ಶಿಕ್ಷಣದೊಂದಿಗೆ ಸಂಸ್ಕೃತಿ, ಪರಿಸರವನ್ನು ಉಳಿಸಿ ಬೆಳೆಸಬೇಕು : ಈರಮಂಡ ಹರಿಣಿ ವಿಜಯ್ ಕರೆ

KannadaprabhaNewsNetwork |  
Published : Aug 16, 2025, 12:02 AM IST
ಚಿತ್ರ : 12ಎಂಡಿಕೆಲ2 : ಬುಡಕಟ್ಟು ಜನಾಂಗದ ಸಾಧಕರಾದ ಲಕ್ಷ್ಮಿ, ಜೆ.ಕೆ.ರಾಮು ಹಾಗೂ ವೈ.ಪಿ.ತಮ್ಮಯ್ಯ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. | Kannada Prabha

ಸಾರಾಂಶ

ಬುಡಕಟ್ಟು ಜನರು ಪರಿಸರದ ಅವಿಭಾಜ್ಯ ಅಂಗವಾಗಿದ್ದಾರೆ. ಅವರಿದ್ದರೆ ಪರಿಸರ ಉಳಿಯುತ್ತದೆ ಎಂದು ಗಣ್ಯರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣವೊಂದಿದ್ದರೆ ಸಾಕು ಎನ್ನುವ ಮನೋಭಾವ ಬೆಳೆಯುತ್ತಿದೆ. ಇದು ಸರಿಯಲ್ಲ, ಶಿಕ್ಷಣದೊಂದಿಗೆ ನಮ್ಮ ಸಂಸ್ಕೃತಿ ಮತ್ತು ಪರಿಸರವನ್ನು ಉಳಿಸಿ ಬೆಳೆಸಿದರೆ ಮಾತ್ರ ನಮಗೆ ಭವಿಷ್ಯವಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಡಿಕೇರಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಈರಮಂಡ ಹರಿಣಿ ವಿಜಯ್ ಅಭಿಪ್ರಾಯಪಟ್ಟಿದ್ದಾರೆ.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಡಿಕೇರಿ ಸ್ಥಳೀಯ ಸಂಸ್ಥೆ ವತಿಯಿಂದ ಪಾಲೇಮಾಡು ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಬುಡಕಟ್ಟು ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರತಿಯೊಬ್ಬರಿಗೆ ಶಿಕ್ಷಣದ ಅಗತ್ಯವಿದೆ, ಆದರೆ ಶಿಕ್ಷಣದ ಜೊತೆ ಜೊತೆಯಲ್ಲಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗಾಗಿ ಬೆಳೆಸಿಕೊಂಡು ಹೋಗಬೇಕು ಎಂದರು. ಬುಡಕಟ್ಟು ಜನರು ಪರಿಸರದ ಅವಿಭಾಜ್ಯ ಅಂಗ:

