ಕಾರಟಗಿ: ಕನ್ನಡ ಭಾಷೆ, ನೆಲ ಮತ್ತು ಜಲದ ವಿಷಯದಲ್ಲಿ ನಾವೆಲ್ಲರೂ ಸ್ವಾಭಿಮಾನಿಗಳಾಗಬೇಕು. ಎಲ್ಲರನ್ನೂ ಪ್ರೀತಿಸುವ ಗುಣ ಹೊಂದಿರುವ ಕನ್ನಡಿಗರು ಭವಿಷ್ಯದಲ್ಲಿ ಭಾಷಾಭಿಮಾನವನ್ನು ಮತ್ತಷ್ಟು ಬೆಳೆಸಿಕೊಂಡು ಕನ್ನಡದ ಅಸ್ತಿತ್ವ ಉಳಿಸಲು ಸಂಕಲ್ಪ ಮಾಡಬೇಕು ಎಂದು ತಹಸೀಲ್ದಾರ್ ಎಂ. ಕುಮಾರಸ್ವಾಮಿ ಕರೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿ. ನಮ್ಮ ರಾಜ್ಯಕ್ಕೆ ಬೇರೆ ರಾಜ್ಯಗಳಿಂದ ಬರುವವರು ಕನ್ನಡ ಕಲಿಯಬೇಕು ಎಂಬ ವಾತಾವರಣ ನಿರ್ಮಾಣವಾಗಬೇಕು. ಕನ್ನಡದ ಶ್ರೀಮಂತ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಂತಃಸತ್ವವನ್ನು ಎತ್ತಿಹಿಡಿದಾಗ ಮಾತ್ರ ನಮ್ಮ ಭವ್ಯ ಪರಂಪರೆಯ ಪುನರುತ್ಥಾನ ಸಾಧ್ಯವಾಗಲಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್, ತಾಪಂ ಇಒ ಲಕ್ಷ್ಮೀದೇವಿ, ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ನಾಗರಾಜ ಅರಳಿ ಹಾಗೂ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ ಮಾತನಾಡಿದರು.ನಿವೃತ್ತ ಯೋಧರಿಗೆ ಗೌರವ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವೀರೇಶ ಗಾದಿಗನೂರು ಹಾಗೂ ಅನ್ನದಾನೇಶ ದೇಸಾಯಿ ಚಳ್ಳೂರು ಅವರನ್ನು ಮತ್ತು ಕನ್ನಡಪರ ಸಂಘಟನೆಗಳ ಪ್ರಮುಖರಾದ ಹನುಮೇಶ ವಡ್ಡರಟ್ಟಿ ಹಾಗೂ ಶರಣಪ್ಪ ಸಂಗಟಿ ಅವರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು.
ಪುರಸಭೆ ಉಪಾಧ್ಯಕ್ಷೆ ಸುಜಾತಾ ಭಜಂತ್ರಿ, ಸ್ಥಾಯಿ ಸಮಿತಿ ಅಧ್ಯಕ್ಷ ದೊಡ್ಡಬಸವರಾಜ ಬೂದಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ದೇವಪ್ಪ ಭಾವಿಕಟ್ಟಿ, ಸದಸ್ಯರಾದ ಶಕುಂತಲಾ, ರೇಣುಕಾ ನಾಯಕ, ಖಾಜಾ ಹುಸೇನ್ ಮುಲ್ಲಾ, ಮರಿಯಪ್ಪ ಸಾಲೋಣಿ, ಮೃತ್ಯುಂಜಯ ಸಂಗಟಿ, ಯಮನಪ್ಪ, ಅಲಿ ಹುಸೇನ್ ಉಪಸ್ಥಿತರಿದ್ದರು.