ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರಿನಲ್ಲಿ 3.57 ಲಕ್ಷ ಮಂದಿ ಒಂದಕ್ಕಿಂತ ಹೆಚ್ಚು ಕಡೆ ಮತದಾನದ ಹಕ್ಕು ಹೊಂದಿರುವುದು ಪತ್ತೆಯಾಗಿದ್ದು, ಎಲ್ಲರಿಗೂ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಬಿಬಿಎಂಪಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಡಾ। ಆರ್.ಸೆಲ್ವಮಣಿ ತಿಳಿಸಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆ ವೇಳೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದಲ್ಲಿ 1.01 ಕೋಟಿ ಮತದಾರರಿದ್ದರು. ಈ ಪಟ್ಟಿಯಲ್ಲಿ 3,57,255 ಮಂದಿ ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಹೊಂದಿರುವುದನ್ನು ಇದೀಗ ಪತ್ತೆ ಮಾಡಲಾಗಿದೆ. ಈ ಎಲ್ಲರಿಗೂ ಈಗಾಗಲೇ ನೋಟಿಸ್ ಜಾರಿ ಮಾಡಿ, ಯಾವ ಮತಗಟ್ಟೆಯ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ಉಳಿಸಿಕೊಳ್ಳುವುದಕ್ಕೆ ಬಯಸುತ್ತೀರಾ ಎಂದು ಅಭಿಪ್ರಾಯ ಕೇಳಲಾಗಿದೆ. ಉತ್ತರಿಸಿದವರ ಹೆಸರನ್ನು ಅವರ ಆಯ್ಕೆಗೆ ಅನುಗುಣವಾಗಿ ಮತದಾರ ಪಟ್ಟಿಯಲ್ಲಿ ಹೆಸರು ಉಳಿಸಿ ಬೇರೆ ಮತಗಟ್ಟೆಯಲ್ಲಿನ ಪಟ್ಟಿಯಲ್ಲಿ ಇರುವ ಹೆಸರನ್ನು ತೆಗೆದು ಹಾಕಲಾಗುವುದು.
ಉತ್ತರ ನೀಡದವರಿಗೆ ನಿಯಮಾನುಸಾರ ಯಾವುದಾರೂ ಒಂದು ಮತಗಟ್ಟೆಯಲ್ಲಿ ಹೆಸರು ಉಳಿಸಿ, ಉಳಿದ ಮತಗಟ್ಟೆಯಲ್ಲಿ ಹೆಸರು ತೆಗೆದು ಹಾಕಲಾಗುವುದು ಎಂದು ಸ್ಪಷ್ಟಪಡಿಸಿದರು.ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಇದ್ದರು.3.22 ಲಕ್ಷ ಮಂದಿ ಹೊರ ಜಿಲ್ಲೆಯವರು
ಒಂದಕ್ಕಿಂತ ಹೆಚ್ಚು ಮತದಾನ ಹಕ್ಕು ಹೊಂದಿರುವವರ ಪೈಕಿ 3.22 ಲಕ್ಷ ಮಂದಿ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರದಲ್ಲಿನ ಮತದಾರ ಪಟ್ಟಿಯಲ್ಲಿ ಹೆಸರು ಹೊಂದಿದ್ದಾರೆ. ಉಳಿದ 11 ಸಾವಿರ ಮಂದಿ ನಗರದ ಒಂದೇ ವಿಧಾನಸಭಾ ಕ್ಷೇತ್ರದ ಬೇರೆ ಬೇರೆ ಮತಗಟ್ಟೆಯ ಪಟ್ಟಿಯಲ್ಲಿ ಹೆಸರು ಹೊಂದಿದ್ದಾರೆ. 23 ಸಾವಿರ ಮಂದಿ ನಗರದ ಬೇರೆ ಬೇರೆ ವಿಧಾನಸಭಾ ಕ್ಷೇತ್ರದ ಮತಗಟ್ಟೆಯ ಪಟ್ಟಿಯಲ್ಲಿ ಹೆಸರು ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು.ಮತಗಟ್ಟೆ ಸಂಖ್ಯೆ ಇಳಿಕೆ
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಗರದಲ್ಲಿ 8982 ಮತಗಟ್ಟೆ ಇದ್ದವು. ಈ ಪೈಕಿ ಕೆಲವು ಮತಗಟ್ಟೆಯಲ್ಲಿ ಕೇವಲ 250 ರಿಂದ 400 ಮಂದಿ ಮಾತ್ರ ಮತದಾರರು ಇದ್ದರು. ಹಾಗಾಗಿ, ಅಂತಹ 10 ಮತಗಟ್ಟೆಯಲ್ಲಿ ವಿಲೀನಗೊಳಿಸಲಾಗಿದ್ದು, ಮತಗಟ್ಟೆ ಸಂಖ್ಯೆಯನ್ನು 8972ಕ್ಕೆ ಇಳಿಕೆ ಮಾಡಲಾಗಿದೆ. ಈ ನಡುವೆ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಮತಗಟ್ಟೆಯಲ್ಲಿ 1950ಕ್ಕೂ ಅಧಿಕ ಮತದಾರರು ಇದ್ದರು. ಈ ಮತಗಟ್ಟೆಯನ್ನು ವಿಭಜಿಸಲಾಗಿದೆ ಎಂದು ಸೆಲ್ವಮಣಿ ತಿಳಿಸಿದರು.96 ಮತಗಟ್ಟೆ ಸ್ಥಳಾಂತರ
