ಮಕ್ಕಳಲ್ಲಿ ಓದುವ ಕಾಯಕ, ಸಂಸ್ಕಾರ ಬೆಳೆಸಿ: ಡಾ. ನಾಗಲಕ್ಷ್ಮೀ ಚೌಧರಿ

KannadaprabhaNewsNetwork |  
Published : Aug 01, 2026, 03:30 AM IST
ಮಾತೋಶ್ರೀ ಬಸಮ್ಮ ಎಸ್. ಪಾಟೀಲ ಅವರ ಪುಣ್ಯಸ್ಮರಣೋತ್ಸವ ಅಂಗವಾಗಿ ಜರುಗಿದ ಮಹಿಳಾಗೋಷ್ಠಿ ಉದ್ಘಾಟಿಸಿ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಮಾತನಾಡಿದರು. | Kannada Prabha

ಸಾರಾಂಶ

ರೋಣ ಪಟ್ಟಣ ರಾಜೀವಗಾಂಧಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಮಾತೋಶ್ರೀ ಬಸಮ್ಮ ಎಸ್. ಪಾಟೀಲ ಪುಣ್ಯ ಸ್ಮರಣೋತ್ಸವ ಸಮಿತಿ ವತಿಯಿಂದ ಶುಕ್ರವಾರ ಜರುಗಿದ ಮಾತೋಶ್ರೀ ಬಸಮ್ಮ ಎಸ್. ಪಾಟೀಲ ಅವರ 22ನೇ ಪುಣ್ಯಸ್ಮರಣೆ ಅಂಗವಾಗಿ ಜರುಗಿದ ಮಹಿಳಾಗೋಷ್ಠಿಯನ್ನು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಉದ್ಘಾಟಿಸಿದರು.

ರೋಣ: ಮಕ್ಕಳಲ್ಲಿ ಓದುವ ಹವ್ಯಾಸ ಮತ್ತು ಸಂಸ್ಕಾರ ಕಲಿಸುವಲ್ಲಿ ತಾಯಂದಿರ ಪಾತ್ರ ಅತಿ ಮುಖ್ಯ. ಅಂದಾಗ ಉತ್ತಮ ಸಮಾಜ ನಿರ್ಮಾಣವಾಗುವುದು ಎಂದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.

ಪಟ್ಟಣ ರಾಜೀವಗಾಂಧಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಮಾತೋಶ್ರೀ ಬಸಮ್ಮ ಎಸ್. ಪಾಟೀಲ ಪುಣ್ಯ ಸ್ಮರಣೋತ್ಸವ ಸಮಿತಿ ವತಿಯಿಂದ ಶುಕ್ರವಾರ ಜರುಗಿದ ಮಾತೋಶ್ರೀ ಬಸಮ್ಮ ಎಸ್. ಪಾಟೀಲ ಅವರ 22ನೇ ಪುಣ್ಯಸ್ಮರಣೆ ಅಂಗವಾಗಿ ಜರುಗಿದ ಮಹಿಳಾಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಹೆಣ್ಣು ಮಕ್ಕಳಿಗೆ ಶಕ್ತಿಯಿದ್ದಂತೆ. ಶಿಕ್ಷಣ ಪಡೆದ ಹೆಣ್ಣು ಮಕ್ಕಳಿಗೆ ಸಾಕಷ್ಟು ಸ್ಥಾನಮಾನಗಳು ದೊರೆಯುತ್ತವೆ. ಸಮಾಜ ಗೌರವಿಸುತ್ತದೆ. ಹೆಣ್ಣು ಮಕ್ಕಳನ್ನು ಯಾರು ಗೌರವಿಸುತ್ತಾರೋ ಆ ಮನೆತನ ಎತ್ತರಕ್ಕೆ ಬೆಳೆಯುತ್ತದೆ.

ಮನೆಯಲ್ಲಿರುವ ತಾಯಿ, ತಂಗಿ, ಅಕ್ಕ, ಅಜ್ಜಿಯನ್ನು ಗೌರವಿಸಿದಲ್ಲಿ ಆ ರಾಜ್ಯ ಜಗತ್ತಿನಲ್ಲಿ ಮೊದಲನೇ ಸ್ಥಾನದಲ್ಲಿರುತ್ತದೆ. ಇಂತಹ ಸಂಸ್ಕಾರ ಪ್ರತಿಯೊಬ್ಬರಲ್ಲಿ ಬೆಳೆಯಬೇಕು ಎಂದರು.

ಅಪ್ಪ, ಅಮ್ಮನ ಮನಸ್ಸಿಗೆ ನೋವಾಗದಂತೆ ವ್ಯಕ್ತಿತ್ವ ರೂಪಿಸಿಕೊಳ್ಳಿ. ಪ್ರೀತಿ, ಪ್ರೇಮ ವ್ಯಾಮೋಹಕ್ಕೆ ಸಿಲುಕಿ, ಮನೆ ಬಿಟ್ಟು ಹೋಡಿ ಹೋಗುವುದನ್ನು ಮಾಡಬೇಡಿ. ಇದರಿಂದ ತಂದೆ-ತಾಯಿಗಳಿಗೆ ನೋವು ಮಾಡಬೇಡಿ. ಜವಾಬ್ದಾರಿ ಹಂತಕ್ಕೆ ಬಂದಮೇಲೆ ಪ್ರೀತಿ ಮಾಡಿ, ಮದುವೆ ಆಗಿ. ಎಲ್ಲರ ವಿಶ್ವಾಸ ಸಂಪಾದಿಸಿ. ಜೀವನದಲ್ಲಿ ತಪ್ಪು ಮಾಡೋದು ಸಹಜ, ಆದರೆ ಆ ತಪ್ಪನ್ನು ಒಪ್ಪಿಕೊಂಡು, ತಿದ್ದಿಕೊಂಡು ನಡೆಯಬೇಕು. ಅಂದಾಗ ಬದುಕು ಸುಂದರವಾಗುತ್ತದೆ. ಮಹಿಳೆಯರು ಧೈರ್ಯಶಾಲಿಗಳಾಗಬೇಕು. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಯಾವುದೇ ಮುಲಾಜಿಲ್ಲದೇ ಪೊಲೀಸ್ ಠಾಣೆಗೆ ದೂರು ಕೊಡಿ. ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣವಾಗಬೇಕು. ಹೆಣ್ಣು ಮಕ್ಕಳನ್ನು ಎಲ್ಲಿ ಪ್ರೀತಿ, ಗೌರವಿಸಿ, ಆರಾಧಿಸಿದಲ್ಲಿ ಅಭಿವೃದ್ಧಿಯಾಗುವುದು‌ ಎಂದರು.

ಬಳಗಾನೂರ ಮಠದ ಶಿವಶಾಂತವೀರ ಶರಣರು ಸಾನ್ನಿಧ್ಯ ವಹಿಸಿದ್ದರು. ಡಾ. ಶಶಿಕಲಾ ಬಾಣಿ ಮಾತೋಶ್ರೀ ಬಸಮ್ಮತಾಯಿ ಅವರ ಸಾರ್ಥಕ ಬದುಕು ಕುರಿತು ಉಪನ್ಯಾಸ ನೀಡಿದರು. ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಶಿಕಲಾ ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಿಥುನ ಜಿ. ಪಾಟೀಲ, ಸುಧಾ ಹುಚ್ಚಮ್ಮನವರ, ಡಾ. ಐ.ಬಿ. ಕೊಟ್ಟೂರಶೆಟ್ಟಿ ಉಪಸ್ಥಿತರಿದ್ದರು. ಮಂಜುಳಾ‌ ಪಾಟೀಲ ಸ್ವಾಗತಿಸಿದರು. ಗೀತಾ ಯಾಳಗಿ ಕಾರ್ಯಕ್ರಮ ನಿರೂಪಿಸಿದರು.

ಲವ್ ಮಾಡುವ ಯುವತಿಯರಿಗೆ ಕಿವಿಮಾತು: ಓದುವ ಸಮಯಕ್ಕೆ ಓದಬೇಕ್ರಿ, ಲವ್ ಮಾಡೊ ಟೈಂಲ್ಲಿ ಲವ್ ಮಾಡ್ರಿ. ಲವ್ ಮಾಡೋದಾದ್ರೆ ಚೊಲೋ ಹುಡುಗನ್ ಲವ್ ಮಾಡ್ರಿ. ಅವಾ ಜೀವನದೂದ್ದಕ್ಕು ಇರಬೇಕ್ರಿ. ಒಂದ ವೇಳೆ ನಡಬರಕಾ ಹುಡುಗ್ ಕೈ ಬಿಟ್ರಿ ನೀವೇನ್ ಮಾಡ್ತೀರಿ? ಅದಕ್ ಹೇಳೋದು, ಶಾಲೆ ಕಲಿಯುವಾಗ ಚಂದಗ್ ಕಲಿರಿ. ನೌಕರಿ ತಗೋರಿ, ಆಮೇಲೆ‌ ಲವ್, ಮದುವೆ ಅಂತ ಹೋಗಿ. ಅರ್ಧಕ್ಕೆ ಕಲಿಯೋದು ಬಿಟ್ಟು ಲವ್ ಮಾಡಿ ಓಡಿ ಹೋಗಿ ತಂದೆ, ತಾಯಿಗೆ ನೋವು ಕೊಡಬ್ಯಾಡ್ರಿ ಎಂದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಕಿವಿಮಾತು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಅರಣ್ಯವಾಸಿಗಳ ಆಕ್ರೋಶ
ಜಾಲಿ ಯೋಗ ತರಬೇತಿ ಕೇಂದ್ರದಲ್ಲಿ ಗುರುಪೂರ್ಣಿಮೆ ಆಚರಣೆ