ಕನ್ನಡಪ್ರಭ ವಾರ್ತೆ ಮೈಸೂರು
ತಂದೆ- ತಾಯಿ, ಗುರು ಹಿರಿಯರೊಂದಿಗೆ ಗೌರವದಿಂದ ನಡೆದುಕೊಳ್ಳುವ ಗುಣ ಮಕ್ಕಳಲ್ಲಿ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಇಂತಹ ಬೆಳವಣಿಗೆ ಭವಿಷ್ಯದಲ್ಲಿ ಸಮಾಜದ ಸ್ವಾಸ್ಥ್ಯಕ್ಕೆ ಹಾನಿಕಾರಕ. ಹೀಗಾಗಿ, ಮೌಲ್ಯಯುತ ಶಿಕ್ಷಣದ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ ಎಂದು ಪದವಿ ಪೂರ್ವ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಎಂ. ಮರಿಸ್ವಾಮಿ ತಿಳಿಸಿದರು.ನಗರದ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 2024- 25ನೇ ಸಾಲಿನ ಸಾಂಸ್ಕೃತಿಕ ವೇದಿಕೆ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಯಶಸ್ಸಿನತ್ತ ಹೆಜ್ಜೆ ಇಡಲು ಮೊದಲಿಗೆ ಗುರಿ ಮುಖ್ಯ. ಮಹತ್ತರ ಸಾಧನೆಗೈದ ಗಣ್ಯರ ಜೀವನ ಆದರ್ಶಗಳನ್ನು ಅನುಕರಿಸಿ ತಾವು ಕಲಿತ ಸಂಸ್ಥೆಗೆ, ದೇಶಕ್ಕೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.
ಪಿಯುಸಿ ನಿರ್ಣಾಯಕ ಘಟ್ಟಸಾಂಸ್ಕೃತಿಕ ವೇದಿಕೆಯನ್ನು ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಪಿಯುಸಿ ಹಂತದ ಎರಡು ವರ್ಷಗಳು ವಿದ್ಯಾರ್ಥಿ ಜೀವನ ಹಾಗೂ ಇಡೀ ಜೀವನದಲ್ಲಿ ಅತ್ಯಂತ ಅಮೂಲ್ಯ ಹಾಗೂ ಕ್ಲಿಷ್ಟಕರವಾದ ಸಮಯ. ಇದು ಒಬ್ಬ ವ್ಯಕ್ತಿಯ ಒಟ್ಟು ಜೀವಿತಾವಧಿಯ ಗುಣಮಟ್ಟವನ್ನು ನಿರ್ಧಿರಿಸುವ ನಿರ್ಣಾಯಕ ಘಟ್ಟ ಎಂದು ಹೇಳಿದರು.
ಹಿಂದಿನ ಪೀಳಿಗೆಯವರಿಗೆ ಇರದ ಬಹಳಷ್ಟು ಸೌಲಭ್ಯಗಳು ಇಂದು ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನವಾಗಿ ದೊರೆಯುವಂತಾಗಿದೆ. ಆ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಮುಂದೆ ಬರುವುದು ಖಚಿತ. ಕೇವಲ ವಿದ್ಯಾಭ್ಯಾಸದಿಂದ ಮಾತ್ರವೇ ನಮ್ಮ ಬದುಕು ಸುಂದರವಾಗುವುದಿಲ್ಲ. ವಿದ್ಯಾಭ್ಯಾಸದ ಜೊತೆಗೆ ಬದುಕಿಗೆ ಉದ್ದೇಶ, ಛಲ, ಉತ್ಸಾಹ, ಸೌಂದರ್ಯವನ್ನು ತುಂಬಿಕೊಡುವ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳೂ ಅವಶ್ಯಕ ಎಂದು ಅವರು ತಿಳಿಸಿದರು.