ಚಿಂತೆ ಇಲ್ಲ. ತಲೆ ಮೇಲೆ ಸರಿಯಾದ ಸೂರಿಲ್ಲ. ಚಪ್ಪರದ ಮನೆಗಳಲ್ಲಿ ವಾಸಿಸುತ್ತಿದ್ದೇವೆ. ರೇಷನ್ ಕಾರ್ಡ್ ಕೊಟ್ಟರೆ ಹೊಟ್ಟೆಗೆ ಅನ್ನ ಸಿಗುತ್ತದೆ. ಯಾರೂ ಮನೆ ಬಾಡಿಗೆ ಕೊಡುತ್ತಿಲ್ಲ. ಹಾಗಾಗಿ ಮನೆ ನಿರ್ಮಿಸಿ, ರೇಷನ್ ಕಾರ್ಡ್ ಕೊಟ್ಟು ಗೌರವಯುತ ಜೀವನ ನಡೆಸಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ನಮಗೆ ನೀಡಿರುವ ಹಕ್ಕು. ನಾವು ನಮ್ಮ ಹಕ್ಕು ಚಲಾಯಿಸುತ್ತೇವೆ. ಆದರೆ, ನಮ್ಮನ್ನು ಬಳಸಿಕೊಂಡು ಕೈ ಬಿಡುವ ಇಲಾಖೆಗಳ ಕೆಲಸಕ್ಕೆ ಹೋಗಲ್ಲ ಎಂದರು.ಮಂಗಳಮುಖಿಯರಾದ ಸುಧಾ, ಮಂಜು, ಶಿವಾನಿ, ಲಕ್ಷ್ಮೀ, ಶೃತಿ ಮತ್ತಿತರರಿದ್ದರು.