ಹುಬ್ಬಳ್ಳಿ ಫ್ಲೈ ಓವರ್ ಕಾಮಗಾರಿ ವೇಗ ನೀಡಲು ಗಡ್ಕರಿ ಸೂಚನೆ

KannadaprabhaNewsNetwork |  
Published : Mar 13, 2025, 12:47 AM IST
12ಎಚ್ ಯುಬಿ30ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಪ್ರಹ್ಲಾದ್‌ ಜೋಶಿ ಅವರು ನವದೆಹಲಿಯಲ್ಲಿ ಧಾರವಾಡ ಜಿಲ್ಲಾಡಳಿತದೊಂದಿಗೆ ವಿಡಿಯೋ ಕಾನ್ಫೆರೆನ್ಸ್‌ ನಡೆಸಿದರು. | Kannada Prabha

ಸಾರಾಂಶ

ನವದೆಹಲಿಯ ತಮ್ಮ ಕಚೇರಿಯಿಂದಲೇ ಧಾರವಾಡ ಸಂಸದರು ಮತ್ತು ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ ಅವರ ಸಮ್ಮುಖದಲ್ಲಿಯೇ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಸಚಿವ ಗಡ್ಕರಿ, ಫ್ಲೈಓವರ್ ಕಾಮಗಾರಿ ಪ್ರಗತಿಯ ಸಂಪೂರ್ಣ ಮಾಹಿತಿ ಪಡೆದು ತ್ವರಿತ ವೇಗ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನವದೆಹಲಿ: ಹುಬ್ಬಳ್ಳಿ ಹೃದಯ ಭಾಗದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಮಂದಗತಿಯಲ್ಲಿ ಸಾಗಿರುವ ಫ್ಲೈ ಓವರ್ ಕಾಮಗಾರಿ ಪ್ರಗತಿ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದರು.

ನವದೆಹಲಿಯ ತಮ್ಮ ಕಚೇರಿಯಿಂದಲೇ ಧಾರವಾಡ ಸಂಸದರು ಮತ್ತು ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ ಅವರ ಸಮ್ಮುಖದಲ್ಲಿಯೇ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಸಚಿವ ಗಡ್ಕರಿ, ಫ್ಲೈಓವರ್ ಕಾಮಗಾರಿ ಪ್ರಗತಿಯ ಸಂಪೂರ್ಣ ಮಾಹಿತಿ ಪಡೆದು ತ್ವರಿತ ವೇಗ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸ್ಥಳೀಯ ಆಡಳಿತಕ್ಕೆ ಗಡ್ಕರಿ ಚಾಟಿ

ವಾಣಿಜ್ಯ ನಗರಿ ಹುಬ್ಬಳ್ಳಿ ಹೃದಯ ಭಾಗದಲ್ಲಿ ನಿರ್ಮಿಸುತ್ತಿರುವ ಈ 3.61 ಕಿಮೀ ವಿಸ್ತೀರ್ಣದ ಈ ಎಲಿವೇಟೆಡ್ ರಸ್ತೆ (ಎತ್ತರದ ಕಾರಿಡಾರ್) ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅಗತ್ಯ ಅನುದಾನ ನೀಡುತ್ತಿದ್ದರೂ ಕಾಮಗಾರಿ ವಿಳಂಬ ಕಾಣುತ್ತಿದೆಯಲ್ಲ ಎಂದು ರಾಜ್ಯ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಗಡ್ಕರಿ ಚಾಟಿ ಬೀಸಿದರು.

ಫ್ಲೈ ಓವರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಣ ಒದಗಿಸಿದರೂ ಕಾಮಗಾರಿ ಇನ್ನೂ ಅರ್ಧದಷ್ಟೂ ಪೂರ್ಣಗೊಂಡಿಲ್ಲ. ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತೋರಿದ ವಿಳಂಬ ನೀತಿಯೇ ಕಾರಣ ಎಂದು ಸಚಿವರಿಬ್ಬರೂ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಹೆಚ್ಚುವರಿ ಆರ್ಥಿಕ ನೆರವಿಗೆ ಸಮ್ಮತಿ

