ಮಕ್ಕಳಿಗೆ ವಿದ್ಯೆ ಜೊತೆ ಸಂಸ್ಕಾರವನ್ನು ಬೆಳೆಸಿ: ದರ್ಶನ್ ಪುಟ್ಟಣ್ಣಯ್ಯ

KannadaprabhaNewsNetwork |  
Published : Jan 25, 2026, 01:30 AM IST
೨೪ಕೆಎಂಎನ್‌ಡಿ-೩ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯ ಸ್ಟಾನ್ಫೋರ್ಡ್ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಮಕ್ಕಳನ್ನು ಶಾಲೆಗೆ ಸೇರಿಸಿದಾಕ್ಷಣ ಪೋಷಕರ ಜವಾಬ್ದಾರಿ ಮುಗಿಯಲಿಲ್ಲ. ಮಕ್ಕಳ ಶೈಕ್ಷಣಿಕ ಬೆಳವಣಿಗೆಯನ್ನು ಸದಾ ಗಮನಿಸುತ್ತಿರಬೇಕು. ನಿತ್ಯದ ಒಂದಷ್ಟು ಸಮಯ ಮಕ್ಕಳನ್ನು ಓದಿಸುವುದಕ್ಕೆ ಮೀಸಲಿಡಬೇಕು. ಮೊಬೈಲ್‌ನಿಂದ ಮಕ್ಕಳು- ಪೋಷಕರು ದೂರವಿದ್ದರೆ ಒಳ್ಳೆಯದು.

ಗುಣಾತ್ಮಕ ಶಿಕ್ಷಣವು ಶಿಕ್ಷಣ ಸಂಸ್ಥೆಗಳ ಗುರಿಯಾಗಿರಲಿ: ಡಾ.ಕುಮಾರ್ । ಕ್ಯಾತನಹಳ್ಳಿ ಸ್ಟ್ಯಾನ್ಫೋರ್ಡ್ ಶಾಲೆಯಲ್ಲಿ ಸ್ಟ್ಯಾನ್ಫೋರ್ಡ್ ಉತ್ಸವ

ಕನ್ನಡಪ್ರಭ ವಾರ್ತೆ ಪಾಂಡವಪುರ

ಪೋಷಕರು ಮಕ್ಕಳಿಗೆ ವಿದ್ಯೆ ಜೊತೆಗೆ ಸಂಸ್ಕಾರವನ್ನೂ ಕಲಿಸಬೇಕು. ಸಂಸ್ಕಾರವಿಲ್ಲದ ವಿದ್ಯೆ ಯಾವುದಕ್ಕೂ ಪ್ರಯೋಜನವಿಲ್ಲ. ಸಂಸ್ಕಾರ- ಸಂಸ್ಕತಿ ಇದ್ದಾಗ ಮಕ್ಕಳು ಸುಸಂಸ್ಕೃತರಾಗಿ ಹೊರಹೊಮ್ಮುವರು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ತಾಲೂಕಿನ ಕ್ಯಾತನಹಳ್ಳಿಯ ಸ್ಟ್ಯಾನ್ಫೋರ್ಡ್ ಪಬ್ಲಿಕ್ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸ್ಟ್ಯಾನ್ಫೋರ್ಡ್ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಮಕ್ಕಳನ್ನು ಹೆಚ್ಚು ಕೌಶಲ್ಯವಂತರನ್ನಾಗಿ ಮಾಡಬೇಕು. ಕೌಶಲ್ಯತೆ ಇದ್ದಾಗ ಭವಿಷ್ಯವನ್ನು ಉಜ್ವಲವಾಗಿ ಕಟ್ಟಿಕೊಳ್ಳಬಹುದು. ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕಾದ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರ ಮೇಲಿದೆ ಎಂದು ತಿಳಿಸಿದರು.

ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಓದಿಗೆ ನೀಡುವಷ್ಟೇ ಪ್ರಾಧಾನ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡುವ ಅಗತ್ಯವಿದೆ. ವಿದ್ಯಾರ್ಥಿಗಳ ಆಸಕ್ತಿದಾಯಕ ಕ್ಷೇತ್ರವನ್ನು ಗುರುತಿಸಿ ಅದರಲ್ಲಿ ಬೆಳವಣಿಗೆ ಸಾಧಿಸುವುದಕ್ಕೆ ಪ್ರೋತ್ಸಾಹ ನೀಡುವಂತೆ ಸಲಹೆ ನೀಡಿದರು.

