ಉಡುಪಿ: ಕರಾವಳಿ ಕರ್ನಾಟಕದ ಪ್ರಸಿದ್ಧ ಸಾಹಿತ್ಯಿಕ-ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಒಂದಾದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯು ಜ. 24, 25 ಮತ್ತು 26ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಸಂಸ್ಕೃತಿ ಉತ್ಸವ ಆಯೋಜಿಸುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
25ರಂದು ಸಂಜೆ 5.15ಕ್ಕೆ ಪಂಚಮಿ ಟ್ರಸ್ಟ್ ಉಡುಪಿ ಪ್ರಾಯೋಜಿತ ಪುರಸ್ಕಾರವನ್ನು ಕನ್ನಡದ ಹಿರಿಯ ಸಾಹಿತಿ ಹಾಗೂ ಕಿರುತೆರೆ ನಿರ್ದೇಶಕ ಟಿ. ಎನ್. ಸೀತಾರಾಂ ಅವರಿಗೆ ನೀಡುತ್ತಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ನಾಡೋಜ ಪ್ರೊ. ಕೆ. ಪಿ. ರಾವ್ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯಕ್ಷ ರಂಗಾಯಣ ಕಾರ್ಕಳದ ನಿರ್ದೇಶಕ ಬಿ. ಆರ್. ವೆಂಕಟರಮಣ ಐತಾಳ್ ಹಾಗೂ ಪಂಚಮಿ ಟ್ರಸ್ಟ್ ಸಂಸ್ಥಾಪಕ ಡಾ. ಎಂ. ಹರೀಶ್ಚಂದ್ರ ಉಪಸ್ಥಿತರಿರುತ್ತಾರೆ. ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅಭಿನಂದನ ಮಾತುಗಳನಾಡಲಿದ್ದು, ಸುಗುಣ ಸುವರ್ಣ ಹಾಗೂ ಭುವನಪ್ರಸಾದ್ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ. ನಂತರ ಯಕ್ಷ ರಂಗಾಯಣ ಕಾರ್ಕಳದ ರೆಪರ್ಟರಿ ಕಲಾವಿದರಿಂದ ‘ಗುಲಾಮನ ಸ್ವಾತಂತ್ರ್ಯ ಯಾತ್ರೆ’ ಪ್ರದರ್ಶನಗೊಳ್ಳಲಿದೆ.
26ರಂದು ಸಂಜೆ 5.15ಕ್ಕೆ ಪ್ರಭಾವತಿ ಶೆಣೈ, ಉಡುಪಿ ವಿಶ್ವನಾಥ ಶೆಣೈ ಪ್ರಯೋಜಿತ ‘ವಿಶ್ವ ಪ್ರಭಾ’ ಪುರಸ್ಕಾರ ವನ್ನು ಶಿಕ್ಷಣ ತಜ್ಞರಾದ ಅಶೋಕ್ ಕಾಮತ್ ಅವರಿಗೆ ನೀಡಲಾಗುವುದು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ ವಹಿಸಲಿದ್ದು, ಅಭಿನಂದನ ಮಾತನ್ನು ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ಕೆ. ಮಾಡಲಿದ್ದಾರೆ. ಸಮಾರಂಭದಲ್ಲಿ ಸಿ. ಎಸ್. ರಾವ್, ಕೃಷ್ಣರಾಜ ತಂತ್ರಿ, ಪ್ರಭಾವತಿ ಶೆಣೈ, ಪ್ರಶಾಂತ್ ಕಾಮತ್ ಉಪಸ್ಥಿತರಿರುತ್ತಾರೆ. ಸಭಾ ಕಾರ್ಯಕ್ರಮದ ನಂತರ ಯಕ್ಷ ರಂಗಾಯಣದ ಕಲಾವಿದರಿಂದ ‘ಮಹಾತ್ಮರ ಬರವಿಗಾಗಿ’ ನಾಟಕ ಪ್ರದರ್ಶನಗೊಳ್ಳಲಿದೆ.ಕಲಾಭಿಮಾನಿಗಳಿಗೆ, ಸಾಹಿತ್ಯ ಆಸಕ್ತರಿಗೆ ಉಚಿತ ಪ್ರವೇಶವಿರುತ್ತದೆ ಎಂದು ಸಂಸ್ಥೆಯ ಸಂಚಾಲಕ ರವಿರಾಜ್ ಎಚ್.ಪಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.