ಕನ್ನಡಪ್ರಭ ವಾರ್ತೆ ಕೋಲಾರ
ಜಿಲ್ಲೆಯ ಮುಳಬಾಗಿಲು ತಾಲೂಕಿನ ಎಚ್.ಗೊಲ್ಲಹಳ್ಳಿಯ ಸ್ವಾಮಿ ವಿವೇಕಾನಂದ ಅನುದಾನಿತ ಪ್ರೌಢಶಾಲೆಯಲ್ಲಿ ಸೆಂಟ್ ಆನ್ಸ್ ಪ್ರೌಢಶಾಲೆ, ಕುವೆಂಪು ಪ್ರೌಢಶಾಲೆಗಳ ಸಂಯುಕ್ತಾಶ್ರಯದಲ್ಲಿ ೨೦೨೪- ೨೫ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಿಕೆಯಲ್ಲಿ ಶಿಸ್ತು ಇರಬೇಕು, ನೀವು ಸಮಯ ವ್ಯರ್ಥ ಮಾಡದೇ ಓದುವ ದೃಢ ನಿರ್ಧಾರ ಕೈಗೊಳ್ಳಿ, ಸಿನಿಮಾ, ಕ್ರೀಡೆ, ನಿಮ್ಮ ಇತರೆಲ್ಲಾ ಚಟುವಟಿಕೆಗಳನ್ನು ಒಂದೆರಡು ತಿಂಗಳು ತ್ಯಾಗ ಮಾಡುವ ಸಂಕಲ್ಪ ಮಾಡಬೇಕು ಎಂದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದಿರಿ, ಪ್ರತಿಕ್ಷಣವೂ ಅಮೂಲ್ಯವಾಗಿದ್ದು, ಬರವಣಿಗೆ ಉತ್ತಮಪಡಿಸಿಕೊಳ್ಳಿ, ನಿರಂತರ ಅಧ್ಯಯನ ಮಾಡಿ ಎಂದು ಕಿವಿಮಾತು ಹೇಳಿದ ಅವರು, ಇದು ನಿಮ್ಮ ಜೀವನದ ಮೊದಲ ಪಬ್ಲಿಕ್ ಪರೀಕ್ಷೆ, ಅದಕ್ಕೆ ಹೆದರುವ ಅಗತ್ಯವಿಲ್ಲ, ಪರಿಶ್ರಮ ಹಾಕಿ ಓದಿರುವಾಗ ನೀವು ಧೈರ್ಯದಿಂದಲೇ ಪರೀಕ್ಷೆ ಎದುರಿಸಬಹುದು ಎಂದರು.ಅನ್ವಯಿಕ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸುವ ಮೂಲಕ ಶೇ.೧೦೦ ರಷ್ಟು ಸಾಧನೆಗೆ ಪಠ್ಯ ಓದಿಗೆ ಒತ್ತು ನೀಡಿ ಎಂದರು.
ಶಿಕ್ಷಕರ ಬೋಧನೆಯನ್ನು ಗಮನವಿಟ್ಟು ಕೇಳಿ, ಜತೆಗೆ ಪಠ್ಯಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಿ, ಅನ್ವಯಿಕ ಪ್ರಶ್ನೆಗಳಿಗೆ ಉತ್ತರ ಬರೆಯಲು ಇದು ಹೆಚ್ಚು ಸಹಕಾರಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಕಾರ್ಯದರ್ಶಿ ಬಿ.ಸಿ.ಶ್ರೀನಿವಾಸ್, ಮುಖ್ಯ ಶಿಕ್ಷಕರಾದ ವೆಂಕಟರಮಣಪ್ಪ, ಸೆಂಟ್ ಆನ್ಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಅಂತೋಣಿ ಮೇರಿ, ಕುವೆಂಪು ಪ್ರೌಢಶಾಲೆಯ ನವೀನ್, ಕೋಲಾರ ಜಿಲ್ಲಾ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣಪ್ಪ ಇದ್ದರು.