ಭಟ್ಕಳ: ವಿದ್ಯಾರ್ಥಿಗಳು ತಮ್ಮ ಓದಿನೊಂದಿಗೆ ಉತ್ತಮ ಸಂಸ್ಕಾರವನ್ನು ಮೈಗೂಡಿಕೊಳ್ಳಬೇಕು. ಮೊಬೈಲನ್ನು ಮನರಂಜನಾ ಚಟುವಟಿಕೆಗಾಗಿ ಬಳಸದೇ ಶೈಕ್ಷಣಿಕ ಉನ್ನತಿಗಾಗಿ ಉಪಯೋಗಿಸಬೇಕು ಎಂದು ನಾಮಧಾರಿ ಸಮಾಜದ ಅಧ್ಯಕ್ಷ ಅರುಣ್ ನಾಯ್ಕ ತಿಳಿಸಿದರು.
ಇಲ್ಲಿನ ಆಸರಕೇರಿಯ ನಾಮಧಾರಿ ಸಮಾಜದ ಗುರುಮಠವಾದ ನಿಚ್ಛಲಮಕ್ಕಿ ವೆಂಕಟ್ರಮಣ ದೇವಸ್ಥಾನದಲ್ಲಿ ಶಿಕ್ಷಣಪ್ರೇಮಿಗಳು ಹಾಗೂ ತಾಲೂಕು ನಾಮಧಾರಿ ಸಮಾಜದ ವತಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ನಂತರದ ಅವಕಾಶಗಳ ಕುರಿತ ಉಚಿತ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ಸತತ ಪರಿಶ್ರಮದಿಂದ ಓದಿದರೆ ವಿದ್ಯಾರ್ಥಿಗಳು ಯಶಸ್ಸು ಕಾಣಸು ಸಾಧ್ಯ.ಶಿರಾಲಿ ಸಾರದಹೊಳೆ ಹಳೆಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ಆರ್.ಕೆ. ನಾಯ್ಕ ಮಾತನಾಡಿ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ತರವಾದ ಘಟ್ಟವಾಗಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ವಿದ್ಯಾರ್ಥಿಗಳು ಈ ಸಮಯದಲ್ಲಿ ಶಿಕ್ಷಣವಲ್ಲದೇ ಇತರ ಚಟುವಟಿಕೆಗಳ ಬಗ್ಗೆ ಗಮನ ಹರಿಸದಂತೆ ಪಾಲಕರೂ ಮಕ್ಕಳ ಬೆನ್ನೆಲುಬಾಗಿ ನಿಲ್ಲಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭವಾನಿಶಂಕರ ನಾಯ್ಕ ಮಾತನಾಡಿ, ಎಸ್ಸೆಸ್ಸೆಲ್ಲಿ ಮತ್ತು ಪಿಯುಸಿ ವಿದ್ಯಾರ್ಥಿಗಳಲ್ಲಿ ಮುಂದೆ ತಾವು ಯಾವ ಶಿಕ್ಷಣ ಪಡೆದರೆ ಉತ್ತಮ ಎಂಬ ಗೊಂದಲ್ಲಿರುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ಕಾರ್ಯಾಗಾರವು ತುಂಬಾ ಉಪಯುಕ್ತವಾಗಿದೆ. ಈ ಕಾರ್ಯಕ್ರಮವದಲ್ಲಿ ನುರಿತ ಅನುಭವಿ ಉಪನ್ಯಾಸಕರಿಂದ ಉಪನ್ಯಾಸ ನೀಡುತ್ತಿದ್ದು, ವಿದ್ಯಾರ್ಥಿಗಳೂ ಇದರ ಸದುಪಯೋಗ ಪಡೆಯಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಮಂಗಳೂರು ಶಾರದಾ ವಿದ್ಯಾನಿಕೇತನ ಪಿಯು ಕಾಲೇಜಿನ ಉಪನ್ಯಾಸಕ ವಿನಾಯಕ ಮಡಿವಾಳ ಹಾಗೂ ಭಟ್ಕಳದ ಸಿದ್ದಾರ್ಥ ಕಾಲೇಜಿನ ಉಪನ್ಯಾಸಕ ಶ್ರೀನಿವಾಸ ನಾಯ್ಕ ಉಪಸ್ಥಿತರಿದ್ದರು. ಅನನ್ಯ ನಾಯ್ಕ ಪ್ರಾರ್ಥನೆ ಹಾಡಿದರು. ಪಾಂಡುರಂಗ ನಾಯ್ಕ ಸ್ವಾಗತಿಸಿದರು. ಮಂಜುನಾಥ ನಾಯ್ಕ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸತತ ೩ ಗಂಟೆಗಳ ಕಾಲ ವಿದ್ಯಾರ್ಥಿಗಳಿಗೆ ಮನ ಮುಟ್ಟುವ ಹಾಗೆ ಉಪನ್ಯಾಸಕರಿಂದ ಉಪನ್ಯಾಸ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ವಿನಾಯಕ ಮಡಿವಾಳ ಹಾಗೂ ಶ್ರೀನಿವಾಸ ನಾಯ್ಕ ಅವರನ್ನು ಸಂಘಟಕರ ಪರವಾಗಿ ಸನ್ಮಾನಿಸಲಾಯಿತು.