ಕನ್ನಡಪ್ರಭ ವಾರ್ತೆ ವಿಜಯಪುರ
ಬಬಲೇಶ್ವರ ಮತಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸಿಎಸ್ಆರ್ ಫಂಡ್‌ನಲ್ಲಿ ನಾನಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.ಬಬಲೇಶ್ವರ ತಾಲೂಕಿನ ನಿಡೋಣಿಯಲ್ಲಿ ಕೆ.ಆರ್.ಐ.ಡಿ.ಎಲ್. ವತಿಯಿಂದ ₹ 50 ಲಕ್ಷ ವೆಚ್ಚದಲ್ಲಿ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ಸಿಸಿ ರಸ್ತೆ ಕಾಮಗಾರಿ ಮತ್ತು ಪಿ.ಆರ್.ಇ.ಡಿ ವತಿಯಿಂದ ₹100 ಲಕ್ಷ ವೆಚ್ಚದಲ್ಲಿ ನಿಡೋಣಿ-ತಿಗಣಿ-ಬಿದರಿ ರಸ್ತೆ ಸುಧಾರಣೆ ಕಾಮಗಾರಿ ಹಾಗೂ ಶೇಗುಣಸಿ ಗ್ರಾಮದಲ್ಲಿ ಕೆ.ಆರ್.ಐ.ಡಿ.ಎಲ್. ವತಿಯಿಂದ ₹ 25 ಲಕ್ಷ ವೆಚ್ಚದಲ್ಲಿ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಸಚಿವ ಎಂ.ಬಿ.ಪಾಟೀಲ ಅವರ ದೂರದೃಷ್ಟಿಯ ಫಲವಾಗಿ ಬಬಲೇಶ್ವರ ಮತಕ್ಷೇತ್ರದಲ್ಲಿ ಈ ಬಾರಿ ಶೈಕ್ಷಣಿಕ ಕ್ರಾಂತಿ ಮಾಡಲಾಗುತ್ತಿದ್ದು, ₹100 ಕೋಟಿ ಸಿಎಸ್‌ಆರ್ ಫಂಡ್ ಬಳಸಿ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ. ಹೆಚ್ಚುವರಿಯಾಗಿ ಹೊಸ ಕೊಠಡಿಗಳ ನಿರ್ಮಾಣ, ಕೊಠಡಿಗಳ ಮಾಡಿ ಕುಡಿಯಲು ಶುದ್ಧ ನೀರು ಪೂರೈಕೆ, ಶೌಚಾಲಯ ವ್ಯವಸ್ಥೆ, ಆಟದ ಮೈದಾನ, ಶಾಲೆಗಳಿಗೆ ಕಂಪೌಂಡ್ ನಿರ್ಮಾಣಕ್ಕೆ ಈ ನಿಧಿಯನ್ನು ಬಳಸಲಾಗುತ್ತಿದೆ ಎಂದು ತಿಳಿಸಿದರು.
ನೀರಾವರಿ ಯೋಜನೆಗಳಿಂದಾಗಿ ಮತಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿದೆ. ಇಲ್ಲಿನ ಅಭಿವೃದ್ಧಿ ಕಂಡು ಬೇರೆ ಜಿಲ್ಲೆಗಳ ಜನರು ಇಲ್ಲಿ ಭೂಮಿ ಖರೀದಿಸಲು ಮುಂದಾಗುತ್ತಿದ್ದಾರೆ. ಇದರಿಂದ ರೈತರ ಜಮೀನಿಗೆ ಹೆಚ್ಚಿನ ಬೆಲೆ ಬಂದಿದ್ದು, ಇದು ರೈತರ ಜೀವನದಲ್ಲಿ ಆಗಿರುವ ಬದಲಾವಣೆಯ ಪ್ರತೀಕವಾಗಿದೆ. ಸೂರ್ಯ ಚಂದ್ರರು ಇರುವವರೆಗೆ ಈ ಭಾಗದ ಜಮೀನಿಗೆ ನೀರು ಸಿಗಲಿದ್ದು, ಮುಂದಿನ ಜನಾಂಗಕ್ಕೆ ಶಾಶ್ವತ ಬದುಕು ಕಟ್ಟಿಕೊಡುವ ಕೆಲಸ ಮಾಡಲಾಗಿದೆ. ನಮ್ಮ ಯೋಜನೆಗಳನ್ನು ಟೀಕಿಸುತ್ತಿದ್ದ ಜನರು ಈಗ ಅದೇ ಯೋಜನೆಗಳ ಫಲಾನುಭವಿಗಳಾಗಿ ಆರ್ಥಿಕವಾಗಿ ಸದೃಢರಾಗುತ್ತಿರುವುದು ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.ಈ ವೇಳೆ ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಕೆ.ಎಚ್.ಮುಂಬಾರಡ್ಡಿ, ಬಾಪುಗೌಡ ಪಾಟೀಲ ಶೇಗುಣಸಿ, ಪಿಕೆಪಿಎಸ್ ಅಧ್ಯಕ್ಷ ಬಿ.ಜಿ. ಬಿರಾದಾರ, ಶಂಕರಗೌಡ ಪೋಲಿಸ ಪಾಟೀಲ, ಪಿ.ಜಿ.ಕೋರಿ, ಅಣ್ಣಪ್ಪ ಮುಚ್ಚಂಡಿ, ಶೇಗುಣಸಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಗುಣದಾಳ, ಈರಪ್ಪ ಶಾಪೂರ, ಸಿದ್ದಪ್ಪ ಹೊಸಮನಿ, ದಾನಮ್ಮ ಜಿರಲಿ, ಕುಮಾರ ಬಾಡಗಿ, ಸೋಮಶೇಖರ ಕೋಟ್ಯಾಳ, ಜಾಫರ ಇನಾಮದಾರ, ಮಹೇಶ ಮಾಳಿ, ವೈ. ಎನ್. ಪಾಟೀಲ, ಚನ್ನಪ್ಪ ಕೊಪ್ಪದ, ವಿನಾಯಕ ಕೊಟ್ಟಲಗಿ, ನಿಂಗೊಂಡ ಬಿರಾದಾರ, ಅನೀಲ ಹಿರೇಮ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಶಾಂತ ಪೂಜಾರಿ, ಪಿ.ಆರ್.ಇ.ಡಿ.ಎ ಎಂಜಿನಿಯರ್ ರವಿ ಪವಾರ, ಮುಕ್ಕನ ನಾಯಕ, ಪಿಡಿಒ ಮುಜಾವರ ಮುಂತಾದವರು ಉಪಸ್ಥಿತರಿದ್ದರು.