ಕರ್ನಾಟಕ ಏಕೀಕರಣದಲ್ಲಿ ಗದಗ ಮಹನೀಯರ ಪಾತ್ರ ಅಗಾಧ: ಸಚಿವ ರಾಯರಡ್ಡಿ

KannadaprabhaNewsNetwork |  
Published : Nov 02, 2026, 03:15 AM IST
ಕಾರ್ಯಕ್ರಮದಲ್ಲಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿದರು. | Kannada Prabha

ಸಾರಾಂಶ

ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಗದಗಿನ ಮಹನೀಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕನ್ನಡ ನಾಡಿನ ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯ ಶ್ರೀಮಂತಿಕೆಗೆ ಗದಗಿನ ಕೊಡುಗೆ ಅಪಾರವಾಗಿದೆ.

ಕನ್ನಡಪ್ರಭ ವಾರ್ತೆ ಗದಗ

ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಗದಗಿನ ಮಹನೀಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕನ್ನಡ ನಾಡಿನ ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯ ಶ್ರೀಮಂತಿಕೆಗೆ ಗದಗಿನ ಕೊಡುಗೆ ಅಪಾರವಾಗಿದೆ. ಕನ್ನಡ ಭಾಷೆ ಮತ್ತು ನಾಡಿನ ಅಸ್ಮಿತೆಯನ್ನು ಉಳಿಸಿ ಬೆಳೆಸುವಲ್ಲಿ ಇಲ್ಲಿನ ಸಾಹಿತಿಗಳು, ಕಲಾವಿದರು ಹಾಗೂ ಹೋರಾಟಗಾರರ ಸೇವೆ ಸ್ಮರಣೀಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತದಿಂದ ನಡೆದ 71ನೇ ಕನ್ನಡ ರಾಜ್ಯೋತ್ಸವದ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು ಎಂದು ಗದುಗಿನ ಹುಯಿಲಗೋಳ ನಾರಾಯಣರಾಯರು ಕನಸು ಕಂಡಂತೆ, ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ, ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಕನ್ನಡಾಂಬೆಯನ್ನು ಆಹ್ವಾನಿಸಿ ನಮ್ಮೆಲ್ಲರನ್ನು ಏಕೀಕರಣಕ್ಕಾಗಿ ಒಗ್ಗೂಡುವಂತೆ ಅನೇಕ ಮಹನೀಯರು ಹೋರಾಡಿದ ಫಲಶ್ರುತಿಯಾಗಿ ಹರಿದು ಹಂಚಿಹೋಗಿದ್ದ ಈ ರಾಜ್ಯವು 1956 ರಲ್ಲಿ ಮೈಸೂರು ರಾಜ್ಯ ಉದಯವಾಯಿತು ಎಂದು ತಿಳಿಸಿದರು.

ಕೊಡಗು, ಮದ್ರಾಸ್, ಹೈದರಾಬಾದ ಹಾಗೂ ಬಾಂಬೆ ಕರ್ನಾಟಕ ರಾಜ್ಯದ ಭಾಗಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡಿಸಲಾಯಿತು. ಈ ಪ್ರದೇಶಗಳಲ್ಲಿ ಬಹಳಷ್ಟು ಜನರು ಕನ್ನಡ ಭಾಷೆಯನ್ನು ಮಾತನಾಡುತ್ತಿದ್ದರಿಂದ ಹಾಗೂ ಭಾಷಾವಾರು ಪ್ರಾಂತ್ಯ ನಿರ್ಮಾಣವಾಗಬೇಕೆಂದು ಕರ್ನಾಟಕ ಏಕೀಕರಣ ಚಳುವಳಿಯ ಉದ್ದೇಶವಾಗಿದ್ದರಿಂದ ಮೈಸೂರು ರಾಜ್ಯವನ್ನು 1973, ನ.1ರಂದು ಕರ್ನಾಟಕ ರಾಜ್ಯವೆಂದು ಪುನರ್ ನಾಮಕರಣ ಮಾಡಲಾಯಿತು. ಏಕೀಕರಣದಲ್ಲಿ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾವ್, ಅಂದಾನಪ್ಪ ದೊಡ್ಡಮೇಟಿ, ಕೆ.ಎಚ್. ಪಾಟೀಲ ಅವರನ್ನು ಗೌರವದಿಂದ ಸ್ಮರಿಸೋಣ ಎಂದರು.

ಈ ನಾಡಿನಲ್ಲಿ ಕದಂಬರು, ರಾಷ್ಟ್ರಕೂಟರು, ವಿಜಯನಗರದ ಅರಸರು, ಚಾಲುಕ್ಯರು ಸೇರಿದಂತೆ ಹಲವಾರು ರಾಜರುಗಳು ಆಳ್ವಿಕೆ ನಡೆಸಿದ್ದಾರೆ. ನರ್ಮದಾ ನದಿಯಿಂದ ಕಾವೇರಿ ವರೆಗೆ ಕನ್ನಡ ನಾಡು ಹರಡಿದ್ದು ಅನೇಕ ವಿಸ್ಮಯಗಳಿಂದ ಕನ್ನಡ ನಾಡು ಕೂಡಿದೆ. ಗದಗ ಜಿಲ್ಲೆಯ ಜ. ಡಾ. ಅನ್ನದಾನೇಶ್ವರ ಶಿವಯೋಗಿಗಳಿಗೆ ಸಮಾಜ ಸೇವೆ ಹಾಗೂ ಪಾಂಡಪ್ಪ ದೇವಲಪ್ಪ ಲಮಾಣಿ ಅವರಿಗೆ ಜನಪದ ಕ್ಷೇತ್ರದಲ್ಲಿನ ಸಾಧನೆ ಪರಿಗಣಿಸಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು ಅವರಿಗೆ ಶುಭ ಕೋರಿದರು.

ಜಿಲ್ಲೆಯ ಅಭಿವೃದ್ಧಿಯಡೆಗೆ ಮಾತನಾಡುವುದಾದರೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಜಿಲ್ಲೆಯ ಅಸಂಖ್ಯಾತ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸಿದ ಕೀರ್ತಿ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ. ರಾಜ್ಯ ಸರ್ಕಾರವು ನೀಡಿದ ಭರವಸೆಗಳನ್ನು ಸಮರ್ಪಕವಾಗಿ ಈಡೇರಿಸಿದೆ. ಗ್ಯಾರಂಟಿಗಳ ಅನುಷ್ಠಾನಕ್ಕೆ ಅನುದಾನದ ಕೊರತೆ ಇಲ್ಲ. ರಾಜ್ಯದಲ್ಲಿ ಗ್ಯಾರಂಟಿಗಳ ಅನುಷ್ಠಾನಕ್ಕಾಗಿಯೇ ₹52 ಸಾವಿರ ಕೋಟಿಗೂ ಅಧಿಕ ಅನುದಾನ ಪ್ರತಿ ವರ್ಷ ನೀಡಲಾಗುತ್ತಿದೆ. 36.10 ಲಕ್ಷ ರೈತರ ಪಂಪ್‌ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಮೂಲಕ ರೈತರ ಆರ್ಥಿಕಾಭಿವೃದ್ಧಿಗೆ ಶ್ರಮಿಸುತ್ತಿದೆ. ಅಲ್ಲದೇ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹5 ಲಕ್ಷಗಳವರಗೆ ಸಾಲ ಒದಗಿಸಲಾಗುತ್ತಿದೆ. ಒಟ್ಟಾರೆ ₹1.20 ಲಕ್ಷ ಕೋಟಿ ಅನುದಾನವನ್ನು ನೇರ ಸಬ್ಸಿಡಿ ಮೂಲಕ ಸರ್ಕಾರ ನೀಡುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ಎಚ್.ಕೆ. ಪಾಟೀಲ ಮಾತನಾಡಿದರು. ವಿಪ ಸದಸ್ಯ ಎಸ್.ವಿ. ಸಂಕನೂರ, ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಪಂ ಸಿಇಒ ಮುಕುಲ್ ಜೈನ್, ಡಿಎಫ್‌ಓ ಸಂತೋಷಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಎಸಿ ಗಂಗಪ್ಪ ಎಂ. ಸೇರಿ ಇತರರು ಇದ್ದರು.1ಜಿಡಿಜಿ7

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಲು, ಮೊಸರು ಆಯ್ತು, ಇದೀಗ ಬಸ್‌ ದರ ಏರಿಕೆ - ನ.5ರಿಂದಲೇ ಹೊಸ ದರ
ಸ್ಟಿಂಗ್‌ ಯಾರಿಗೆ ತಿರುಗುಬಾಣ ಅಂತ ಇಂದು ಹೇಳ್ತೀನಿ: ಎಚ್ಡಿಕೆ