ಬುಡಕಟ್ಟು ಜನರು ಈ ಪರಿಸರದ ಅವಿಭಾಜ್ಯ ಅಂಗವಾಗಿದ್ದಾರೆ, ಅವರಿದ್ದರೆ ಪರಿಸರ ಉಳಿಯುತ್ತದೆ. ನಾವು ಕೂಡ ಪರಿಸರದ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಕೊಡಗಿನ ಗದ್ದೆ ಮತ್ತು ತೋಟಗಳು ಇಂದು ಮರೆಯಾಗುತ್ತಿದ್ದು, ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತುತ್ತಿವೆ. ಸುತ್ತಮುತ್ತಲ ಹಸಿರ ಪರಿಸರ ಅಭಿವೃದ್ಧಿಯ ಹೆಸರಿನಲ್ಲಿ ನಾಶವಾಗುತ್ತಿದೆ. ಇಂದು ಪರಿಸರ ನಾಶವಾದರೆ ಮುಂದೊಂದು ದಿನ ಮನುಷ್ಯರು ಕೂಡ ನಾಶವಾಗಬೇಕಾಗುತ್ತದೆ ಎಂದು ಎಚ್ಚರಿಕೆಯ ಮಾತುಗಳನ್ನಾಡಿದರು.ಮುಖ್ಯ ಭಾಷಣ ಮಾಡಿದ ಚೊಟ್ಟೆಪಾರೆ ಹಾಡಿಯ ಬುಡಕಟ್ಟು ಜನಾಂಗದ ಮುಖಂಡ ಜೆ.ಕೆ.ರಾಮು ಅವರು ಇಂದು ಆದಿವಾಸಿಗಳು ಕೂಡ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ, ಆದರೆ ಬುಡಕಟ್ಟು ಸಂಪ್ರದಾಯವನ್ನು ಕಡೆಗಣಿಸದೆ ಆಚರಿಸಿಕೊಂಡು ಹೋಗುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಸುಮಾರು 52 ಆದಿವಾಸಿ ಮೂಲ ಸಮುದಾಯಗಳಿವೆ. ಈ ಸಮುದಾಯಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಯಾವುದೇ ಕಾರಣಕ್ಕೂ ಬುಡಕಟ್ಟು ಜನಾಂಗ ನಶಿಸಿ ಹೋಗಬಾರದು. ಸಾಮಾಜಿಕ ಪಿಡುಗುಗಳ ದುಷ್ಪರಿಣಾಮದ ಕುರಿತು ಆದಿವಾಸಿಗಳಲ್ಲಿ ಹೆಚ್ಚು ಹೆಚ್ಚು ಅರಿವು ಮೂಡಿಸಬೇಕಾಗಿದೆ ಎಂದರು.ಉನ್ನತ ಶಿಕ್ಷಣವನ್ನು ಪಡೆಯಬೇಕು:

