ಶುಂಠಿ, ಅರಿಶಿನ ಬೆಳೆಯಲ್ಲಿ ಉತ್ತಮ ಕೃಷಿ ಪದ್ಧತಿ ಕುರಿತು ಒಂದು ದಿನದ ಕಾರ್ಯಾಗಾರ

KannadaprabhaNewsNetwork | Published : Mar 30, 2025 3:04 AM

ಸಾರಾಂಶ

ಹುಣಸೂರು ಉಪವಿಭಾಗ ವ್ಯಾಪ್ತಿಯಲ್ಲಿ ತಂಬಾಕು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದರೂ ಅರಿಶಿನ ಮತ್ತು ಶುಂಠಿ ಬೆಳೆಗಳಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ.

ಕನ್ನಡಪ್ರಭ ವಾರ್ತೆ ಹುಣಸೂರು ಪಟ್ಟಣದ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ (ಸಿಟಿಆರ್‌ಐ-ಐಸಿಎಆರ್) ಮತ್ತು ಕ್ಯಾಲಿಕಟ್‌ ನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸ್ಪೈಸ್ ರೀಸರ್ಚ್ (ಐಐಎಸ್‌ಆರ್) ಸಹಯೋಗದಲ್ಲಿ ಶುಂಠಿ ಮತ್ತು ಅರಿಶಿನ ಬೆಳೆಯಲ್ಲಿನ ಉತ್ತಮ ಕೃಷಿ ಪದ್ಧತಿ ಕುರಿತಾದ ಕಾರ್ಯಾಗಾರ ನಡೆಯಿತು.ಪಟ್ಟಣದಲ್ಲಿ ಶನಿವಾರ ಸಿಟಿಆರ್‌.ಐ ಕೇಂದ್ರದ ಸಭಾಂಗಣದಲ್ಲಿ ಪ. ಜಾತಿ ಉಪಯೋಜನೆಯಡಿ ಹುಣಸೂರು, ಪಿರಿಯಾಪಟ್ಟಣ ಮತ್ತು ಎಚ್.ಡಿ. ಕೋಟೆ ತಾಲೂಕಿನ ರೈತರಿಗಾಗಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಿಟಿಆರ್‌ಐ ಮುಖ್ಯಸ್ಥ ಡಾ.ಎಸ್. ರಾಮಕೃಷ್ಣನ್, ಹುಣಸೂರು ಉಪವಿಭಾಗ ವ್ಯಾಪ್ತಿಯಲ್ಲಿ ತಂಬಾಕು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದರೂ ಅರಿಶಿನ ಮತ್ತು ಶುಂಠಿ ಬೆಳೆಗಳಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಅರಿಶಿನ ಮತ್ತು ಶುಂಠಿ ಕೃಷಿಯಲ್ಲಿ ಇದೀಗ ಆಧುನಿಕ ತಂತ್ರಜ್ಞಾನಗಳೊಂದಿಗೆ ಹೊಸ ಚಿಂತನೆಗಳನ್ನು ಅಳವಡಿಸಿಕೊಂಡು ನೂತನ ಪದ್ಧತಿಯೊಂದಿಗೆ ಬೆಳೆಯಲು ಸಾಧ್ಯವಾಗಲಿದೆ. ಆಸಕ್ತ ರೈತರು ವಿಜ್ಞಾನಿಗಳಿಂದ ಸಂಶೋಧನೆಗೊಂಡಿರುವ ವಿವಿಧ ಪದ್ಧತಿಗಳನ್ನು ಅರಿತು ಅನುಸರಿಸಿದಲ್ಲಿ ಕಡಿಮೆ ಖರ್ಚಿನಲ್ಲಿ ಉತ್ತಮ ಇಳುವರಿ, ಗುಣಮಟ್ಟದೊಂದಿಗೆ ಉತ್ತಮ ಬೆಲೆಯನ್ನೂ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಉಪವಿಭಾಗ ವ್ಯಾಪ್ತಿಯಲ್ಲಿ ಎಸ್‌.ಸಿ ಉಪಯೋಜನೆಯಡಿ 100ಕ್ಕೂ ಹೆಚ್ಚು ರೈತರನ್ನು ಗುರುತಿಸಿ ತರಬೇತಿ ಕಾರ್ಯಾಗಾರದ ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದ್ದು, ತಜ್ಞರು ನೀಡುವ ಸಲಹೆ ಸೂಚನೆಗೆಳನ್ನು ಅರಿತು ಕೃಷಿ ಪದ್ಧತಿ ಅನುಸರಿಸಲು ಕೋರಿದರು.ಐಐಎಸ್‌ಆರ್‌ನ ಅಪ್ಪಂಗಾಲ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಬಾಲಾಜಿ ರಾಜ್‌ಕುಮಾರ್ ಮಾತನಾಡಿ, ಶುಂಠಿ ಮತ್ತು ಅರಿಶಿನ ಕೃಷಿಯಲ್ಲಿ ರೋಗಬಾಧೆ ಮತ್ತು ಜಂತುಹುಳುಗಳ (ನೆಮಟೋಡ್ಸ್) ಸಮಸ್ಯೆಗಳನ್ನು ಪರಿಹರಿಸುವತ್ತ ರೈತರು ಹೆಚ್ಚಿನ ಗಮನಹರಿಸುವುದು ಅಗತ್ಯ. ರೋಗಬಾಧೆ ನಿಯಂತ್ರಿಸಲು ಜೈವಿಕ ಕ್ಯಾಪ್ಸೂಲ್‌ ಗಳ ಬಳಕೆ ಮತ್ತು ಶುಂಠಿ ಕೃಷಿಯಲ್ಲಿ ಜಂತುಹುಳುಗಳ ಬಾದೆ ನಿಯಂತ್ರಣಕ್ಕೆ ವೇಲಮ್ ಪ್ರೈಮ್ ಔಷಧವನ್ನು ಬಳಸಲು ಕೋರಿದರು.ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡ ರೈತರಿಗೆ ಉಚಿತವಾಗಿ ಮೈಕ್ರೋ ನ್ಯೂಟ್ರಿಯಂಟ್ಸ್‌ ಗಳು ಮತ್ತು ಟ್ರೈಕೋಡರ್ಮವನ್ನೊಳಗೊಂಡ ಜೈವಿಕ ಕ್ಯಾಪ್ಸೂಲ್‌ ಗಳನ್ನು ವಿತರಿಸಲಾಯಿತು.ಕಾರ್ಯಗಾರದಲ್ಲಿ ಐಸಿಎಆರ್‌ನ ಡಾ.ವಿ. ಶ್ರೀನಿವಾಸನ್, ಡಾ. ಕೃಷ್ಣಮೂರ್ತಿ, ಡಾ.ಎಸ್. ಅಂಕೇಗೌಡ, ಡಾ. ಹೊನ್ನಪ್ಪ ಅಸಂಗಿ ರೈತರಿಗೆ ಮಾಹಿತಿ ನೀಡಿದರು. 100ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.

Share this article