ಪರೀಕ್ಷೆಗಳು ಸಮೀಪಿಸುತ್ತಿರುವ ಹೊತ್ತಿನಲ್ಲಿ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಆಸಕ್ತರಾಗಬೇಕು. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವುದನ್ನು ಗುರಿಯಾಗಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕವಾಗಿ ಎದುರಾಗುವ ಸವಾಲುಗಳನ್ನು ಎದುರಿಸಿ ಗೆಲ್ಲುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಕುಮಾರ್ ಉದ್ಘಾಟಿಸಿ ಮಾತನಾಡಿ, ಸ್ಟ್ಯಾನ್ಫೋರ್ಡ್ ಶಾಲೆಯು ಗ್ರಾಮೀಣ ಭಾಗದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಜೊತೆಗೆ ಮೌಲ್ಯಗಳನ್ನು ಬೆಳೆಸುತ್ತಿರುವುದು ಉತ್ತಮ ಬೆಳವಣಿಗೆ. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರಷ್ಟೇ ಪೋಷಕರಿಗೂ ಜವಾಬ್ದಾರಿ ಇರುತ್ತದೆ. ಮಕ್ಕಳು ಹೇಗೆ ಓದುತ್ತಿದ್ದಾರೆ, ಪರೀಕ್ಷೆಗೆ ಯಾವ ರೀತಿ ಸಿದ್ಧತೆ ನಡೆಸುತ್ತಿದ್ದಾರೆ ಎಂಬುದನ್ನು ಗಮನಿಸುತ್ತಿರಬೇಕು. ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಿ ನಿಲ್ಲುವಂತೆ ಸಲಹೆ ನೀಡಿದರು.

ಕಳೆದ ಬಾರಿ ನಡೆದ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎ.ಲೋಕೇಶ್ ಮಾತನಾಡಿ, ಮಕ್ಕಳನ್ನು ಶಾಲೆಗೆ ಸೇರಿಸಿದಾಕ್ಷಣ ಪೋಷಕರ ಜವಾಬ್ದಾರಿ ಮುಗಿಯಲಿಲ್ಲ. ಮಕ್ಕಳ ಶೈಕ್ಷಣಿಕ ಬೆಳವಣಿಗೆಯನ್ನು ಸದಾ ಗಮನಿಸುತ್ತಿರಬೇಕು. ನಿತ್ಯದ ಒಂದಷ್ಟು ಸಮಯ ಮಕ್ಕಳನ್ನು ಓದಿಸುವುದಕ್ಕೆ ಮೀಸಲಿಡಬೇಕು. ಮೊಬೈಲ್‌ನಿಂದ ಮಕ್ಕಳು- ಪೋಷಕರು ದೂರವಿದ್ದರೆ ಒಳ್ಳೆಯದು. ಪೋಷಕರು ಓದುವ ಹವ್ಯಾಸವನ್ನು ರೂಢಿಸಿಕೊಂಡರೆ ಮಕ್ಕಳೂ ಅದನ್ನು ಗಮನಿಸಿ ಓದಿನ ಕಡೆ ಆಸಕ್ತಿ ತೋರುತ್ತಾರೆ ಎಂದು ತಿಳಿಸಿದರು.

ಶಾಲೆಯ ಅಧ್ಯಕ್ಷ ವಾಸುದೇವ ಸ್ವಾಗತಿಸಿದರು. ಉಪಾಧ್ಯಕ್ಷ ಕೆ.ಕೃಷ್ಣೆಗೌಡ, ಕಾರ್ಯದರ್ಶಿ ಕೆ.ವಿ.ಚೇತನ್, ಖಜಾಂಚಿ ಡಾ.ಸೌಮ್ಯ, ಆಡಳಿತಧಿಕಾರಿ ಎಸ್.ಜಗದೀಶ್, ಮುಖ್ಯ ಶಿಕ್ಷಕಿ ಕವಿತಾ, ಸಿಆರ್‌ಪಿ ನಾಗೇಶ್, ಶಾಲೆಯ ಶಿಕ್ಷಕರು ಮತ್ತು ಪೋಷಕರು ಭಾಗವಹಿಸಿದ್ದರು. ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.

೨೪ಕೆಎಂಎನ್‌ಡಿ-೩

ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯ ಸ್ಟ್ಯಾನ್ಫೋರ್ಡ್ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!