ಕನ್ನಡಪ್ರಭ ವಾರ್ತೆ ಹೊಸದುರ್ಗ
ಪಠ್ಯಶಿಕ್ಷಣದ ಜೊತೆಗೆ ಸಂಸ್ಕಾರಯುತ ಶಿಕ್ಷಣ ಕಲಿತು, ನಿಮ್ಮ ತಂದೆ ತಾಯಿಗಳಿಗೆ, ಕುಟುಂಬಕ್ಕೆ, ಪಾಠ ಹೇಳಿಕೊಟ್ಟ ಗುರುಗಳಿಗೆ ಮತ್ತು ನಿಮ್ಮೂರಿಗೆ ಒಳ್ಳೆಯ ಹೆಸರು ತನ್ನಿ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕಾಲೇಜು ವತಿಯಿಂದ ಶನಿವಾರ ಏರ್ಪಡಿಸಿದ್ದ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಸಮಾರೋಪ ಸಮಾರಂಭ ಕಾರ್ಯಕ್ರಮ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪದವಿ ದೊಡ್ಡದಲ್ಲ, ಸಂಸ್ಕಾರ ದೊಡ್ಡದು. ಯಾವುದೇ ಪದವಿ ಇದ್ದರೂ, ಸಂಸ್ಕಾರಯುತ ಶಿಕ್ಷಣ ಬಹಳ ಮುಖ್ಯ. ನೀವೇ ಈ ದೇಶದ ಆಸ್ತಿ. ನಿಮಗೆ ಸವಾಲುಗಳ ಜೊತೆಗೆ ಜವಾಬ್ದಾರಿಗಳಿದ್ದು, ಎಲ್ಲವನ್ನು ಎದುರಿಸುವ ಸ್ಥಿರತೆ ನಿಮ್ಮಲ್ಲಿರಬೇಕು. ಬಡ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದರೆ, ಆ ಕುಟುಂಬದ ಮಕ್ಕಳು ಸಮಾಜದ ಮುಖ್ಯ ವಾಹಿನಿಗೆ ಬರುತ್ತಾರೆ. ಮಕ್ಕಳು ಕಲಿಯುವ ವಯಸ್ಸಿನಲ್ಲಿ ಯಾವುದೇ ದುಶ್ಚಟಕ್ಕೆ, ದುರಭ್ಯಾಸಕ್ಕೆ ಬಲಿಯಾಗದೆ, ಒಳ್ಳೆಯ ಶ್ರದ್ಧೆ, ಹವ್ಯಾಸಗಳು ಇದ್ದಾಗ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ. ನಾಡಿನ ಸಂಸ್ಕೃತಿ ಮತ್ತು ಸಂಸ್ಕಾರ ಎತ್ತಿ ಹಿಡಿಯುವ ಕೆಲಸ ನಿಮ್ಮಿಂದಾಗಬೇಕು. ನಿಮ್ಮ ತಂದೆ ತಾಯಿಗಳ ನಿರೀಕ್ಷೆ ಹುಸಿಯಾಗದಂತೆ ಕುಟುಂಬ ಕಟ್ಟುವ, ದೇಶ ಕಟ್ಟುವ ಮಹತ್ವದ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಸಲಹೆ ನೀಡಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಈ ಬಾರಿ ನ್ಯಾಕ್ ಕಮಿಟಿ ಬಿ ಶ್ರೇಣಿ ಗ್ರೇಡ್ ನೀಡಿದೆ. ಹಿಂದೆ ಬಿ ಗ್ರೇಡ್ ಇತ್ತು. ನಮ್ಮ ಪದವಿ ಕಾಲೇಜು ಜಿಲ್ಲೆಯಲ್ಲಿಯೇ ಒಳ್ಳೆಯ ಕಾಲೇಜು ಎಂಬ ಹಿರಿಮೆ ಪಡೆಯಬೇಕೆಂಬ ಅಭಿಲಾಷೆ ಇದೆ. ಉನ್ನತ ಶಿಕ್ಷಣ ಸಚಿವರಿಂದ ಕಾಲೇಜು ಅಭಿವೃದ್ಧಿಗೆ ₹2 ಕೋಟಿ ಅನುದಾನ ಕೇಳಲಾಗಿತ್ತು. ಸಚಿವರು ನಮ್ಮ ಮನವಿಗೆ ಒಪ್ಪಿದ್ದಾರೆ. ಸದ್ಯದಲ್ಲಿಯೇ, ಕಾಲೇಜು ಅಭಿವೃದ್ಧಿಗೆ ಹಣ ಬಿಡುಗಡೆಯಾಗಲಿದೆ ಎಂದರು.
ಕಳೆದ ಬಾರಿ ನಾನು ಶಾಸಕನಾಗಿದ್ದ ಅವಧಿಯಲ್ಲಿ ಪಟ್ಟಣಕ್ಕೆ ಹಲವು ಹಾಸ್ಟೆಲ್ ತಂದಿದ್ದೇನೆ. ಮತ್ತೆ ಇದೀಗ 100 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಮಾಡಲಾಗುವುದು. ಶೀಘ್ರದಲ್ಲಿಯೇ, ಆಡಿಟೋರಿಯಂ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ, ನಿಮ್ಮ ಮುಂದಿನ ಕಾರ್ಯಕ್ರಮ ಅಲ್ಲಿಯೇ ನಡೆಯುವಂತೆ ಮಾಡುತ್ತೇವೆ. ವಿದ್ಯಾರ್ಥಿಗಳಿಗೆ ಬೇಕಾಗಿರುವ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲು ಸಿದ್ಧರಿದ್ದೇವೆ. ನೀವು ಕೂಡ ಬಡ ಕುಟುಂಬದ ಮಕ್ಕಳನ್ನು ಶೈಕ್ಷಣಿಕವಾಗಿ ಮೇಲೆತ್ತಬೇಕು ಎನ್ನುವ ಸದುದ್ದೇಶದಿಂದ ಸರ್ಕಾರ ಹಲವು ಕಾರ್ಯಕ್ರಮ ರೂಪಿಸಿದೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಇದೇ ಸಂದರ್ಭದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಜಯಶೀಲರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಭ್ರಮರಾಂಭ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಲಹಾ ಸಮಿತಿ ಸದಸ್ಯರಾದ ಆಗ್ರೋ ಶಿವಣ್ಣ, ಕೆ.ಸಿ.ನಿಂಗಪ್ಪ, ಇಲ್ಕಲ್ ವಿಜಯಕುಮಾರ್, ಅಶ್ರಫ್ ಮತ್ತು ದೀಪಿಕಾ ಸತೀಶ್ ಸೇರಿ ಇನ್ನಿತರು ಇದ್ದರು.