Block Education Officer Shabana Anjum expressed concern that, despite advancements in science and technology, natural disasters are increasing due to modern human culture. She spoke while inaugurating the taluk-level drawing competition for high school students, held on Wednesday at Jwalamalini Girls' High School.
-ಜ್ವಾಲಾಮಾಲಿನಿ ಶಾಲೆಯಲ್ಲಿ ತಾ.ಮಟ್ಟದ ಚಿತ್ರಕಲೆ ಸ್ಪರ್ಧೆ
-----ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ವಿಜ್ಞಾನ, ತಂತ್ರಜ್ಞಾನ ಮುಂದುವರಿಯುತ್ತಿದ್ದರೂ ಮನುಷ್ಯರ ಆಧುನಿಕ ಸಂಸ್ಕೃತಿಯಿಂದಾಗಿ ಪ್ರಕೃತಿ ವಿಕೋಪಗಳು ಸಹ ಜಾಸ್ತಿಯಾಗುತ್ತಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಕಳವಳ ವ್ಯಕ್ತಪಡಿಸಿದರು.ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆಯಲ್ಲಿ ಬುಧವಾರ ನಡೆದ ತಾಲೂಕುಮಟ್ಟದ ಪ್ರೌಢಶಾಲಾ ವಿಭಾಗದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಕೃತಿ ವಿಕೋಪದಿಂದಾಗಿ ಮನುಷ್ಯರಿಗೆ, ಜೀವ ಸಂಕುಲಗಳಿಗೆ ತೊಂದರೆಯಾಗುತ್ತಿವೆ. ಮನುಷ್ಯನ ದುರಾಸೆಯಿಂದ ಪ್ರಕೃತಿ ನಾಶವಾಗುತ್ತಿದೆ. ಮಂದಿನ ಪೀಳಿಗೆಗೆ ನಾವು ಸುಂದರ ಪ್ರಕೃತಿ, ಅರಣ್ಯ ಸಂಪತ್ತುಗಳನ್ನು ಕೊಡುಗೆಯಾಗಿ ನೀಡಬೇಕು. ಯುವ ಜನರು ಈಗಲೇ ಎಚ್ಚೆತ್ತುಕೊಂಡು ಪ್ರಕೃತಿ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ನೋಡಲ್ ಅಧಿಕಾರಿ, ಶಿಕ್ಷಣ ಸಂಯೋಜಕಿ ಸಂಗೀತ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ನಾಳೆಗಾಗಿ ನೀರು ಎಂಬ ಘೋಷ ವಾಕ್ಯದಡಿ ನಮ್ಮ ಭೂಮಿ ನಮ್ಮ ನೀರು ನಮ್ಮ ಹಕ್ಕು ಎಂಬ ಪರಿಕಲ್ಪನೆಯಡಿ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆಯ ಮುಖ್ಯಶಿಕ್ಷಕಿ ಸುಜಾತ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ತಾಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೊಟ್ರೇಶಪ್ಪ, ಬಾಳೆಹೊನ್ನೂರು ಸರ್ಕಾರಿ ಪ್ರೌಢ ಶಾಲೆಯ ಚಿತ್ರಕಲೆ ಶಿಕ್ಷಕ ಸಲೀಂ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಚಿತ್ರಕಲೆ ಶಿಕ್ಷಕಿ ಜ್ಯೋತಿ, ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆಯ ಶಿಕ್ಷಕ ಗುಣಪಾಲ್ ಜೈನ್ ಉಪಸ್ಥಿತರಿದ್ದರು.
--ಬಾಕ್ಸ್ ಐಟಂ---53 ವಿದ್ಯಾರ್ಥಿಗಳು ಭಾಗಿ
ಚಿತ್ರಕಲೆ ಸ್ಪರ್ಧೆಯಲ್ಲಿ 53 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಾಗುಂಡಿ ಸರ್ಕಾರಿ ಪ್ರೌಢ ಶಾಲೆ ಪ್ರಥಮ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ದ್ವಿತೀಯ ಹಾಗೂ ಬಾಳೆಹೊನ್ನೂರು ಪ್ರೌಢ ಶಾಲೆಯ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡರು.