ಶಿವಮೊಗ್ಗ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖೆಯು ಜಿಲ್ಲಾ ಒಕ್ಕಲಿಗರ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಜೂ.27ರಂದು ಮಧ್ಯಾಹ್ನ 12ಕ್ಕೆ ಶರಾವತಿ ನಗರ ಬಡಾವಣೆಯಲ್ಲಿರುವ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಕಾರ್ಯಕ್ರಮ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ವಿಶ್ವವಿದ್ಯಾಲಯ, ಕೃಷಿ, ವೈದ್ಯಕೀಯ ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಮಾಡಿದ ಸಾಧಕರಿಗೆ ಅಭಿನಂದಿಸಲಾಗುವುದು ಎಂದರು.
ಬೈಕ್, ಕಾರುಗಳ ಜೊತೆಯಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಲಿದೆ. ಬಾಲರಾಜ್ ಅರಸ್ ವೃತ್ತದಿಂದ ಕುವೆಂಪು ರಂಗಮಂದಿರ ಅಲ್ಲಿಂದ ಶ್ರೀ ಆದಿಚುಂಚನಗಿರಿ ಸಮುದಾಯ ಭವನ ತಲುಪುವಂತೆ ಕಾರ್ಯಯೋಜನೆ ರೂಪಿಸಲಾಗಿದೆ. ಜಿಲ್ಲಾ ಒಕ್ಕಲಿಗರ ಸಂಘ, ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಒಕ್ಕೂಟ, ಜಿಲ್ಲಾ ಒಕ್ಕಲಿಗರ ಯುವ ವೇದಿಕೆ, ಉದ್ಯಮಿ ಒಕ್ಕಲಿಗ (ಎಫ್.ಸಿ.),ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾ ಘಟಕ, ತಾಲೂಕು ಒಕ್ಕಲಿಗರ ಸಂಘ, ಮಹಿಳಾ ಸಂಘಟನೆಗಳು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ ಬಿ.ಎ.ರಮೇಶ್ ಹೆಗಡೆ, ಗೋ ರಮೇಶ್ ಗೌಡ, ಶಂಕರ್, ಡಾ.ಶಾಂತಾ ಸುರೇಂದ್ರ, ಪ್ರತಿಮಾ ಡಾಕಪ್ಪಗೌಡ, ತಾಯಿಮನೆ ಸುದರ್ಶನ್, ಉದ್ಯಮಿ ರಾಕೇಶ್ ಗೌಡರು, ಎಂ. ಎ.ರಮೇಶ್ ಹೆಗಡೆ, ರಘುರಾಜ್, ಭಾರತಿ ರಾಮಕೃಷ್ಣ, ಶಶಿಕಲಾ ಪ್ರಶಾಂತ, ಗುರುರಾಜ್ ಗೌಡ, ರಘುಗೌಡ ಭೈರಾಪುರ ಶಿವಪ್ಪಗೌಡರು ಇದ್ದರು.