ಕೊಪ್ಪಳ: ದೇಶದ ಜನರನ್ನು ನದಿ, ನೀರು, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಇಡೀ ಸಮಾಜವೇ ಸ್ವಯಂಸೇವಕರಂತೆ ದೇಶ ನನ್ನದು ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದು ಆರ್‌ಎಸ್‌ಎಸ್‌ನ ಟಿ. ಪ್ರಸನ್ನ ಹೇಳಿದರು.
ಮಹಾತ್ಮ ಗಾಂಧೀಜಿ ಹತ್ಯೆಯಾದ ಸಂದರ್ಭದಲ್ಲಿ ಸ್ವಯಂಸೇವಕರು ಹಾಗೂ ಸಂಘದ ಮುಖಂಡರು ದುಃಖ ವ್ಯಕ್ತಪಡಿಸಿದ್ದರು. ಡಾ. ಹೆಡಗೇವಾರ ಅವರು ದೇಶದ ಪ್ರಧಾನಿ ಮತ್ತು ಗೃಹ ಸಚಿವರಿಗೆ ಈ ಕುರಿತು ಟೆಲಿಗ್ರಾಂ ಕಳುಹಿಸಿದ್ದರು. ಆದರೂ ಸ್ವಯಂಸೇವಕರ ವಿರುದ್ಧ ಆರೋಪಗಳು ಕೇಳಿಬಂದವು. ಇದರ ಪರಿಣಾಮವಾಗಿ ಬೆಳಗಾವಿ ಜಿಲ್ಲೆಯ ತೆರದಾಳ ಗ್ರಾಮದಲ್ಲಿ ಎಂಟು ಸ್ವಯಂಸೇವಕರು ಬಲಿಯಾಗುವಂತಾಯಿತು ಎಂದು ಅವರು ಹೇಳಿದರು.
ಗಂಗಾನದಿಯಂತೆ ಹರಿಯುವ ಆರ್‌ಎಸ್‌ಎಸ್ ಕೊನೆಗೆ ಸಮುದ್ರವನ್ನು ಸೇರುವಂತಾಗಬೇಕು ಎಂಬುದು ಸಂಘದ ಆಶಯವಾಗಿದೆ. ಬ್ರಿಟಿಷರ ಕಾಲದಿಂದಲೂ ಸಂಘವನ್ನು ಮುಗಿಸುವ ಪ್ರಯತ್ನಗಳು ನಡೆದಿವೆ. ನಂತರವೂ ಹಲವು ಆರೋಪಗಳನ್ನು ಎದುರಿಸಿದರೂ ಸಂಘವು ದೇಶಸೇವೆಯ ಕಾರ್ಯದಲ್ಲಿ ಮುನ್ನಡೆಯುತ್ತಿದೆ ಎಂದರು.ಭಾರತವು ಹಿಂದಿನಿಂದಲೂ ವಿಶ್ವವನ್ನು ವಿಶಾಲ ದೃಷ್ಟಿಕೋನದಿಂದ ನೋಡುತ್ತ ಬಂದಿದೆ. ಕೋವಿಡ್ ಸಂದರ್ಭದಲ್ಲಿ ದೇಶದ ಜನರಿಗೆ ಉಚಿತವಾಗಿ ಲಸಿಕೆ ನೀಡುವುದರ ಜತೆಗೆ ನೂರಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ಪೂರೈಸಲಾಗಿದೆ. ಇಂತಹ ಭಾರತದ ಬಗ್ಗೆ ಪ್ರತಿಯೊಬ್ಬರೂ ಗೌರವದ ಭಾವನೆ ಹೊಂದಬೇಕು. ದೇಶದ ಏಕತೆ, ಸೇವೆ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸುವುದೇ ಸ್ವಯಂಸೇವಕರು ಹಾಗೂ ಸಂಘದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.