ಇದೇ ವೇಳೆ 2024ರ ಮೇ ತಿಂಗಳಲ್ಲಿ ಮೌಂಟ್ ಎವರೆಸ್ಟ್ ಶಿಖರವನ್ನು 51ನೇ ವಯಸ್ಸಿನಲ್ಲಿ ಏರಿ ಈ ಸಾಧನೆಗೈದ ಕರ್ನಾಟಕದ ಪ್ರಥಮ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾದ ಡಾ. ಉಷಾ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು ಹಾಗೂ 2023- 24ನೇ ಸಾಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಎಸ್. ಸೋಮಶೇಖರ, ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಎಸ್. ನಂಜುಂಡಸ್ವಾಮಿ, ಕ್ರೀಡಾ ಚಟುವಟಿಕೆಗಳ ಸಂಚಾಲಕರಾದ ದೈಹಿಕ ಶಿಕ್ಷಣ ನಿರ್ದೇಶಕ ಟಿ. ಅರವಿಂದ್ ಇದ್ದರು. ಎ. ಅದಿತಿ ಪ್ರಾರ್ಥಿಸಿದರು. ಡಿ.ಎಂ. ಮಹೇಂದ್ರಮೂರ್ತಿ ಸ್ವಾಗತಿಸಿದರು. ಪಿ.ಎಸ್. ಮಂಜುನಾಥ್ ನಿರೂಪಿಸಿದರು. ಎಚ್.ಆರ್. ಗಾಯತ್ರಿ ವಂದಿಸಿದರು.----
ಕೋಟ್...ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳನ್ನು ಕಂಡು ಕೀಳರಿಮೆಯ ಭಾವನೆ ಬೆಳೆಸಿಕೊಳ್ಳಬಾರದು. ಕುಗ್ರಾಮದಲ್ಲಿ ಹುಟ್ಟಿ ಬೆಳೆದಿದ್ದರೂ ಬದುಕಿನ ಕುರಿತಾದ ತಮ್ಮ ಆಸಕ್ತಿ ಹಾಗೂ ಪರಿಶ್ರಮದ ಮೂಲಕ ಸಾಧನೆಯ ಶಿಖರಕ್ಕೇರಿದ ಕುವೆಂಪು, ಶಿವರಾಮ ಕಾರಂತ, ಅಬ್ದುಲ್ ಕಲಾಂ ಮುಂತಾದವರು ನಮಗೆ ಆದರ್ಶ ಪ್ರಾಯರಾಗಬೇಕು.
- ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಜಂಟಿ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ-- ಬಾಕ್ಸ್----- ಸಾಧನೆಗೆ ವಯಸ್ಸು ಅಡ್ಡಿಯಲ್ಲ--ಕ್ರೀಟಾ ಚಟುವಟಿಕೆ ಉದ್ಘಾಟಿಸಿದ ಜೆಎಸ್ಎಸ್ ದಂತ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿ ಹಾಗೂ ಹಿಮಾಲಯ ಪರ್ವತಾರೋಹಿಗಳಾದ ಡಾ. ಉಷಾ ಹೆಗ್ಡೆ ಮಾತನಾಡಿ, ನಾವು ಯಾವುದೇ ಕ್ಷೇತ್ರದಲ್ಲಿ ಸಾಧನೆಗೈಯ್ಯಬೇಕಿದ್ದರೂ ಅದಕ್ಕೆ ಶಿಕ್ಷಣದ ಹಿನ್ನೆಲೆ ಅತ್ಯಗತ್ಯ. ಶಿಕ್ಷಣ ಮತ್ತು ಸಾಧಿಸುವ ಛಲ ಎರಡರ ಸಮತೋಲನ ಬಹಳ ಮುಖ್ಯ. ವಯಸ್ಸೆನ್ನುವುದು ಕೇವಲ ಸಂಖ್ಯೆಯಷ್ಟೆ. ಅದು ಸಾಧನೆಗೆ ಅಡ್ಡಿಯೆಂದು ಯಾರೂ ಭಾವಿಸಬಾರದು ಎಂದರು.ಪೋಷಕರು ತಮ್ಮ ಮಕ್ಕಳಿಗೆ ತಮ್ಮ ಆಸಕ್ತಿಯ ಕ್ಷೇತ್ರಗಳನ್ನು ಕಂಡುಕೊಳ್ಳಲು ಮತ್ತು ಅದರಲ್ಲಿ ಮುಂದುವರೆಯಲು ಹೆಚ್ಚು ಸ್ವಾತಂತ್ರ್ಯ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಅವರು ಹೇಳಿದರು.