ರಾಮನಗರ: ಜಿಲ್ಲಾಸ್ಪತ್ರೆಯಲ್ಲಿ ಖಾಲಿಯಿರುವ ವೈದ್ಯರು ಮತ್ತು ಅಗತ್ಯ ಸಿಬ್ಬಂದಿ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿಮಾಡಲು ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಕೆಲವು ಪರೀಕ್ಷೆಗಳನ್ನು ಹೊರಗಡೆ ಮಾಡಿಸಿಕೊಂಡು ಬರಲು ಚೀಟಿ ನೀಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಜಿಲ್ಲಾಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯಗಳಿಗೆ ಹೊರಗಡೆ ಪರೀಕ್ಷೆ ಮಾಡಿಸಿಕೊಂಡು ಬರಲು ಸೂಚಿಸಬಾರದು ಎಂದು ವೈದ್ಯರಿಗೆ ತಾಕೀತು ಮಾಡಿದರು.
ಆಸ್ಪತ್ರೆಗೆ ಅಗತ್ಯವಿರುವ ಹೊಸ ಯಂತ್ರೋಪಕರಣಗಳನ್ನು ತುರ್ತಾಗಿ ಪೂರೈಸಲಾಗುವುದು. ಲಭ್ಯವಿರುವ ಯಂತ್ರೋಪಕರಣಗಳ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಹಾಗೂ ವಾರ್ಷಿಕ ನಿರ್ವಹಣೆಯನ್ನು ಅರ್ಹ ಯಂತ್ರೋಪಕರಣಗಳ ನಿರ್ವಾಹಕರಿಂದ ಮಾಡಿಸುವಂತೆ ಸೂಚಿಸಿದ ಅವರು, ತಾಲೂಕು ಆಸ್ಪತ್ರೆ ತುಂಬಾ ಹಳೆಯದಾಗಿದ್ದು ಅದನ್ನು ದುರಸ್ತಿ ಮಾಡಿಸಲು ಸಾಧ್ಯವಿಲ್ಲ. ಆದ್ದರಿಂದ ಹೊಸ ಆಸ್ಪತ್ರೆಯನ್ನು ನಿರ್ಮಿಸಲು ಕ್ರಮವಹಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.ಇದೇ ಸಂದರ್ಭದಲ್ಲಿ ಸ್ತನ ಕ್ಯಾನ್ಸರ್ ಪತ್ತೆಹಚ್ಚುವ ಯಂತ್ರ ಮ್ಯಾಮೋಗ್ರಫಿಯನ್ನು ಉದ್ಪಾಟಿಸಿ, ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಆಸ್ಪತ್ರೆಯ ಸೌಲಭ್ಯಗಳ ಕುರಿತು ಹೊರ ರೋಗಿಗಳೊಂದಿಗೆ ವಿಚಾರಣೆ ನಡೆಸಿದರು.
ಪ್ರಸ್ತುತ ಆಸ್ಪತ್ರೆಯಲ್ಲಿ 8 ಐ.ಸಿ.ಯು., 7 ಡಯಾಲಿಸಿಸ್ ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಹೆಚ್ಚು ಮಾಡಲು ಕ್ರಮವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
23ಕೆಆರ್ ಎಂಎನ್ 6.ಜೆಪಿಜಿ