ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮನಸ್ಸನ್ನು ಶುದ್ಧೀಕರಣ ಮಾಡುವ ಕಾರ್ಯಕ್ಕಾಗಿ ರೂಪಿಸಿಕೊಂಡ ಮಾಧ್ಯಮಗಳೇ ಸಾಂಸ್ಕೃತಿಕ ವಿಚಾರಗಳು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಹಾಗೂ ಜನಪದ ಕಲಾವಿದ ಡಾ.ಕಾ.ರಾಮೇಶ್ವರಪ್ಪ ಹೇಳಿದರು. ಪಟ್ಟಣದ ಜೆಎಸ್‌ಎಸ್ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಅಂಕಗಳಿಕೆಯಷ್ಟೇ ಮುಖ್ಯವಾಗಿರುವ ಈ ದಿನಗಳಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯೂ ಮುಖ್ಯವಾಗಬೇಕು, ಇಂದು ಶಿಕ್ಷಕರು ಶಿಕ್ಷಣದ ಭಾಗವಾಗಿ ಸಾಂಸ್ಕೃತಿಕತೆಯನ್ನು ಬೋಧಿಸುವಲ್ಲಿ ಸೋತಿದ್ದೇವೆ.ಸಂಸ್ಕೃತಿಯ ಕೇಂದ್ರಬಿಂದು ಮನಸ್ಸು. ಸಂಸ್ಕೃತಿಯ ಭಾಗವಾದ ಜನಪದ ಸಾಹಿತ್ಯವನ್ನು ಓದುವಿಕೆ ಕೇಳುವಿಕೆಯ ಮೂಲಕ ದೊರೆಯುವ ಪ್ರತಿಫಲಕ್ಕೆ ಬೆಲೆಕಟ್ಟಲಾಗದು. ಎಲ್ಲ ಮನುಷ್ಯರ ಬದುಕು ಮೈಮನಸ್ಸುಗಳ ಸಂಘರ್ಷವೆ ಆಗಿದ್ದು, ಯಾರು ಎರಡನ್ನೂ ಸಮಾನ ತೂಕದಲ್ಲಿ ಕೊಂಡೊಯ್ಯುವರೋ ಅವರೇ ಸಾಧಕರು, ಜಿಲ್ಲೆಯ ಭೌಗೋಳಿಕ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಶ್ಲಾಘಿಸಿ, ಗುರಿ ಹಾಗೂ ಗುರುವಿನ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿನಿಯರು ಸಾಧನೆಗೈಯಬೇಕು, ವಿದ್ಯೆಯೊಂದೇ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಎಂದರು.ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎನ್.ಮುನಿರಾಜು ಮಾತನಾಡಿ, ಇಂದಿನ ಯುವಜನತೆಯ ಆಸಕ್ತಿ ವಿಷಯಗಳು ಆತಂಕಕಾರಿಯಾಗಿವೆ. ಭಾರತದಂತಹ ಶ್ರೇಷ್ಠ ಪರಂಪರೆ ಹಾಗೂ ಬಹುಸಂಸ್ಕೃತಿಯ ನಾಡಿನಲ್ಲಿ ಘನತೆಯೊಂದಿಗೆ ಬದುಕಬೇಕು. ನೆಲ ಮತ್ತು ನುಡಿಯ ಬಗ್ಗೆ ಅಭಿಮಾನವಿರಬೇಕು ನಮ್ಮ ಸಂಸ್ಕೃತಿಯ ಅರಿವಿನೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ, ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ. ಪದವಿಪೂರ್ವ ಘಟ್ಟ ವಿದ್ಯಾರ್ಥಿ ಜೀವನದ ಪ್ರಮುಖ ತಿರುವಾಗಿದ್ದು ಯಶಸ್ವಿಯಾಗಿ ಈ ನಿಟ್ಟಿನಲ್ಲಿ ಮುಂದೆ ಸಾಗಿ ಎಂದರು.ಚಾಮರಾಜನಗರ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಮಂಜುನಾಥ ಪ್ರಸನ್ನ, ಪ್ರಾಂಶುಪಾಲ ಎನ್.ಮಹದೇವಸ್ವಾಮಿ ಜನಪದ ಕಲಾವಿದರಾದ ಸಿ.ಎಂ.ನರಸಿಂಹಮೂರ್ತಿ, ಅರುಣ್ ಮಾಂಬಳ್ಳಿ, ಮಿಮಿಕ್ರಿ ಮಲ್ಲಣ್ಣ ಇನ್ನಿತರರಿದ್ದರು.