ನಗರದ 96 ಮತಗಟ್ಟೆಯಲ್ಲಿ ಮೂಲಸೌಕರ್ಯ ಸರಿಯಾಗಿಲ್ಲ. ಮತದಾನದ ವೇಳೆ ಸೂಕ್ತ ಸೌಲಭ್ಯಗಳ ವ್ಯವಸ್ಥೆ ಮಾಡುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ, 96 ಮತಗಟ್ಟೆಗಳನ್ನು ಸ್ಥಳಾಂತರ ಮಾಡಲಾಗಿದೆ. 59 ಮತಗಟ್ಟೆಗಳ ಕಟ್ಟಡ ಹೆಸರು ಬದಲಾವಣೆ ಆಗಿದೆ. ಈ ಬಗ್ಗೆ ಸ್ಥಳೀಯ ರಾಜಕೀಯ ಪಕ್ಷ ಮುಖಂಡರೊಂದಿಗೆ ಚರ್ಚೆ ಮಾಡಿ ಅಂತಿಮ ಪಡಿಸಲಾಗಿದೆ.29ಕ್ಕೆ ಕರಡು ಮತದಾರ ಪಟ್ಟಿ
ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು, ಅ.29ಕ್ಕೆ ಕರಡು ಮತದಾರ ಪಟ್ಟಿ ಬಿಡುಗಡೆ ಮಾಡಿ, ಆಕ್ಷೇಪಣೆ ಪಡೆದು ಜನವರಿಯಲ್ಲಿ ಅಂತಿಮ ಮತದಾರ ಪಟ್ಟಿ ಪ್ರಕಟಿಸಲಾಗುವುದು.ಕಳೆದ ಬಾರಿ ಮತದಾರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ಇರುವ ಕಾರಣ ಮರಣ ಹೊಂದಿರುವವರು ಹಾಗೂ ಸ್ಥಳಾಂತರಗೊಂಡ ಮತದಾರರ ಹೆಸರನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕಿರಲಿಲ್ಲ. ಇದೀಗ ಯಾವುದೇ ಚುನಾವಣೆ ಇಲ್ಲ. ಹಾಗಾಗಿ, ಕಟ್ಟುನಿಟ್ಟಾಗಿ ಪರಿಶೀಲಿಸಿ ಮರಣ ಹೊಂದಿರುವವರು ಹಾಗೂ ಸ್ಥಳಾಂತರಗೊಂಡ ಮತದಾರರ ಹೆಸರನ್ನು ತೆಗೆದು ಹಾಕುವುದಕ್ಕೆ ಸೂಚಿಸಲಾಗಿದೆ.
ಹಲವು ಕಡೆ ಮತದಾನ ಹಕ್ಕು ಹೊಂದಿದ ವಿವರನಗರದ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು 32,842 ಮತದಾರರು ಒಂದಕ್ಕಿಂತ ಹೆಚ್ಚು ಕಡೆ ಮತದಾನದ ಹಕ್ಕು ಹೊಂದಿದ್ದಾರೆ. ಉಳಿದಂತೆ ಆರ್ ಆರ್ ನಗರ 19,693, ಶಿವಾಜಿನಗರ 3,837, ಶಾಂತಿನಗರ 5,245, ಗಾಂಧಿನಗರ 6,710, ರಾಜಾಜಿನಗರ 5,139, ಚಾಮರಾಜಪೇಟೆ 8,405, ಚಿಕ್ಕಪೇಟೆ 6,948, ಕೆಆರ್‌ಪುರ 15,848, ಮಹಾಲಕ್ಷ್ಮಿಲೇಔಟ್ 11,718, ಮಲ್ಲೇಶ್ವರ 6,630, ಹೆಬ್ಬಾಳ 8,584, ಪುಲಕೇಶಿನಗರ 9,808, ಸರ್ವಜ್ಞನಗರ 9438, ಸಿವಿ ರಾಮನ್ ನಗರ 6,495, ಗೋವಿಂದರಾಜನಗರ 11,238, ವಿಜಯನಗರ 12,362, ಬಸವನಗುಡಿ 5,593, ಪದ್ಮನಾಭನಗರ 8,163, ಬಿಟಿಎಂ 7,396, ಜಯನಗರ 5,942, ಬೊಮ್ಮನಹಳ್ಳಿ 15,979, ಯಲಹಂಕ 21318, ಬ್ಯಾಟರಾಯನಪುರ 17,489,ದಾಸರಹಳ್ಳಿ 17,380, ಮಹದೇವಪುರ 24,529, ಬೆಂಗಳೂರು ದಕ್ಷಿಣ 31,325, ಆನೇಕಲ್ 21,201 ಮಂದಿ ಹಲವು ಕಡೆ ಮತದಾನದ ಹಕ್ಕು ಹೊಂದಿದ್ದಾರೆ.