ಮಠಾಧೀಶರು, ಲಕ್ಷಾಂತರ ಜನರ ಸಹಭಾಗಿತ್ವಕ್ಕೆ ಪೇಜಾವರ ಶ್ರೀ ಸಂತಸ
ಕನ್ನಡಪ್ರಭ ವಾರ್ತೆ ಉಡುಪಿಗೋವುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಭಗವಂತನಿಗೆ ಮೊರೆ ಹೋಗುವ, ವಿಷ್ಣು ಸಹಸ್ರನಾಮ ಹೋಮ ಮತ್ತು ಶಿವ ಪಂಚಾಕ್ಷರಿ ಹವನ ನಡೆಸುವ ಒಂದು ವಾರದ ಅಭಿಯಾನ ಬುಧವಾರ ಸಂಪನ್ನಗೊಂಡಿತು.
ಗೋವುಗಳ ಮೇಲೆ ನಡೆಯುತ್ತಿರುವ ಕ್ರೌರ್ಯ ಅಂತ್ಯ ಕಾಣಲು ಒಂದು ವಾರ ಪರ್ಯಂತ ವಿಷ್ಣು ಸಹಸ್ರನಾಮಪಾರಾಯಣ ಮತ್ತು ಶಿವ ಪಂಚಾಕ್ಷರ ಜಪಾನುಷ್ಠಾನಕ್ಕೆ ಪೇಜಾವರ ಶ್ರೀಗಳು ಕರೆ ನೀಡಿದ್ದರು.ಅಭಿಯಾನ ಸಮಾಪ್ತಿ ಹಿನ್ನೆಲೆಯಲ್ಲಿ ಬುಧವಾರ ಸುಮಾರು 27 ಕಡೆಗಳಲ್ಲಿ ವಿಷ್ಣು ಸಹಸ್ರನಾಮ ಹೋಮ ಮತ್ತು ಶಿವ ಪಂಚಾಕ್ಷರಿ ಹವನ ನಡೆಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಗಿದೆ.ಈ ಬಗ್ಗೆ ಸಂದೇಶ ನೀಡಿರುವ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ನಾಡಿನ 70ಕ್ಕೂ ಅಧಿಕ ಮಠಾಧೀಶರು, ಸಾಧು ಸಂತರು ಈ ಅಭಿಯಾನದಲ್ಲಿ ತಾವೂ ಮುಂದೆ ನಿಂತು ಜನರಿಗೆ ಕರೆ ನೀಡಿದ್ದರಿಂದ ಅಭಿಯಾನ ಬಹಳ ಚೆನ್ನಾಗಿ ನಡೆದಿದೆ. ಇದಕ್ಕಾಗಿ ಎಲ್ಲ ಮಠಾಧೀಶರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.ಶ್ರೀ ಮಠಕ್ಕೆ ಬಂದ ಮಾಹಿತಿಯಂತೆ ನಾಡಿನ 620 ಕಡೆಗಳಲ್ಲಿ ಒಂದು ವಾರದ ಪಾರಾಯಣ ಅಭಿಯಾನ ನಡೆದಿದೆ. ಕಳೆದ ಭಾನುವಾರ 117 ಕಡೆಗಳಲ್ಲಿ ಒಂದು ದಿನದ ಸಾಮೂಹಿಕ ಮಂತ್ರಾನುಷ್ಠಾನ ಮತ್ತು ಸಹಸ್ರಾರು ಮನೆಗಳಲ್ಲಿ ಭಕ್ತರು ವೈಯಕ್ತಿಕವಾಗಿ ಒಂದು ವಾರ ಪಾರಾಯಣ ಹಾಗೂ ಹಲವೆಡೆ ಬುಧವಾರ ಹೋಮ ನಡೆಸಿ ಸಮಾಪ್ತಿಗೊಳಿಸಿದ್ದಾರೆ. ಇನ್ನೂ ಹಲವೆಡೆ ಹೋಮ ನಡೆಯುವುದು ಬಾಕಿ ಇದ್ದು, ಅವರೂ ಮಾಡುವವರಿದ್ದಾರೆ. ಈ ಮಂತ್ರಾನುಷ್ಠಾನ ಅಭಿಯಾನದ ಫಲವಾಗಿ ದೇಶದ ಗೋವಂಶಕ್ಕೆ ಸುರಕ್ಷೆ, ಶ್ರೇಯಸ್ಸು ಹಾಗೂ ಭಾಗವಹಿಸಿದ ಸರ್ವರಿಗೂ ದೇವರ ಕೃಪೆ, ನಾಡಿನಲ್ಲಿ ಶಾಂತಿ ಸುಭಿಕ್ಷೆಯಾಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.