ಮಡಿಕೇರಿಯ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡ ರಾಮ ದೇವಾಲಯದಲ್ಲಿ ರಾಮೋತ್ಸವ ಕಾರ್ಯಕ್ರಮ ಎರಡು ದಿನಗಳ ಕಾಲ ನಡೆಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿಯ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡ ರಾಮ ದೇವಾಲಯದಲ್ಲಿ ಶ್ರೀ ಕೋದಂಡ ರಾಮೋತ್ಸವ ಸಮಿತಿ ವತಿಯಿಂದ 35ನೇ ವರ್ಷದ ರಾಮೋತ್ಸವ ಕಾರ್ಯಕ್ರಮಗಳು ಎರಡು ದಿನಗಳ ಕಾಲ ಶ್ರದ್ಧಾಭಕ್ತಿ ಮತ್ತು ವಿಜೃಂಭಣೆಯಿಂದ ನಡೆಯಿತು. ಏ.5 ರಂದು ಸಂಜೆ ನಗರದ ಗಾಂಧಿ ಮೈದಾನದಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ಚಂಡೆ, ತೈಯಂ ಕುಣಿತ, ಫ್ಲವರ್ ಡ್ಯಾನ್ಸ್, ತಮಟೆ, ರಾಮ, ಆಂಜನೇಯ ವೇಷಧಾರಿಗಳು, ಹುಲಿ ವೇಷ, ಭಜನಾ ತಂಡಗಳು, ಕಳಸ ಹಾಗೂ ರಾಮನ ಪಲ್ಲಕ್ಕಿ ಮೆರವಣಿಗೆ ಆಕರ್ಷಿಸಿತು. ಮೆರವಣಿಗೆಯು ನಗರದ ಗಾಂಧಿ ಮೈದಾನ, ಜನರಲ್ ತಿಮ್ಮಯ್ಯ ವೃತ್ತ, ಹಳೆಯ ಖಾಸಗಿ ಬಸ್ ನಿಲ್ದಾಣ, ಚೌಕಿ, ಮಹದೇವಪೇಟೆ, ಮಾರುಕಟ್ಟೆ, ಶ್ರೀಚೌಡೇಶ್ವರಿ ದೇವಾಲಯ ಮೂಲಕ ಎ.ವಿ ಶಾಲೆ ಹಿಂಭಾಗ, ಶ್ರೀಮುತ್ತಪ್ಪ ದೇವಾಲಯ ರಸ್ತೆಯಿಂದ ಶ್ರೀಕೋದಂಡರಾಮ ದೇವಾಲಯ ಸೇರಿತು. ಮೆರವಣಿಗೆಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ರಾಮೋಹಳ್ಳಿ ಶ್ರೀ ಸಿದ್ದಾರೂಢ ಮಿಷನ್ ಆಶ್ರಮದ ಶ್ರೀ ಡಾ.ಆರೂಢ ಭಾರತಿ ಸ್ವಾಮೀಜಿ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.ದೇವಾಲಯದಲ್ಲಿ ಪಲ್ಲಕ್ಕಿಯನ್ನು ಹೊತ್ತು ಪೂಜೆ ಸಲ್ಲಿಸಿದ ನಂತರ ಅನ್ನದಾನ ನೆರವೇರಿತು. ರಾತ್ರಿ ವಿವಿಧ ಸಮುದಾಯಗಳಿಂದ ಆಕರ್ಷಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಏ.6 ರಂದು ಶ್ರೀ ಕೋದಂಡ ರಾಮ ದೇವಾಲಯದ ಕ್ಷೇತ್ರ ತಂತ್ರಿಗಳಾದ ಬ್ರ.ಶ್ರೀ.ವೇ.ಮೂ. ಶ್ರೀಕೃಷ್ಣ ಉಪಾಧ್ಯ ಅವರಿಂದ ತತ್ವ ಕಳಸ ಹೋಮ, ನವಗ್ರಹ ಹೋಮ, ತತ್ವ ಕಳಶಾಭಿಷೇಕ, ಗುರು ಗಣಪತಿ ಪೂಜೆ, ಪುಣ್ಯಾಹ, ಸಂಕಲ್ಪ, ಮಹಾಗಣಪತಿ ಹೋಮ, ನವಗ್ರಹ ಹೋಮ, ರಾಮ ತಾರಕ ಹೋಮ, ಕಲಾ ಹೋಮ, ಶಾಂತಿ ಹೋಮ, ನವಕ ಪ್ರಧಾನ ಕಳಶಾಭಿಷೇಕ, ಉತ್ಸವ ಮೂರ್ತಿಯ ದೇವ ದರ್ಶನ ಬಲಿ, ಬಟ್ಟಲು ಕಾಣಿಕೆ, ಅಲಂಕಾರ ಪೂಜೆ ನೆರವೇರಿತು. ಮಧ್ಯಾಹ್ನ ಮಹಾಪೂಜೆಯ ನಂತರ ತೀರ್ಥಪ್ರಸಾದ, ಕೋಸಂಬರಿ, ಪಾನಕ ವಿತರಣೆ ಮತ್ತು ಅನ್ನಸಂತರ್ಪಣೆಯಾಯಿತು. ಎರಡು ದಿನಗಳ ಪೂಜಾ ಕೈಂಕರ್ಯಗಳಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ರಾಮೋತ್ಸವದ ಅಂಗವಾಗಿ ಕೊಡಗು ಮೆಡಿಕಲ್ ಕಾಲೇಜು ವತಿಯಿಂದ ಶ್ರೀ ಕೋದಂಡರಾಮ ದೇವಾಲಯದ ಆವರಣದಲ್ಲಿ ರಕ್ತ ಪರೀಕ್ಷೆ ಮತ್ತು ರಕ್ತದೊತ್ತಡ (ಬಿಪಿ) ಪರೀಕ್ಷೆ ನಡೆಯಿತು. 40 ವರ್ಷ ಮೇಲ್ಪಟ್ಟವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಹಬ್ಬದ ಪ್ರಯುಕ್ತ ಹಿರಿಯರು ಹಾಗೂ ಕಿರಿಯರಿಗಾಗಿ ವಿವಿಧ ಆಟೋಗಳ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗಿತ್ತು. ಶ್ರೀ ಕೋದಂಡ ರಾಮೋತ್ಸವ ಸಮಿತಿ ಮತ್ತು ಉಪಸಮಿತಿಗಳ ಪ್ರಮುಖರು ಎರಡು ದಿನಗಳ ಕಾರ್ಯಕ್ರಮದ ನೇತೃತ್ವ ವಹಿಸಿ ಯಶಸ್ವಿಗೊಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.