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೆರಾ ಅವರು ಮಾತನಾಡಿ ಬುಡಕಟ್ಟು ಜನರು ಶಿಕ್ಷಣಕ್ಕೆ ಮಹತ್ವ ನೀಡಬೇಕು, ಉನ್ನತ ಶಿಕ್ಷಣವನ್ನು ಪಡೆಯಬೇಕು ಎಂದು ಕಿವಿಮಾತು ಹೇಳಿದರು.ಪ್ರತಿಯೊಬ್ಬರು ವಿದ್ಯಾವಂತರಾಗಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದೆ, ಉಚಿತ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಇವುಗಳನ್ನೆಲ್ಲ ಸದುಪಯೋಗಪಡಿಸಿಕೊಳ್ಳಬೇಕು, ವಿದ್ಯೆಯನ್ನು 10ನೇ ತರಗತಿಗೆ ಮೊಟಕುಗೊಳಿಸಬಾರದು. ಹೆಚ್ಚಿನ ವಿದ್ಯಾಭ್ಯಾಸ ಪಡೆಯುವ ಮೂಲಕ ದಬ್ಬಾಳಿಕೆ ಮತ್ತು ಅಕ್ರಮಗಳನ್ನು ಧೈರ್ಯದಿಂದ ಎದುರಿಸಬೇಕು. ಹಣವೊಂದಿದ್ದರೆ ಸಾಲದು ಶಿಕ್ಷಣ ಅತಿ ಮುಖ್ಯ, ವಿದ್ಯೆಯನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ ಎಂದರು. ಹೊದ್ದೂರು ಗ್ರಾ.ಪಂ. ಅಧ್ಯಕ್ಷ ಹೆಚ್.ಎ.ಹಂಸ ಅವರು ಮಾತನಾಡಿ, ಆದಿವಾಸಿಗಳು ಸ್ವಂತ ಸೂರು ಹೊಂದಬೇಕು ಎನ್ನುವುದು ನಮ್ಮ ಗುರಿಯಾಗಿದೆ. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಮತ್ತು ಹೋರಾಟಗಳಿಗೆ ಸ್ಪಂದಿಸಲಾಗುತ್ತಿದೆ. ಬಡವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.ಮೂರ್ನಾಡು ಪೊಲೀಸ್ ಉಪ ಠಾಣೆಯ ಸಹಾಯಕ ಉಪ ನಿರೀಕ್ಷಕ ಮೊಣ್ಣಪ್ಪ ಪಿ.ಬಿ ಮಾತನಾಡಿ, ಜಿಲ್ಲೆಯಲ್ಲಿ ಗಾಂಜಾ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.ಗಾಂಜಾ ವ್ಯಸನಿಗಳಿಂದ ಪೋಷಕರು ಅನುಭವಿಸುತ್ತಿರುವ ಕಷ್ಟವನ್ನು ವಿವರಿಸಿದ ಅವರು ಗಾಂಜಾ ಮಾರಾಟದ ವಿರುದ್ಧ ಪೊಲೀಸ್ ಇಲಾಖೆ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದೆ. ಬುಡಕಟ್ಟು ಜನರು ದುಶ್ಚಟಗಳಿಂದ ಮುಕ್ತರಾಗಿ ಉತ್ತಮ ಜೀವನ ಸಾಗಿಸಬೇಕು ಎಂದು ಕರೆ ನೀಡಿದರು.ಹೊದ್ದೂರು ಗ್ರಾ.ಪಂ ಸದಸ್ಯರಾದ ಕೆ.ಮೊಣ್ಣಪ್ಪ, ಕುಸುಮಾವತಿ ಹಾಗೂ ಹಮೀದ್ ಅವರು ಬುಡಕಟ್ಟು ಜನಾಂಗದ ಸಮಸ್ಯೆಗಳು ಮತ್ತು ಪ್ರಗತಿಯ ಕುರಿತು ಮಾತನಾಡಿದರು. ಸನ್ಮಾನ: ಬುಡಕಟ್ಟು ಜನಾಂಗದ ಸಾಧಕರಾದ ಲಕ್ಷ್ಮಿ, ಜೆ.ಕೆ.ರಾಮು ಹಾಗೂ ವೈ.ಪಿ.ತಮ್ಮಯ್ಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಚೊಟ್ಟೆಪಾರೆ ಹಾಡಿ ತಂಡದ ವತಿಯಿಂದ ನಡೆದ ಹಾಡು ಮತ್ತು ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಬುಡಕಟ್ಟು ಜನಾಂಗದ ಹಾಡು ಹಾಡಿದ ಲಕ್ಷ್ಮಿ ಅವರು ನೆರೆದಿದ್ದವರ ಮೆಚ್ಚುಗೆಗೆ ಪಾತ್ರರಾದರು.ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಎ.ಎ.ಅಬ್ದುಲ್ಲ, ಸದಸ್ಯೆ ಲಕ್ಷ್ಮಿ, ಸ್ಕೌಟ್ ಮತ್ತು ಗೈಡ್ ಜಿಲ್ಲಾ ಕಾರ್ಯದರ್ಶಿ ವಸಂತಿ ಎಂ.ಎಂ., ಉಪಾಧ್ಯಕ್ಷರಾದ ನೀಲಮ್ಮ, ಪಿ.ಎಂ.ರವಿ, ಅರುಣ್ ಕುಮಾರ್, ಖಜಾಂಚಿ ಶಾಂತಿ, ಪ್ರಧಾನ ಕಾರ್ಯದರ್ಶಿ ಆರ್.ಪಿ.ಚಂದ್ರಶೇಖರ್, ಕಾರ್ಯದರ್ಶಿಗಳಾದ ನಳಿನಿ ಸುವರ್ಣ, ಸುಚಿತ, ಸೂರಜ್, ಗುಲ್ಶನ್, ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು. ಸ್ಕೌಟ್ ಅಂಡ್ ಗೈಡ್ಸ್ ಪ್ರಾರ್ಥಿಸಿ, ರಂಜಿತ್ ಮೌರ್ಯ ನಿರೂಪಿಸಿ, ಆರ್.ಪಿ.ಚಂದ್ರಶೇಖರ್ ವಂದಿಸಿದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