ಹೈಕೋರ್ಟ್‌ಗೆ ಹೊಸ ಕಟ್ಟಡ ಸಂಕೀರ್ಣ ನಿರ್ಮಾಣಕ್ಕಾಗಿ ನಗರದ ಕೇಂದ್ರ ಭಾಗದಲ್ಲಿ 30 ಎಕರೆ ಅಥವಾ ಅದಕ್ಕಿಂತ ಅಧಿಕ ಭೂಮಿ ನೀಡಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೈಕೋರ್ಟ್‌ಗೆ ಹೊಸ ಕಟ್ಟಡ ಸಂಕೀರ್ಣ ನಿರ್ಮಾಣಕ್ಕಾಗಿ ನಗರದ ಕೇಂದ್ರ ಭಾಗದಲ್ಲಿ 30 ಎಕರೆ ಅಥವಾ ಅದಕ್ಕಿಂತ ಅಧಿಕ ಭೂಮಿ ನೀಡಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಬೆಂಗಳೂರಿನ ಶರಣ್‌ ದೇಸಾಯಿ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತು. ಕೆಲ ಕಾಲ ವಾದ ಆಲಿಸಿದ ವಿಭಾಗೀಯ ಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರ ಮತ್ತು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ಗೆ ನೋಟಿಸ್‌ ಜಾರಿಗೊಳಿಸಿತು.

ಇದಕ್ಕೂ ಮುನ್ನ ಖುದ್ದು ವಾದ ಮಂಡಿಸಿದ ಅರ್ಜಿದಾರರು, ಇತ್ತೀಚೆಗೆ ಉಪ ಮುಖ್ಯಮಂತ್ರಿ ಶಿವಕುಮಾರ್‌ ಅವರು ಪ್ರಸ್ತುತ ಹೈಕೋರ್ಟ್‌ ಆವರಣದಲ್ಲಿ ಸ್ಥಳಾವಕಾಶದ ಕೊರತೆಯಿದೆ. ಕರ್ನಾಟಕ ಹೈಕೋರ್ಟ್‌ ಅನ್ನು ಹೊಸ ಮತ್ತು ದೊಡ್ಡ ಸ್ಥಳಕ್ಕೆ ಸ್ಥಳಾಂತರಿಸುವ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸುತ್ತಿದೆ. ಹೈಕೋರ್ಟ್‌ನ ನೂತನ ಸಂಕೀರ್ಣ ನಿರ್ಮಿಸಲು ನಗರದ ಸೆಂಟ್ರಲ್‌ ಬಿಸಿನೆಸ್‌ ಜಿಲ್ಲೆಯಲ್ಲಿ (ಸಿಬಿಡಿ) ಭೂಮಿಯನ್ನು ಮಂಜೂರು ಮಾಡುವ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ಹೊಸ ಕಟ್ಟಡ ಸಂಕೀರ್ಣ ನಿರ್ಮಾಣಕ್ಕಾಗಿ ನಗರದ ಕೇಂದ್ರ ಭಾಗದಲ್ಲಿ 30 ಎಕರೆ ಅಥವಾ ಅದಕ್ಕಿಂತ ಅಧಿಕ ಭೂಮಿ ನೀಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.