ಎಲ್ಲ ಇಲಾಖೆಗಳಲ್ಲೂ ಕನ್ನಡ ಕಡ್ಡಾಯ ಬಳಕೆಗೆ ತಾಕೀತು

KannadaprabhaNewsNetwork |  
Published : Jun 26, 2025, 01:32 AM ISTUpdated : Jun 26, 2025, 06:09 AM IST
ಶಾಲಿನಿ ರಜನೀಶ್‌ | Kannada Prabha

ಸಾರಾಂಶ

ಸರ್ಕಾರದ ಎಲ್ಲಾ ಇಲಾಖೆಗಳು ಆಡಳಿತದಲ್ಲಿ ಕಡ್ಡಾಯವಾಗಿ ಪೂರ್ಣ ಪ್ರಮಾಣದಲ್ಲಿ ಕನ್ನಡ ಬಳಸಬೇಕು. ಸರ್ಕಾರಿ ಕಚೇರಿಗಳ ನಾಮಫಲಕಗಳನ್ನು ಕನ್ನಡದಲ್ಲಿಯೇ ಪ್ರದರ್ಶಿಸಬೇಕು. ಈ ಸೂಚನೆ ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ   ಸುತ್ತೋಲೆ ಹೊರಡಿಸಿದ್ದಾರೆ.

  ಬೆಂಗಳೂರು :  ಸರ್ಕಾರದ ಎಲ್ಲಾ ಇಲಾಖೆಗಳು ಆಡಳಿತದಲ್ಲಿ ಕಡ್ಡಾಯವಾಗಿ ಪೂರ್ಣ ಪ್ರಮಾಣದಲ್ಲಿ ಕನ್ನಡ ಬಳಸಬೇಕು. ಸರ್ಕಾರಿ ಕಚೇರಿಗಳ ನಾಮಫಲಕಗಳನ್ನು ಕನ್ನಡದಲ್ಲಿಯೇ ಪ್ರದರ್ಶಿಸಬೇಕು. ಈ ಸೂಚನೆ ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಸುತ್ತೋಲೆ ಹೊರಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಆಡಳಿತ ನಡೆಸುವಂತೆ ಹಲವು ಬಾರಿ ಸುತ್ತೋಲೆ ಹೊರಡಿಸಿ ಸೂಚನೆ ನೀಡಿದ್ದರೂ ಪಾಲನೆಯಾಗುತ್ತಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ವರದಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳು ಆಡಳಿತದಲ್ಲಿ ಸಂಪೂರ್ಣ ಕನ್ನಡ ಬಳಕೆ ನಿಯಮ ಪಾಲಿಸಬೇಕು ಎಂದು ತಿಳಿಸಿದ್ದಾರೆ.

ಕನ್ನಡದಲ್ಲಿ ಬರುವ ಅರ್ಜಿ ಮತ್ತು ಪತ್ರಗಳಿಗೆ ಕಡ್ಡಾಯವಾಗಿ ಕನ್ನಡದಲ್ಲಿಯೇ ಉತ್ತರಿಸಬೇಕು. ವಿಧಾನ ಮಂಡಲದ ಕಾರ್ಯಕಲಾಪಗಳು, ಪತ್ರ ವ್ಯವಹಾರ, ಗಮನ ಸೆಳೆಯುವ ಸೂಚನೆ ಇತ್ಯಾದಿಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ಸಲ್ಲಿಸಬೇಕು. ನೇಮಕಾತಿ, ವರ್ಗಾವಣೆ ಮತ್ತು ರಜೆ ಮಂಜೂರಾತಿ ಇತರೆ ಎಲ್ಲಾ ಸರ್ಕಾರದ ಆದೇಶಗಳನ್ನು ಕನ್ನಡದಲ್ಲಿ ಹೊರಡಿಸುವಂತೆ ಸೂಚಿಸಿದ್ದಾರೆ.

ಕಚೇರಿಗಳಿಗೆ ಒದಗಿಸಿರುವ ಆಂಗ್ಲ ಭಾಷಾ ನಮೂನೆ, ದಾಖಲೆ ಪುಸ್ತಕ ಮುಂತಾದವುಗಳನ್ನು ಕನ್ನಡದಲ್ಲಿ ಭರ್ತಿ ಮಾಡಬೇಕು. ಆಂತರಿಕ ಪತ್ರ ವ್ಯವಹಾರ, ಕಡತದ ಟಿಪ್ಪಣಿ ಕನ್ನಡದಲ್ಲಿಯೇ ಇರಬೇಕು. ಕೇಂದ್ರ ಸರ್ಕಾರ, ಹೊರರಾಜ್ಯಗಳು ಮತ್ತು ನ್ಯಾಯಾಲಯಗಳ ಪತ್ರ ವ್ಯವಹಾರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಪತ್ರ ವ್ಯವಹಾರಗಳು ಕನ್ನಡದಲ್ಲಿಯೇ ಇರಬೇಕು. ಆಡಳಿತದಲ್ಲಿ ಭಾಷಾ ನೀತಿಯನ್ನು ಪೂರ್ಣ ಪ್ರಮಾಣದಲ್ಲಿ ಹಾಗೂ ಎಲ್ಲಾ ಹಂತಗಳಲ್ಲಿ ಜಾರಿಗೊಳಿಸುವುದು ಎಲ್ಲ ಅಧಿಕಾರಿಗಳ ನೌಕರರ ಕರ್ತವ್ಯ ಎಂದು ನಿರ್ದೇಶಿಸಲಾಗಿದೆ. ಈಗಾಗಲೇ ಸರ್ಕಾರ ನೀಡಿರುವ ಆದೇಶಗಳನ್ನು ಸರ್ಕಾರ, ನಿಗಮ, ಮಂಡಳಿ, ವಿಶ್ವವಿದ್ಯಾಲಯಗಳು, ಸ್ಥಳಿಯ ಸಂಸ್ಥೆಗಳು, ಅನುದಾನಿತ ಸಂಘ ಸಂಸ್ಥೆಗಳು, ಅಧಿಕಾರಿ, ನೌಕರರು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ತಿಳಿಸಿದ್ದಾರೆ.

PREV
Read more Articles on

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