ಸಂಡೂರು: ತಾಲೂಕಿನ ತೋರಣಗಲ್ಲಿನ ವಿಶಾಲ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಚಿಣ್ಣರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಜೆಎಸ್‌ಡಬ್ಲು ಸ್ಟೀಲ್ ನ ಹಿರಿಯ ಉಪಾಧ್ಯಕ್ಷ ಸುನಿಲ್ ರಾಲ್ಫ್, ಮಕ್ಕಳಿಗೆ ಬಾಲ್ಯದಲ್ಲಿ ನೀಡುವ ಗುಣಮಟ್ಟದ ಶಿಕ್ಷಣ ಮಕ್ಕಳ ಉತ್ತಮ ಭವಿಷ್ಯಕ್ಕೆ ಸಹಕಾರಿಯಾಗಲಿದೆ. ಉತ್ತಮ ಶಿಕ್ಷಣ ಜೀವನವನ್ನು ಬದಲಿಸಲಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳಿಗೆ ಮೌಲ್ಯಯುತವಾದ ಶಿಕ್ಷಣ ನೀಡುವುದು ನಮ್ಮ ಆದ್ಯತೆಯಾಗಿರಲಿದೆ ಎಂದು ತಿಳಿಸಿದರು.
ಜೆಎಸ್‌ಡಬ್ಲು ಫೌಂಡೇಶನ್ ಸಿಎಸ್‌ಆರ್ ಮುಖ್ಯಸ್ಥ ಪೆದ್ದಣ್ಣ ಬೀಡಲಾ ಮಾತನಾಡಿ, ಬಾಲ್ಯದ ಶಿಕ್ಷಣ ಮತ್ತು ಆರೈಕೆಗಾಗಿ ಜೆಎಸ್‌ಡಬ್ಲು ಫೌಂಡೇಶನ್ ೨ ವಿಶಾಲ ಅಂಗನವಾಡಿ ಕೇಂದ್ರಗಳಿಗೆ ನೆರವು ನೀಡುತ್ತಿದ್ದು, ಇದುವರೆಗೆ ನಾಲ್ಕು ಸಾವಿರಕ್ಕೂ ಹೆಚ್ಚು ಮಕ್ಕಳು ಅಂಗನವಾಡಿ ಕೇಂದ್ರಗಳಿಂದ ಅನುಕೂಲ ಪಡೆದುಕೊಂಡಿದ್ದಾರೆ. ಕೇಂದ್ರಗಳಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುತ್ತಿದ್ದು, ಇದುವರೆಗೆ ಯಾವುದೇ ಮಕ್ಕಳಲ್ಲಿ ಅಪೌಷ್ಠಿಕತೆ ಕಾಣಿಸಿಕೊಂಡಿಲ್ಲ. ವಿಶಾಲ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳಿಗಾಗಿ ನುರಿತ ಶಿಕ್ಷಕಿಯರನ್ನು ನೇಮಿಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು ಮಕ್ಕಳಿಗಾಗಿ ನಮ್ಮ ಸಮಯ ಎಂಬ ನಾಟಕವನ್ನು ಪ್ರದರ್ಶಿಸಿದರು. ಬಾಲವಾಡಿ ಮಕ್ಕಳು ಯಾರು ದೊಡ್ಡವರು ಎಂಬ ನಾಟಕವನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಜೆಎಸ್‌ಡಬ್ಲು ಫೌಂಡೇಶನ್‌ನ ರಾಜಶೇಖರ, ರಾಜು, ಭವಾನಿ ಸಿಂಗ್, ಅಂಗನವಾಡಿ ಶಿಕ್ಷಕಿಯರಾದ ನೀಲಮ್ಮ, ಸುನಿತಾ, ಮಕ್ಕಳು ಹಾಗೂ ಅವರ ಪಾಲಕರು ಭಾಗವಹಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಸಂಡೂರು ತಾಲೂಕಿನ ತೋರಣಗಲ್ಲಿನ ವಿಶಾಲ ಅಂಗನವಾಡಿಯಲ್ಲಿ ಗುರುವಾರ ನಡೆದ ಚಿಣ್ಣರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜೆಎಸ್‌ಡಬ್ಲು ಸ್ಟೀಲ್ ಹಿರಿಯ ಉಪಾಧ್ಯಕ್ಷ ಸುನಿಲ್ ರಾಲ್ಫ್ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು.
ಸಂಡೂರು ತಾಲೂಕಿನ ತೋರಣಗಲ್ಲಿನ ವಿಶಾಲ ಅಂಗನವಾಡಿಯಲ್ಲಿ ಗುರುವಾರ ನಡೆದ ಚಿಣ್ಣದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಿಣ್ಣರು ನೃತ್ಯ ಪ್ರದರ್ಶಿಸಿದರು.