ಬೆಂಗಳೂರು ಮೈಸೂರು ಮೂಲಸೌಕರ್ಯ ಕಾರಿಡಾರ್‌ (ಬಿಎಂಐಸಿ) ಯೋಜನೆಯನ್ನು ಮರು ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಮಹತ್ವದ ನಿರ್ದೇಶನ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಮೈಸೂರು ಮೂಲಸೌಕರ್ಯ ಕಾರಿಡಾರ್‌ (ಬಿಎಂಐಸಿ) ಯೋಜನೆಯನ್ನು ಮರು ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಮಹತ್ವದ ನಿರ್ದೇಶನ ನೀಡಿದೆ.

ಬಿಎಂಐಸಿ ಯೋಜನೆಗಾಗಿ ವಶಪಡಿಸಿಕೊಂಡು ತಮ್ಮ ಜಮೀನಿಗೆ ಪರಿಹಾರ ವಿತರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ಮಾರಪ್ಪ ಗಾರ್ಡನ್‌ ನಿವಾಸಿ ಚಂದ್ರಿಕಾ ಸಲ್ಲಿಸಿದ್ದ ತಕರಾರು ಅರ್ಜಿ ವಜಾಗೊಳಿಸಿದ ನ್ಯಾ. ಡಿ.ಕೆ. ಸಿಂಗ್‌ ಮತ್ತು ನ್ಯಾ. ಟಿ. ವೆಂಕಟೇಶ್‌ ನಾಯ್ಕ್‌ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

‘ಬಿಎಂಐಎಸಿ ಯೋಜನೆಯಡಿ ಯೋಜನಾ ನಿರ್ಮಾಣಕಾರರು ಫೆರಿಫೆರಲ್‌ (ಬಾಹ್ಯ) ರಸ್ತೆಗಳು ಮತ್ತು ಟೋಲ್ ಪ್ಲಾಜಾಗಳನ್ನು ನಿರ್ಮಿಸುವ ಮೂಲಕ ಭಾರಿ ಸುಂಕವನ್ನು ಸಂಗ್ರಹಿಸುತ್ತಿದ್ದಾರೆ. ಆದಾಗ್ಯೂ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮತ್ತು ಮೂಲಸೌಕರ್ಯ ಕಾರಿಡಾರ್ ಕೇವಲ ಕಾಗದಗಳಲ್ಲಿ ಮಾತ್ರ ಉಳಿದಿದೆ. ಯೋಜನೆ ನಿರ್ಮಾಣ ಮಾಡಬೇಕಿರುವವರು ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದಾರೆ. ಆದರೆ, ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ಮಾರ್ಗ ಇನ್ನೂ ಪೂರ್ಣ ಪ್ರಮಾಣದಲ್ಲಿ ನಿರ್ಮಿಸಿಲ್ಲ. ಭವಿಷ್ಯದಲ್ಲಿ ಅದನ್ನು ನಿರ್ಮಿಸುವ ಯಾವುದೇ ಸೂಚನೆಯಿಲ್ಲ. ಭೂಮಿಯು ಸರಿಯಾಗಿ ಬಳಕೆಯಾಗಿಲ್ಲ. ಆದ್ದರಿಂದ, ಯೋಜನೆಯನ್ನು ಮರುಪರಿಶೀಲಿಸಬೇಕು ಮತ್ತು ಆ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ರಾಜ್ಯ ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿದೆ.

ಅಲ್ಲದೆ, ‘ಉತ್ತಮ ನಾಗರಿಕ ಸೌಲಭ್ಯಗಳು ಮತ್ತು ವ್ಯಾಪಾರ ಮತ್ತು ವೃತ್ತಿಪರರಿಗೆ ಉತ್ತಮ ಅವಕಾಶಗಳೊಂದಿಗೆ ನಗರದ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಈ ಉದ್ದೇಶ ಕನಸಾಗಿಯೇ ಉಳಿದಿದೆ. ವಾಸ್ತವವಾಗಿ ಟೋಲ್ ಪ್ಲಾಜಾ, ಫೆರಿಫೆರಲ್‌ ರಸ್ತೆಗಳನ್ನು ಹೊರತುಪಡಿಸಿ ಸುಮಾರು 25 ವರ್ಷಗಳಲ್ಲಿ ಕೇವಲ ಒಂದು ಕಿ.ಮೀ. ಎಕ್ಸ್‌ಪ್ರೆಸ್ ಮಾರ್ಗವನ್ನು ನಿರ್ಮಿಸಲಾಗಿದೆ’ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

‘ವಾಸ್ತವವಾಗಿ ಈ ಪರಿಕಲ್ಪನೆ ಮತ್ತು ಒಪ್ಪಂದವು ವಿಫಲವಾಗಿದೆ. 25 ವರ್ಷಗಳಿಗೂ ಹೆಚ್ಚು ಅವಧಿಯಲ್ಲಿ ಕೇವಲ ಒಂದು ಕಿ.ಮೀ. ಮಾತ್ರ ನಿರ್ಮಿಸಲಾಗಿರುವಾಗ, ಯೋಜನೆಯನ್ನು ಜೀವಂತವಾಗಿಡುವ ಯಾವುದೇ ಉದ್ದೇಶ ಈಡೇರುವುದಿಲ್ಲ. ನಗರ, ನಾಗರಿಕರು, ಪರಿಸರ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಯೋಜನೆಯನ್ನು ಪುನರ್ ಪರಿಶೀಲಿಸಬೇಕಿದೆ. ಹಳೆಯ ಯೋಜನೆಯನ್ನು ತ್ಯಜಿಸಿ ಹೊಸ ಮತ್ತು ಹೊಸ ಯೋಜನೆಗೆ ಸೂಕ್ತ ಕ್ರಮ ಕೈಗೊಳ್ಳುವುದು ಒಳ್ಳೆಯದು’ ಎಂದು ಪೀಠ ಹೇಳಿದೆ.

‘ನಗರದ ಜನಸಂಖ್ಯೆ 1.40 ಕೋಟಿಗಿಂತ ಹೆಚ್ಚಾಗಿದೆ. ದಿನನಿತ್ಯದ ಸಂಚಾರ ದಟ್ಟಣೆ ಸಾಮಾನ್ಯ. ನಗರದಲ್ಲಿ ಸ್ವಲ್ಪ ದೂರ ಪ್ರಯಾಣಿಸಲು ಗಂಟೆಗಳು ಬೇಕಾಗುತ್ತವೆ. ಮೂಲಸೌಕರ್ಯ ಸೌಲಭ್ಯಗಳು ಕುಸಿಯುತ್ತಿವೆ. ಆದ್ದರಿಂದ, ರಾಜ್ಯ ಸರ್ಕಾರ ನಗರದ ಜೀವನ ಪರಿಸ್ಥಿತಿಗಳನ್ನು ಸುಧಾರಿಸಲು ಹೊಸ ಯೋಜನೆಗೆ ಅಗತ್ಯವಾದ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಪೀಠ ಹೇಳಿದೆ. ಅಂತಿಮವಾಗಿ ಪ್ರಕರಣದಲ್ಲಿ ಅರ್ಜಿದಾರರು ಈಗಾಗಲೇ ಪರಿಹಾರ ಪಡೆದಿರುವುದರಿಂದ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿದೆ.