ತಾಲೂಕಾಸ್ಪತ್ರೆಯಲ್ಲಿ ಆಧುನಿಕ ತಂತ್ರಜ್ಞಾನದ ಉಪಕರಣಗಳ ಲೋಕಾರ್ಪಣೆ
ಯಲ್ಲಾಪುರ ಸರ್ಕಾರಿ ಆಸ್ಪತ್ರೆ ದೇವಮಂದಿರದಂತೆ ಸ್ವಚ್ಛ ಮತ್ತು ವ್ಯವಸ್ಥಿತವಾಗಿದೆ. ಇಲ್ಲಿ ನನ್ನಿಂದ ಸೇರಿದಂತೆ ಎಲ್ಲ ಜನಪ್ರತಿನಿಧಿಗಳಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಗತ್ಯವಾದ ಸೇವಾ ಸೌಲಭ್ಯ ಪಡೆಯಬೇಕು. ಆ ದೃಷ್ಟಿಯಿಂದಲೇ ೭೫ ಲಕ್ಷಕ್ಕೂ ಹೆಚ್ಚಿನ ತುರ್ತು ಅಗತ್ಯದ ಉಪಕರಣಗಳನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಸರ್ಕಾರದಿಂದ ನೀಡಲಾದ ಅತ್ಯಂತ ಆಧುನಿಕ ತಂತ್ರಜ್ಞಾನದ ಉಪಕರಣಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.ನಮ್ಮ ಆಸ್ಪತ್ರೆಯಲ್ಲಿ ಎಷ್ಟು ವೈದ್ಯರಿದ್ದಾರೆ ಎನ್ನುವುದು ಮುಖ್ಯವಲ್ಲ. ಇದ್ದ ವೈದ್ಯರು ಬಂದ ಜನರನ್ನು ಪ್ರೀತಿಯಿಂದ, ಗೌರವದಿಂದ, ನಗುಮುಖದ ಸೇವೆ ಸರಿಯಾದ ಸಮಯಕ್ಕೆ ಸಲ್ಲಿಸುತ್ತಾರೆನ್ನುವುದು ಮುಖ್ಯ. ಕೆಲವು ವೈದ್ಯರ ಕೊರತೆಗಳಿದ್ದರೂ ಹೆಚ್ಚಿನ ತಜ್ಞ ವೈದ್ಯರು ಇದ್ದು, ಬಡವರಿಗೂ ಸೇರಿದಂತೆ ಸಾಮಾನ್ಯದಿಂದ ಎಲ್ಲ ವರ್ಗದವರಿಗೂ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ದೊರೆಯುತ್ತಿದೆ. ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ರಕ್ತ ತಪಾಸಣೆಗೆ ೫-೬ ಸಾವಿರ ರೂ.ಗಳಿಗೆ. ಇಲ್ಲಿ ಉಚಿತ ಎನ್ನಬಹುದು. ಅಲ್ಲದೇ ಡಯಾಲಿಸಿಸ್ ಮಾಡುವವರಿಗೆ ಖಾಸಗಿಯಲ್ಲಿ ಕನಿಷ್ಠ ೫೦೦೦ ರೂ ನೀಡಬೇಕು. ಇತರೆ ಖರ್ಚು ಬೇರೆ. ಅಲ್ಲದೇ ಇಲ್ಲಿ ನಾನು ನೀಡಿದ ಎರಡನ್ನೂ ಸೇರಿ ೫ ಡಯಾಲಿಸಿಸ್ ಯಂತ್ರವಿದೆ. ಈಗಾಗಲೇ ೨೬ ಜನ ಅದರ ಸೌಲಭ್ಯ ಪಡೆಯುತ್ತಿದ್ದಾರೆ. ಈ ಆಸ್ಪತ್ರೆ ಬಗ್ಗೆ ಜನರಲ್ಲಿ ಒಳ್ಳೆಯ ಭಾವನೆ, ವಿಶ್ವಾಸವಿದೆ. ಬೇರೆ ಪ್ರದೇಶಗಳವರಿಗೂ ಉತ್ತಮ ಅಭಿಪ್ರಾಯವಿದೆ. ಇಲ್ಲಿ ರಾತ್ರಿ ೮ ಗಂಟೆಯವರೆಗೂ ಪೋಸ್ಟ ಮಾಟಂ ಮಾಡಿದ ಉದಾಹರಣೆ ಇದೆ. ವೈದ್ಯರ ಸೇವೆ ಹೀಗೆಯೇ ಇರಬೇಕು. ಮಾನವೀಯತೆಯ ಗುಣ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಸಮಾಜದಿಂದ ಗೌರವ ಸಿಗುತ್ತದೆ. ಇಲ್ಲಿನ ವೈದ್ಯರು, ನರ್ಸ್ಗಳು ಮತ್ತು ಸ್ವಚ್ಛತೆ ಮಾಡುವವರು ಉತ್ತಮ ಕೆಲಸ ಮಾಡುತ್ತಿರುವುದನ್ನು ಗಮನಿಸಿದ್ದೇನೆ. ಇದನ್ನು ಹೀಗೆಯೇ ಕಾದುಕೊಂಡು ಮುಂದುವರೆಸಬೇಕು. ಇಷ್ಟೊಂದು ದೊಡ್ಡ ಪ್ರಮಾಣದ ಯಂತ್ರಗಳನ್ನು ನೀಡಿದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಆರೋಗ್ಯ ಮಂತ್ರಿಗಳನ್ನು ಅಭಿನಂದಿಸುತ್ತೇನೆ ಎಂದರು.ತಾಲೂಕಾ ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ ಆರೋಗ್ಯ ರಕ್ಷಾ ಸಮಿತಿಯ ಸಮಗ್ರ ವರದಿ ನೀಡಿ, ರಕ್ತ ತಪಾಸಣೆ, ಥೈರಾಯ್ಡ್, ಕಿಡ್ನಿ, ಕೊಲೆಸ್ಟ್ರಾಲ್ ಸೇರಿ ಎಲ್ಲ ರೀತಿಯ ತಪಾಸಣೆಗಳು ಇಲ್ಲಿವೆ. ನೇತ್ರತಜ್ಞರಿಗೂ ಅಗತ್ಯವಾದ ಮೈಕ್ರೋಸ್ಕೋಪ್ ಹೈಟೆಕ್ ಉಪಕರಣಗಳು ಬಂದಿವೆ ಎಂದರು. ಎಲುಬು ತಜ್ಞ ಡಾ. ಭರತ್ ಮಾತನಾಡಿ, ಅತ್ಯಂತ ಆಧುನಿಕ ಯಂತ್ರೋಪಕರಣಗಳು ನಮಗೆ ಲಭಿಸಿವೆ. ಶಸ್ತ್ರಚಿಕಿತ್ಸೆ ಮಾಡುತ್ತಿರುವಾಗಲೇ ಎಕ್ಸ್-ರೇ ಮೂಲಕ ನಮಗೆ ಶಸ್ತ್ರಚಿಕಿತ್ಸೆಯ ಮಾಹಿತಿ ಪಡೆಯಲಾಗುತ್ತದೆ. ಆಧುನಿಕ ತಂತ್ರಜ್ಞಾನದ ಉಪಕರಣ ನಮಗೆ ಲಭಿಸಿದೆ. ಒಂದು ಸಣ್ಣ ಮೂಳೆ ಚೂರು ಸಹಿತ ಶಸ್ತ್ರಚಿಕಿತ್ಸೆ ಮಾಡುತ್ತಿರುವಾಗ ಕಾಣಬಹುದು ಎಂದರು. ತಹಶೀಲ್ದಾರ ಜುಪಿಶಾನಾ ಹಕ್ (ಐಎಎಸ್), ವಿಸನ್ ಜನಪ್ರದೇಶಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ವಿಜಯ ಮಿರಾಶಿ, ಕಾರ್ಯದರ್ಶಿ ಸತೀಶ ನಾಯ್ಕ, ಬಿಸಿಸಿ ಅಧ್ಯಕ್ಷ ವಿ.ಎಸ್. ಭಟ್ಟ, ವೈದ್ಯರಾದ ಡಾ. ವಿನಾಯಕ, ಡಾ. ಮಂಜುನಾಥ, ಡಾ. ಪ್ರವೀಣ ಉಪಸ್ಥಿತರಿದ್ದರು. ನೇತ್ರತಜ್ಞೆ ಡಾ. ಸೌಮ್ಯಾ ಕೆ.ವಿ. ಸ್ವಾಗತಿಸಿ, ವಂದಿಸಿದರು.