ಧಾರ್ಮಿಕ ಗ್ರಂಥಗಳಿಂದ ಸಂಸ್ಕಾರ: ಡಾ. ಜೆ. ಶ್ರೀನಿವಾಸಮೂರ್ತಿ

KannadaprabhaNewsNetwork | Published : Sep 15, 2024 1:47 AM

ಸಾರಾಂಶ

ಗೋಕರ್ಣದ ಮಹಾಬಲೇಶ್ವರ ಮಂದಿರದ ಶಿವಪದ ವೇದಿಕೆಯಲ್ಲಿ ಮಹೋಪಾಧ್ಯಾಯ ಪುರಸ್ಕೃತ ನಿವೃತ್ತ ಹಿರಿಯ ಆಗಮ ಪಂಡಿತ ವಿ. ಗಣಪತಿ ಎಂ. ಶಾಸ್ತ್ರಿ ರಚಿತ "ದೇವರಾತ " ಪುಸ್ತಕ ಬಿಡುಗಡೆ ಮಾಡಲಾಯಿತು.

ಗೋಕರ್ಣ: ಸರಿಯಾದ ಸಂಸ್ಕಾರ ದೊರೆತಾಗ ಮಾತ್ರ ಮನುಷ್ಯ ಪ್ರಾಣಿಗಿಂತ ಮಿಗಿಲಾಗಿ, ನಿಜವಾದ ಮನುಷ್ಯನಾಗಿ ಬಾಳಲು ಸಾಧ್ಯ. ಅಂತಹ ಶಕ್ತಿ ಧಾರ್ಮಿಕ ಗ್ರಂಥಗಳು ನೀಡುತ್ತದೆ ಎಂದು ಯುಎಸ್ಎ ಶ್ರೀವಿದ್ಯಾ ಇಂಟರ್ ನ್ಯಾಶನಲ್, ಯೂನಿವರ್ಸಿಟಿ ಫಾರ್ ವೇದಿಕ ಸೈನ್ಸ್‌ ಕುಲಪತಿ ಡಾ. ಜೆ. ಶ್ರೀನಿವಾಸಮೂರ್ತಿ ಬೆಂಗಳೂರು ಹೇಳಿದರು.

ಅವರು ಶುಕ್ರವಾರ ಸಂಜೆ ಇಲ್ಲಿನ ಮಹಾಬಲೇಶ್ವರ ಮಂದಿರದ ಶಿವಪದ ವೇದಿಕೆಯಲ್ಲಿ ಮಹೋಪಾಧ್ಯಾಯ ಪುರಸ್ಕೃತ ನಿವೃತ್ತ ಹಿರಿಯ ಆಗಮ ಪಂಡಿತರಾದ ವಿ. ಗಣಪತಿ ಎಂ. ಶಾಸ್ತ್ರಿ ರಚಿತ "ದೇವರಾತ " ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ದೇವರಾತ್ ಪುಸ್ತಕದ ಕುರಿತು ವಿವರಿಸಿ ಕೃತಿಕಾರರಿಗೆ ಅಭಿನಂದಿಸಿದರು.

ಊರಿನ ಹಿರಿಯ ವೇದ ವಿದ್ವಾಂಸ ರಾಮಕೃಷ್ಣ ಶಂಕರಲಿಂಗ ಅವರು ಮತ್ತೊಂದು ಪುಸ್ತಕ ಋಙ ಮಂತ್ರಾನುಸಾರಿ ಕುಂಡನಿರ್ಮಾಣ ಅಗ್ನಿ ಸಂಸ್ಕಾರಾಃ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ, ಧಾರ್ಮಿಕ ಕಾರ್ಯಕ್ರಮದ ಕುರಿತು ಸುಲಭವಾಗಿ ತಿಳಿಯುವಂತೆ ಹೊತ್ತಿಗೆ ಹೊರ ತಂದಿರುವುದು ಪ್ರಶಂಸನೀಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧಾರ್ಮಿಕ ಗ್ರಂಥ ಲೇಖಕ ಮತ್ತು ಪ್ರಕಾಶಕ, ಬೆಂಗಳೂರಿನ ಡಾ. ಎಸ್.ಆರ್. ನರಸಿಂಹಮೂರ್ತಿ ಮಾತನಾಡಿ, ಧಾರ್ಮಿಕ ಪದ್ಧತಿಯನ್ನು ಅರ್ಥಪೂರ್ಣವಾಗಿ ಪುಸ್ತಕ ರೂಪದಲ್ಲಿ ಜನರಿಗೆ ಒಪ್ಪಿಸಿದಾಗ ನಮ್ಮ ಭಾರತೀಯ ಸನಾತನ ಧರ್ಮದ ಸಂಸ್ಕೃತಿಯನ್ನು ಸಮಾಜಕ್ಕೆ ತಿಳಿಸಲು ಸಾಧ್ಯ. ಇಂತಹ ಕಾರ್ಯ ಇಂದಿನ ಕೃತಿ ಲೋಕಾರ್ಪಣ ಮೂಲಕ ನಡೆದಿದೆ ಎಂದರು.

