ಗ್ರಾಮಾನುಭವ ಕಾರ್ಯಕ್ರಮಕ್ಕೆ ಸಚಿವ ಬಸವರಾಜ ರಾಯರಡ್ಡಿ ಚಾಲನೆ

KannadaprabhaNewsNetwork |  
Published : Nov 02, 2026, 03:15 AM IST
ಗ್ರಾಮಾನುಭವ ಕಾರ್ಯಕ್ರಮಕ್ಕೆ ಸಚಿವ ಬಸವರಾಜ ರಾಯರಡ್ಡಿ ಚಾಲನೆ ನೀಡಿದರು. | Kannada Prabha

ಸಾರಾಂಶ

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಗರ ಪ್ರದೇಶದ ಶಾಲಾ ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕಿನ ನೈಜ ಅನುಭವವನ್ನು ಪರಿಚಯಿಸುವ ಹಾಗೂ ಅವರಲ್ಲಿ ಕೃಷಿ, ಗ್ರಾಮೀಣ ಸಂಸ್ಕೃತಿ ಮತ್ತು ಶ್ರಮದ ಮಹತ್ವದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷಿ ಗ್ರಾಮಾನುಭವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಗದಗ

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಗರ ಪ್ರದೇಶದ ಶಾಲಾ ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕಿನ ನೈಜ ಅನುಭವವನ್ನು ಪರಿಚಯಿಸುವ ಹಾಗೂ ಅವರಲ್ಲಿ ಕೃಷಿ, ಗ್ರಾಮೀಣ ಸಂಸ್ಕೃತಿ ಮತ್ತು ಶ್ರಮದ ಮಹತ್ವದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷಿ ಗ್ರಾಮಾನುಭವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ನಗರ ಪ್ರದೇಶದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 8, 9 ಮತ್ತು 11ನೇ ತರಗತಿಯ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಗಳ ಮೂಲಕ ಗ್ರಾಮೀಣ ಬದುಕನ್ನು ತಿಳಿದುಕೊಳ್ಳುವುದಕ್ಕೆ ಸೀಮಿತವಾಗದೆ, ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಜನಜೀವನ, ಕೃಷಿ ಚಟುವಟಿಕೆಗಳು, ಸಾಂಪ್ರದಾಯಿಕ ವೃತ್ತಿಗಳು ಹಾಗೂ ಗ್ರಾಮೀಣ ಆರ್ಥಿಕ ವ್ಯವಸ್ಥೆಯನ್ನು ನೇರವಾಗಿ ಅರಿತುಕೊಳ್ಳಲು ಈ ಯೋಜನೆ ಅವಕಾಶ ಕಲ್ಪಿಸಲಿದೆ ಎಂದರು.

ಕಾರ್ಯಕ್ರಮದಡಿ ಆಯೋಜಿಸುವ ಶೈಕ್ಷಣಿಕ ಭೇಟಿಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳು ರೈತರು, ಕುಶಲಕರ್ಮಿಗಳು, ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡವರು ಹಾಗೂ ಗ್ರಾಮೀಣ ಉದ್ಯಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಕೃಷಿ ಚಟುವಟಿಕೆಗಳು, ಪಶುಸಂಗೋಪನೆ, ಗ್ರಾಮೀಣ ಕಸುಬುಗಳು ಮತ್ತು ಸ್ಥಳೀಯ ಉತ್ಪಾದನಾ ಚಟುವಟಿಕೆಗಳನ್ನು ಹತ್ತಿರದಿಂದ ವೀಕ್ಷಿಸುವ ಮೂಲಕ ಪ್ರಾಯೋಗಿಕ ಜ್ಞಾನ ಪಡೆದುಕೊಳ್ಳಲಿದ್ದಾರೆ.

ಶ್ರಮದ ಘನತೆ ಮತ್ತು ರೈತರ ಬದುಕಿನ ಬಗ್ಗೆ ಗೌರವ:ಗ್ರಾಮಾನುಭವ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಶ್ರಮದ ಘನತೆ, ರೈತರ ಪರಿಶ್ರಮದ ಮಹತ್ವ, ಕೃಷಿಯ ಮೇಲಿನ ಗೌರವ ಹಾಗೂ ಗ್ರಾಮೀಣ ಜನರ ಜೀವನಶೈಲಿಯ ಬಗ್ಗೆ ಸಕಾರಾತ್ಮಕ ಮನೋಭಾವ ಬೆಳೆಸುವ ಆಶಯ ಹೊಂದಿದೆ. ಇದರೊಂದಿಗೆ ಸ್ಥಳೀಯ ಸಂಸ್ಕೃತಿ, ಸಾಂಪ್ರದಾಯಿಕ ಜ್ಞಾನ, ಗ್ರಾಮೀಣ ಕಲೆ ಮತ್ತು ಸುಸ್ಥಿರ ಜೀವನ ಪದ್ಧತಿಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿವಳಿಕೆ ಮೂಡಿಸಲಿದೆ ಎಂದು ತಿಳಿಸಿದರು.

ಪಠ್ಯಾಧಾರಿತ ಶಿಕ್ಷಣದ ಜೊತೆಗೆ ಅನುಭವಾಧಾರಿತ ಕಲಿಕೆಗೆ ಆದ್ಯತೆ ನೀಡುವ ಈ ಯೋಜನೆಯು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ, ಪರಿಸರ ಪ್ರಜ್ಞೆ ಹಾಗೂ ಗ್ರಾಮೀಣ ಸಮುದಾಯದ ಬಗ್ಗೆ ಗೌರವ ಬೆಳೆಸಲು ಸಹಕಾರಿಯಾಗಲಿದೆ. ಈ ಮೂಲಕ ಗ್ರಾಮೀಣ ಬದುಕಿನ ವೈವಿಧ್ಯತೆ ಮತ್ತು ಅದರಲ್ಲಿರುವ ಜ್ಞಾನಸಂಪತ್ತನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂದರು.

ಈ ವೇಳೆ ಶಾಸಕ ಡಾ. ಎಚ್.ಕೆ. ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಪಂ ಸಿಇಒ ಮುಕುಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆ., ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಡಿಡಿಪಿಐ ಆರ್.ಎಸ್. ಬುರಡಿ, ಶರಣು ಗೋಗೇರಿ, ಕೊಟ್ರೇಶ ವಿಭೂತಿ, ಶಿವಕುಮಾರ ಕುರಿ, ಎಚ್.ಎಂ. ಕಾಂಬಳೆ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರ ಮಕ್ಕಳಿಗೆ ಹಳ್ಳಿ ಜೀವನ ಪರಿಚಯಿಸುವ ‘ಗ್ರಾಮಾನುಭವ’ಕ್ಕೆ ಚಾಲನೆ
ಕಡಲ ಜೈವಿಕ ತಂತ್ರಜ್ಞಾನ ನೀತಿಗೆ ಅನುಮೋದನೆ: ರಿಝ್ವಾನ್ ಅರ್ಷದ್