ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಮೇಲೆ ಭೂ ಕಬಳಿಕೆ : ತಾಲೂಕಿನ ಹೊಂಗಾಣಿದೊಡ್ಡಿ ಗ್ರಾಮಸ್ಥರು ದೂರು

KannadaprabhaNewsNetwork | Updated : Jan 24 2025, 12:25 PM IST

ಸಾರಾಂಶ

 ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹಾಗೂ ಕನಕಪುರ ತಹಸೀಲ್ದಾರ್, ಶಿರಸ್ತೇದಾರ್, ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಿಗನ ವಿರುದ್ಧ ಭೂ ಕಬಳಿಕೆ ಆರೋಪದಡಿ ಜಿಲ್ಲಾ ಉಪಲೋಕಾಯುಕ್ತರಿಗೆ ತಾಲೂಕಿನ ಹೊಂಗಾಣಿದೊಡ್ಡಿ ಗ್ರಾಮಸ್ಥರು ದೂರು ಸಲ್ಲಿಸಿದರು.

ಕನಕಪುರ: ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹಾಗೂ ಕನಕಪುರ ತಹಸೀಲ್ದಾರ್, ಶಿರಸ್ತೇದಾರ್, ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಿಗನ ವಿರುದ್ಧ ಭೂ ಕಬಳಿಕೆ ಆರೋಪದಡಿ ಜಿಲ್ಲಾ ಉಪಲೋಕಾಯುಕ್ತರಿಗೆ ತಾಲೂಕಿನ ಹೊಂಗಾಣಿದೊಡ್ಡಿ ಗ್ರಾಮಸ್ಥರು ದೂರು ಸಲ್ಲಿಸಿದರು.

ತಾಲೂಕು ಆಡಳಿತ ಸೌಧದಲ್ಲಿ ಆಯೋಜಿಸಿದ್ದ ಲೋಕಾಯುಕ್ತರ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಜಯಕರ್ನಾಟಕ ಜನಪರ ವೇದಿಕೆ ಮುಖಂಡ ಕುಮಾರಸ್ವಾಮಿ ನೇತೃತ್ವದಲ್ಲಿ ಗ್ರಾಮಸ್ಥರು ದೂರು ಸಲ್ಲಿಸಿ, ನೂರಾರು ವರ್ಷಗಳಿಂದ ತಾಲೂಕಿನ ಹೊಂಗಾಣಿದೊಡ್ಡಿಯಲ್ಲಿನ ಸರ್ವೆ ನಂ.251ರಿಂದ 274 ಹಾಗೂ 346ರಿಂದ 349ರವರೆಗಿನ 148 ಎಕರೆ ಜಮೀನು ಸಾತನೂರು ಹೋಬಳಿ ಅಚ್ಚಲು ಗ್ರಾಮದ ಲೇಟ್ ಭಕ್ಷಿಸಾಬ್ ಕೋ ಮೆಹಬೂಬಿ ಉನ್ನೀಸಾ ಕುಟುಂಬದವರಿಂದ ಹೊಂಗಾಣಿದೊಡ್ಡಿ ಗ್ರಾಮದ 31 ಕುಟುಂಬಗಳು ಗೇಣಿ ಪದ್ಧತಿಯಂತೆ ವಶಕ್ಕೆ ಪಡೆದು 125 ವರ್ಷಗಳಿಂದ ಹಿರಿಯರು ಸಾಗುವಳಿ ಮಾಡಿಕೊಂಡು ಬಂದಿರುವುಗಾಗಿ ತಿಳಿಸಿದ್ದಾರೆ.

ಗ್ರಾಮದಲ್ಲಿ ನೂರಾರು ಕುಟುಂಬಗಳು ನೆಲೆಸಿದ್ದು, ಇಂದಿರಾಗಾಂಧಿ ಕಾಲದಲ್ಲಿ ಊಳುವವನೇ ಭೂ ಒಡೆಯ ಕಾಯ್ದೆಯಡಿ ಫಾರಂ ನಂ.7ರಲ್ಲಿ ಅರ್ಜಿ ಸಲ್ಲಿಸಿ ಅನುಭೋಗದಲ್ಲಿದ್ದ ನಮ್ಮನ್ನ ವಂಚಿಸಿ ರಾಮನಗರ ಶಾಸಕ ಇಕ್ಫಾಲ್ ಹುಸೇನ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳನ್ನು ಹೆದರಿಸಿ ಮೂಲ ಭೂ ಮಾಲೀಕರ ಕುಟುಂಬದವರಿಂದ ತಮ್ಮ ಹೆಸರಿಗೆ ಭೂ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ.

ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ಒಂದು ಗ್ರಾಮವನ್ನೇ ಕಬಳಿಸಿರುವ ಪ್ರಕರಣ ಇದೇ ಮೊದಲಾಗಿದ್ದು, ಅಧಿಕಾರ ದುರ್ಬಳಕೆ ಕುರಿತು ಮಾತನಾಡಿದರೆ ಟ್ರ್ಯುಬ್ಯುನಲ್ ನಲ್ಲಿ ಆದೇಶ ಮಾಡಿಸಿಕೊಂಡು ಬನ್ನಿ ಎನ್ನುತ್ತಾರೆ, ಆದರೆ ರಾಜ್ಯ ಸರಕಾರ ಟ್ರ್ಯುಬ್ಯುನಲ್ ತೆರೆಯದೆ ರೈತರಿಗೆ ದ್ರೋಹ ಬಗೆಯುತ್ತಿದೆ. ಇಡೀ ದೇಶದಲ್ಲಿ ಬಡವರಿಗೆ ಭೂಮಿ ಕಲ್ಪಿಸಿದ ಊಳುವವನೆ ಭೂ ಒಡೆಯ ಕಾಯಿದೆಗೆ ಕನಕಪುರ ತಾಲೂಕಿನಲ್ಲಿ ಬೆಲೆ ಇಲ್ಲವೇ ? ದಯವಿಟ್ಟು ಈ ಬಗ್ಗೆ ದೂರು ದಾಖಲಿಸಿಕೊಂಡು ನ್ಯಾಯ ಸಮ್ಮತ ತನಿಖೆ ನಡೆಸಿ ಶಾಸಕರಿಗೆ, ಹಾಗೂ ಶಾಮೀಲಾದ ಎಲ್ಲಾ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಹೊಂಗಾಣಿದೊಡ್ಡಿ ಗ್ರಾಮವನ್ನು ಭೂಪಟದಲ್ಲೇ ಉಳಿಸಬೇಕೆಂದು ಮನವಿ ಮಾಡಿದರು.

ದೂರು ಸ್ವೀಕರಿಸಿದ ಲೋಕಾಯುಕ್ತ ಎಸ್ಪಿ ಸ್ನೇಹಾ ಪ್ರತಿಕ್ರಿಯಿಸಿ, ಸೂಕ್ತ ತನಿಖೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ವೇಳೆ ರಾಜ್ಯ ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು, ಜೀವನ ಟ್ರಸ್ಟ್ ಅಧ್ಯಕ್ಷ ಪ್ರಶಾಂತ್ ಹಾಗೂ ನೊಂದ ಹೊಂಗಾಣಿದೊಡ್ಡಿ ಗ್ರಾಮಸ್ಥರು ಹಾಜರಿದ್ದರು 

Share this article