ಕೃತಿಕಾರ ವಿ. ಗಣಪತಿ ಶಾಸ್ತ್ರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಈ ಹಿಂದೆ ಬರೆದ ಗ್ರಂಥ ಹಾಗೂ ಅದರಲ್ಲಿ ವಿಷಯವನ್ನು ವಿವರಿಸಿ, ಪ್ರಸ್ತುತ ಕೃತಿಯ ಕುರಿತು ತಿಳಿಸಿ, ಇದಕ್ಕೆ ಸಹರಿಸಿದರನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಪುಸ್ತಕ ರಚನೆಗೆ ಸಹಕರಿಸಿದ ನಿವೃತ ಶಿಕ್ಷಕಿ ರಾಜಲಕ್ಷಮ್ಮ ಅವರನ್ನು ಗೌರವಿಸಲಾಯಿತು. ಮಹಾಬಲೇಶ್ವರ ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯ ವಿ. ಸುಬ್ರಹ್ಮಣ್ಯ ಅಡಿ, ಬ್ರಾಹ್ಮಣ ಪರಿಷತ್ ಅಧ್ಯಕ್ಷ ಚಂದ್ರಶೇಖರ ಅಡಿಮೂಳೆ, ವೇ. ಸಾಂಬಾ ಭಟ್ ಷಡಕ್ಷರಿ. ವೇ. ರಾಜಗೋಪಾಲ ಅಡಿಗುರೂಜಿ, ವೇ. ಪ್ರಸನ್ನ ಜೋಗಭಟ್ ,ವೇ. ಶ್ರೀನಾಗ ಅಡಿಮೂಳೆ ಅವರಿಗೆ ಗೌರವ ಸಲ್ಲಿಸಲಾಯಿತು. ಹರಿಹರೇಶ್ವರ ವೇದ ವಿದ್ಯಾಪೀಠದ ಪ್ರಾಚಾರ್ಯ ಉದಯ್ ಮಯ್ಯರ್ ಹಾಗೂ ವಿದ್ಯಾರ್ಥಿಗಳಿಂದ ವೇದಘೋಷದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿತ್ತು.

ಹಿರಿಯ ಯಕ್ಷಗಾನ ಕಲಾವಿದ ಅನಂತ ಹಾವಗೋಡಿ ಕಾರ್ಯಕ್ರಮ ನಿರ್ವಹಿಸಿದರು. ವೇ. ಗೋಪಾಲ ಶಾಸ್ತ್ರಿ, ಆತ್ರೇಯ ಶಾಸ್ತ್ರಿ, ದಿವ್ಯಾ ಶಾಸ್ತ್ರಿ ಮತ್ತಿತರರು ಸಹಕರಿಸಿದರು. ಮಂದಿರದ ಸಿಬ್ಬಂದಿ ಅಚ್ಚುಕಟ್ಟಿನ ವ್ಯವಸ್ಥೆ ಕಲ್ಪಿಸಿದ್ದರು. ಊರ ನಾಗರಿಕರು, ವಿವಿಧ ಕಡೆಯಿಂದ ಬಂದ ಗಣಪತಿ ಶಾಸ್ತ್ರಿಗಳ ಶಿಷ್ಯವೃಂದವರು ಪಾಲ್ಗೊಂಡಿದ್ದರು.

Share this article