ಈ ಫ್ಲೈ ಓವರ್ ಕಾಮಗಾರಿಗೆ ಸಿವಿಲ್ ಕಾಸ್ಟ್ ಆಗಿ ₹196.99 ಕೋಟಿ ನಿಗದಿಪಡಿಸಿದ್ದು, ಇದಕ್ಕೆ ಹೆಚ್ಚುವರಿ ₹35.76 ಕೋಟಿ ಸೇರಿಸಿ ₹232.75 ಕೋಟಿ ನಿಗದಿಪಡಿಸಲಾಗಿತ್ತು. ಒಟ್ಟು ಯೋಜನಾ ವೆಚ್ಚ ₹298 ಕೋಟಿ ನಿಗದಿಪಡಿಸಲಾಗಿತ್ತು. ಸಚಿವ ಪ್ರಹ್ಲಾದ್‌ ಜೋಶಿ ಅವರ ಒತ್ತಾಸೆಯಂತೆ ಈಗ ₹51.49 ಕೋಟಿ ಹೆಚ್ಚುವರಿ ಅನುದಾನ ನೀಡಲು ಕೇಂದ್ರ ಹೆದ್ದಾರಿ ಸಚಿವ ಗಡ್ಕರಿ ಸಮ್ಮತಿಸಿದ್ದಾರೆ. ಅದರಂತೆ ಒಟ್ಟು ಯೋಜನಾ ವೆಚ್ಚ ಈಗ ₹ 349.49 ಕೋಟಿ ತಲುಪಿದೆ.

ಹೆಚ್ಚುವರಿ ನೆರವು ನೀಡಲು ಸಿದ್ಧ

ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರೆ ಈ ಕಾರಿಡಾರ್ ಕಾಮಗಾರಿಗಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮೂಲಕ ವಿಶೇಷ ಹಣಕಾಸು ನೆರವು ನೀಡುವುದಾಗಿ ಸಚಿವ ನಿತಿನ್ ಗಡ್ಕರಿ ಇದೇ ವೇಳೆ ಭರವಸೆ ನೀಡಿದರು. ಅಲ್ಲದೇ, ಕೂಡಲೇ ಕಾಮಗಾರಿಗೆ ವೇಗ ನೀಡಿ ಎಂದು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ಸಹ ನೀಡಿದರು. ಸಕಾಲದಲ್ಲಿ ಯೋಜನೆ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಿ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ಸಹ ನೀಡಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕಾಮಗಾರಿ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸಿ ಗಮನ ಸೆಳೆದಿದ್ದರಲ್ಲದೆ, ಹೆಚ್ಚುವರಿ ಅನುದಾನ ಘೋಷಿಸುವಲ್ಲಿ ಸಫಲರಾಗಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು, ಹುಬ್ಬಳ್ಳಿ-ಧಾರವಾಡದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಗಾಳಿ ಹಾಗೂ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಮತ್ತು ಎನ್‌ಎಚ್‌ಪಿಡಬ್ಲೂಡಿ ಮುಖ್ಯ ಎಂಜಿನಿಯರ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಮಗಾರಿ ಪುನಾರಂಭ

ಫ್ಲೈಓವರ್ ಕಾಮಗಾರಿ ವೇಳೆ ರಾಡ್ ಬಿದ್ದು ಪಿಎಸ್ಐ ಒಬ್ಬರು ಮೃತಪಟ್ಟಿದ್ದರು. ಇದರಿಂದಾಗಿ ಕಾಮಗಾರಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಆಗ ಬರೋಬ್ಬರಿ 4 ತಿಂಗಳಿಗೂ ಹೆಚ್ಚು ಕಾಲ ಕಾಮಗಾರಿ ಸ್ಥಗಿತಗೊಂಡಿತ್ತು. ಇತ್ತೀಚಿಗಷ್ಟೇ ಕಾಮಗಾರಿ ಪುನಾರಂಭವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಬದುಕಿಗೆ ಮೊಬೈಲ್ ಮಾರಕ: ಬಿಇಒ ತಿಮ್ಮೇಗೌಡ
ಕ್ಯಾನ್ಸರ್ ಜಾಗೃತಿಗಾಗಿ ಫೆ.8ರಂದು ಮ್ಯಾರಥಾನ್: ದರ್ಶನ್ ಪುಟ್ಟಣ್ಣಯ್ಯ