ಸಂಸ್ಕಾರದಿಂದ ವ್ಯಕ್ತಿ ಸಮಾಜಮುಖಿಯಾಗಲು ಸಾಧ್ಯ

KannadaprabhaNewsNetwork | Published : Mar 13, 2025 12:47 AM

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಮಕ್ಕಳಿಗೆ ಕೇವಲ ಅಕ್ಷರ ಕಲಿಸಿದರೆ ಸಾಲದು. ಸಂಸ್ಕೃತಿ, ಸಂಸ್ಕಾರ ಬೆಳೆಸಿದಾಗ ಮಾತ್ರ ವ್ಯಕ್ತಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಸಮಾಜಮುಖಿಯಾಗಿ ಬದುಕಲು ಸಾಧ್ಯ ಎಂದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರು ಡಾ.ಪ್ರಭುಗೌಡ (ಲಿಂಗದಳ್ಳಿ) ಚಬನೂರ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಮಕ್ಕಳಿಗೆ ಕೇವಲ ಅಕ್ಷರ ಕಲಿಸಿದರೆ ಸಾಲದು. ಸಂಸ್ಕೃತಿ, ಸಂಸ್ಕಾರ ಬೆಳೆಸಿದಾಗ ಮಾತ್ರ ವ್ಯಕ್ತಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಸಮಾಜಮುಖಿಯಾಗಿ ಬದುಕಲು ಸಾಧ್ಯ ಎಂದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರು ಡಾ.ಪ್ರಭುಗೌಡ (ಲಿಂಗದಳ್ಳಿ) ಚಬನೂರ ಹೇಳಿದರು.

ತಾಲೂಕಿನ ಯಾಳವಾರ ಗ್ರಾಮದ ಸಂಸ್ಕಾರ ಧಾಮ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 13ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಂಸ್ಕಾರ ಉತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಮಕ್ಕಳಿಗೆ ಅಕ್ಷರದೊಂದಿಗೆ ಹುಟ್ಟಿನಿಂದಲೇ ಸಂಸ್ಕಾರವನ್ನು ಕಲಿಸಿದರೆ ಮುಂದೆ ಅವರು ದೊಡ್ಡವರಾಗಿ ದೇಶಕ್ಕೆ ಉತ್ತಮ ಪ್ರಜೆಗಳಾಗುತ್ತಾರೆ. ಈ ನಿಟ್ಟಿನಲ್ಲಿ ಸಂಸ್ಕಾರ ಧಾಮ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕೂಡ ನೀಡುತ್ತಿರುವುದು ಶ್ಲಾಘನೀಯ ವಿಷಯ. ಇಂದಿನ ಆಧುನಿಕತೆಯ ಭರಾಟೆಯಲ್ಲಿ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ಕಲಿಸುವುದು ಇಂದಿನ ಪಾಲಕರ ಜವಾಬ್ದಾರಿಯಾಗಿದೆ. ಇಂದಿನ ಜಗತ್ತಿನಲ್ಲಿ ದುರಾಚಾರಗಳು ಹೆಚ್ಚಾಗಲು ಸಂಸ್ಕಾರ ಇಲ್ಲದ ವಿದ್ಯಾವಂತರೇ ಕಾರಣ ಎನ್ನಲಾಗುತ್ತಿದೆ. ಮಕ್ಕಳಿಗೆ ವಿದ್ಯಾಭ್ಯಾಸ ಎಷ್ಟು ಮುಖ್ಯವೋ ಸಂಸ್ಕಾರವನ್ನು ಕಲಿಸುವ ಜವಾಬ್ದಾರಿಯೂ ಪೋಷಕರ ಹಾಗೂ ಶಿಕ್ಷಕರ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಉಪನ್ಯಾಸ ನೀಡಿದ ಸೋಮನಗೌಡ ಥಬ್ಬಣ್ಣವರ ಹಾಗೂ ಗುರುನಾಥ ಮಾಸ್ತರ ಮುರಡಿ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ಇಲ್ಲದಿದ್ದರೆ ಪಡೆದ ಶಿಕ್ಷಣಕ್ಕೆ ಬೆಲೆ ಇರುವುದಿಲ್ಲ. ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪಾಲಕರು ಹಾಗೂ ಶಿಕ್ಷಕರ ಪಾತ್ರದ ಕುರಿತು ಉಪನ್ಯಾಸ ನೀಡಿದರು. ಈ ನಿಟ್ಟಿನಲ್ಲಿ ಸಂಸ್ಕಾರ ಧಾಮ ಶಾಲೆಯೂ ಒಳ್ಳೆಯ ಶಿಕ್ಷಣ ನೀಡುತ್ತಿದೆ ಎಂದು ಶ್ಲಾಘಿಸಿದರು .

ಸಂಸ್ಥೆಯ ಅಧ್ಯಕ್ಷರಾದ ಎಸ್.ಕೆ.ಪಟ್ಟೇದ ಸಂಸ್ಥೆ ನಡೆದು ಬಂದ ದಾರಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿದ್ದ ಯಾಳವಾರ ಹಿರೇಮಠದ ಬಸಯ್ಯ ಸ್ವಾಮಿಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ದೇವೇಂದ್ರ ಬಡಿಗೇರ ವಹಿಸಿದ್ದರು.

ಈ ಸಂದರ್ಭದಲ್ಲಿ ಸಂಸ್ಕಾರ ರತ್ನ ಪ್ರಶಸ್ತಿ ಪುರಸ್ಕೃತ ಯಮನಪ್ಪ ಬೂದಿಹಾಳ (ಶಿಕ್ಷಣ ಕ್ಷೇತ್ರ), ಸಂಗಮೇಶ ಕೆರೆಪ್ಪಗೋಳ (ಸಾಹಿತ್ಯ ಕ್ಷೇತ್ರ), ಮಲ್ಲಿಕಾರ್ಜುನ ಪಟ್ಟಣಶೆಟ್ಟಿ (ಪತ್ರಿಕಾರಂಗ), ರಾಘವೇಂದ್ರ ಉಮ್ಮರಗಿ (ರಂಗಭೂಮಿ ಕ್ಷೇತ್ರ), ಕಾಶಿನಾಥ ಪೂಜಾರಿ(ಜಾನಪದ ಕ್ಷೇತ್ರ) ಹಾಗೂ ಗುರುನಾಥ ಮಾಸ್ತರ್ ಮುರುಡಿ (ಹಾಡಕಿ ಕ್ಷೇತ್ರ) ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಸ್ಕಾರ ಉತ್ಸವದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಮುಖಂಡರಾದ ರಾಜುಗೌಡ ನಾಡಗೌಡ್ರ, ಸಾಹೇಬಗೌಡ ದೊಡಮನಿ, ಸೋಮನಗೌಡ ಕೆಮಶೆಟ್ಟಿ, ಆರ್.ಎಸ್.ಪಾಟೀಲ, ಚನ್ನಪ್ಪಗೌಡ ಪಾಟೀಲ, ಸಾಹೇಬಗೌಡ ಉತ್ನಾಳ, ಬಿ.ಆರ್.ಪಾಟೀಲ, ವೆಂಕನಗೌಡ ಮೂಲಿಮನಿ, ಎಸ್.ಎಸ್.ಪಾಟೀಲ, ಹಣಮಂತ್ರಾಯಗೌಡ ಬಿರಾದಾರ, ಸಿದ್ದಣ್ಣ ಕೆರೆಪ್ಪಗೋಳ, ಶರಣು ಪೂಜಾರಿ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು, ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share this article