-ಜನಸಂಪರ್ಕ ಸಭೆಯಲ್ಲಿ ಗ್ರಾಮಸ್ಥರ ಒತ್ತಾಯ । ಅಗತ್ಯವಿದ್ದಲ್ಲೆ ಹೆಚ್ಚುವರಿ ಟಿಸಿಗಳ ಅಳವಡಿಸಲು ಮನವಿಕನ್ನಡಪ್ರಭ ವಾರ್ತೆ ಕಡೂರು
ಮಳೆಯಿಲ್ಲದೆ ಪರಿತಪಿಸುತ್ತಿರುವ ರೈತರಿಗೆ ವಿಫಲವಾಗಿರುವ ಪರಿವರ್ತಕಗಳನ್ನು ಬದಲಾಯಿಸಿಕೊಡದೇ ಮೆಸ್ಕಾಂ ಅಧಿಕಾರಿಗಳು ಸಾಕಷ್ಟು ನಿರ್ಲಕ್ಷ್ಯ ವಹಿಸುತಿದ್ದು, ಕೂಡಲೆ ಪರಿವರ್ತಕಗಳನ್ನು ಬದಲಾಯಿಸಿಕೊಡಲು ಕ್ರಮವಹಿಸಬೇಕು ಎಂದು ಕುಂಕಾನಾಡಿನ ಬಸಪ್ಪ ಒತ್ತಾಯಿಸಿದರು.ಪಟ್ಟಣದ ಮೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ನಡೆದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಈಗಾಗಲೇ ಹಾಕಿರುವ ಬೆಳೆಯು ಕೈಕೊಟ್ಟಿದೆ. ಉಳಿದ ಅಲ್ಪಸ್ವಲ್ಪತೋಟಗಳನ್ನು ಉಳಿಸಿಕೊಳ್ಳಲು ಕೊಳವೆಬಾವಿಗಳನ್ನು ಆಶ್ರಯಿಸಲಾಗುತ್ತಿದೆ. ಕೆಟ್ಟು ಹೋಗುತ್ತಿರುವ ಪರಿವರ್ತಕಗಳನ್ನು ಕೂಡಲೇ ಬದಲಾಯಿಸಿದರೆ ಅನುಕೂಲವಾಗಲಿದೆ. ಜತೆಗೆ ಹೆಚ್ಚುವರಿ ಟಿ.ಸಿ.ಗಳನ್ನು ಅಳವಡಿಸಿಕೊಡಲು ಅಧಿಕಾರಿಗಳು ಮುಂದಾಗಬೇಕು ಎಂದರು.
ಮೆಸ್ಕಾಂ ವಿಭಾಗದ ಇಇ ರವಿಕಿರಣ್ ಮಾತನಾಡಿ, ವಿಫಲವಾದ ಟಿಸಿಗಳಲ್ಲಿ ಅನಧಿಕೃತ ಐಪಿ ಸ್ಥಾವರಗಳನ್ನು ಅಧಿಕೃತಗೊಳಿಸಿದರೆ ಹೆಚ್ಚುವರಿ ಟಿಸಿಗಳನ್ನು ಅಳವಡಿಸಿಕೊಡಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.ಸೂರಾಪುರದ ಮೋಕ್ಷಧಾರ ಮಾತನಾಡಿ, ಈಗಾಗಲೇ ತೆಂಗಿನ ನಾರಿನ ಘಟಕ ಅಳವಡಿಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ. ಆದರೆ ಪದೇಪದೆ ಈ ಭಾಗದಲ್ಲಿ ಉಂಟಾಗುವ ವಿದ್ಯುತ್ ಅಡಚಣೆಯಿಂದ ತೊಂದರೆಯಾಗುತ್ತಿದೆ. ಈ ಬಗ್ಗೆ ಮೆಸ್ಕಾಂ ಸಿಬ್ಬಂದಿಗೆ ಸಾಕಷ್ಟು ಬಾರಿ ತಿಳಿಸಿದರೂ ಸಮಸ್ಯೆ ಸರಿಪಡಿಸಿದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನಮಗೆ ಪ್ರತ್ಯೇಕ ಜಿಒಎಸ್ ಅಳವಡಿಸಿಕೊಡಬೇಕು ಎಂದು ಮನವಿ ಮಾಡಿದರು.
ಎಇಇ ಮಂಜುನಾಥ್ ಪ್ರತಿಕ್ರಿಯಿಸಿ, ಮಲ್ಲೇಶ್ವರದ ತೋಟದ ಮನೆಗಳಲ್ಲಿ ವಿದ್ಯುತ್ ಸಂಪರ್ಕಕ್ಕೆ ಟಿಸಿ ಅಳವಡಿಸಿಕೊಡುವಂತೆ ಮಲ್ಲೇಶ್ವರದ ಕೆಂಚಪ್ಪ ವಿನಂತಿಸಿದ್ದು, ಈ ನಿಟ್ಟಿನಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಅವಶ್ಯವಿರುವ ದಾಖಲೆಗಳನ್ನು ಒದಗಿಸಿದರೆ ವಿದ್ಯುತ್ ಪೂರೈಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಮೆಸ್ಕಾಂ ಅಧೀಕ್ಷಕ ಮಂಜುನಾಥ್, ಸಹಾಯಕ ಅಭಿಯಂತರ ಸಿಎಂ ಪ್ರಸನ್ನ, ಸಹಾಯಕ ಲೆಕ್ಕಾಧಿಕಾರಿ ಡಿಎಸ್ ಲೋಹಿತ್ ಕುಮಾರ್, ಸಹಾಯಕ ಅಭಿಯಂತರ ಎಚ್.ಚಂದ್ರಪ್ಪ, ಸಿ.ವಿ.ರಾಜು, ಕಿರಿಯ ಅಭಿಯಂತರ ಬಸವರಾಜಪ್ಪ, ಆರ್. ಶಿವಕುಮಾರ್, ಎನ್.ವಿರೇಶ್, ಸಿಬ್ಬಂದಿ, ಭಾಗ್ಯ ರೈತರು ಮತ್ತಿತರರು ಇದ್ದರು.
ಬಾಕ್ಸ್ ಸುದ್ದಿ ----ಐಡಿ ಕಾರ್ಡ್ ಧರಿಸದ್ದಕ್ಕೆ ಆಕ್ಷೇಪ
ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿದ ಮೆಸ್ಕಾಂ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘಿಸಿ ಗುರುತಿನ ಐಡಿ ಕಾರ್ಡ್ ಗಳನ್ನು ಧರಿಸದಿರುವುದನ್ನು ಕೆ.ಬಸವನಹಳ್ಳಿ ಗ್ರಾಮದ ರೈತ ಸಂಘದ ಮುಖಂಡ ಲಿಂಗದೇವರು ಆಕ್ಷೇಪಿಸಿದ್ದು, ಕೂಡಲೇ ನಿಗಮದ ಅಧಿಕಾರಿಗಳು ಐಡಿ ಕಾರ್ಡ್ ಧರಿಸಿಕೊಂಡ ಪ್ರಸಂಗ ನಡೆಯಿತು.---
5ಕೆಡಿಯು3: ಕಡೂರಿನ ಮೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ ನಡೆಯಿತು. ಮೆಸ್ಕಾಂ ಅಧೀಕ್ಷಕ ಮಂಜುನಾಥ್, ಇಇ ರವಿಕಿರಣ್ ಸಹಾಯಕ ಅಭಿಯಂತರ ಸಿಎಂ ಪ್ರಸನ್ನ, ಸಹಾಯಕ ಲೆಕ್ಕಾಧಿಕಾರಿ ಡಿಎಸ್ ಲೋಹಿತ್ ಕುಮಾರ್ ಉಪಸ್ಥಿತರಿದ್ದರು.