ಕನ್ನಡಪ್ರಭ ವಾರ್ತೆ ಬಂಟ್ವಾಳ
ಸ್ವಾತಂತ್ರ್ಯ ದಿನಾಚರಣೆಗೆ ದೆಹಲಿಯಿಂದ ಆಹ್ವಾನ ಸ್ವೀಕರಿಸಿ ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಧ್ವಜಾರೋಹಣದಲ್ಲಿ ಭಾಗವಹಿಸಿದ್ದ ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವ್ಯವಹಾರದ ಆರೋಪ ಕೇಳಿ ಬಂದಿದ್ದು, ಗುರುವಾರ ನಡೆದ ಗ್ರಾಮಸಭೆಯಲ್ಲಿ ಈ ವಿಚಾರವಾಗಿ ಕೋಲಾಹಲವೇ ನಡೆಯಿತು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಫೀಸಾ ಅವರ ಅಧ್ಯಕ್ಷತೆಯಲ್ಲಿ ಪೆರುವಾಯಿ ಗ್ರಾಮ ಪಂಚಾಯಿತಿಯ ಪ್ರಥಮ ಸುತ್ತಿನ ಗ್ರಾಮ ಸಭೆ ನಡೆಯಿತು.
ಸಭೆಯಲ್ಲಿ ಮಂಡಿಸಿದ ವರದಿಯ ಪ್ರತಿಯಲ್ಲಿ ನೀಡಲಾಗಿದ್ದ ಖರ್ಚಿನ ವಿವರದಲ್ಲಿ ಕೆಲವು ವಿಚಾರಗಳನ್ನು ಕೈಬಿಡಲಾಗಿದ್ದು, ಪಂಚಾಯಿತಿ ಲೆಡ್ಚರ್ ಬುಕ್‌ನಲ್ಲಿ ಎಲ್ಲ ವಿಚಾರಗಳಿವೆ. ಈ ಮೂಲಕ ಅವ್ಯವಹಾರವನ್ನು ಮುಚ್ಚಿಡುವ ಪ್ರಯತ್ನ ನಡೆಯುತ್ತಿದೆ ಎಂದು ಗ್ರಾಮಸ್ಥರ ಆರೋಪಿಸಿದರು.ದೆಹಲಿಗೆ ತೆರಳಲು ಅಧ್ಯಕ್ಷರು ಪಂಚಾಯಿತಿ ಹಣವನ್ನು ಖರ್ಚು ಮಾಡಿದ್ದಾರೆ ಎಂದು ಕೆಲ ಗ್ರಾಮಸ್ಥರು ಆರೋಪಿಸಿದರೆ, ಆ ಹಣ ಸರ್ಕಾರದಿಂದ ಮರುಪಾವತಿಯಾಗಲಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದರು.
ಪಂಚಾಯಿತಿ ಅಧಿಕೃತ ದಾಖಲೆಯಲ್ಲಿ ಕೆಲಸ ನಿರ್ವಹಿಸಲಾಗಿದೆ ಎಂದು ಬಿಲ್ ಮಾಡಿರುವುದನ್ನು ತೋರಿಸಲಾಗಿದೆ. ಆದರೆ ಸಭೆಗೆ ನೀಡಿದ ವರದಿಯಲ್ಲಿ ಒಟ್ಟು ೪೨ ಕ್ರಮ ಸಂಖ್ಯೆಯನ್ನು ನೀಡಲಾಗಿದೆಯಾದರೂ ಮಧ್ಯ ಮಧ್ಯೆ ಕೆಲವು ಸಂಖ್ಯೆ ಇಲ್ಲದೆ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. ಕೆಲಸವನ್ನು ಮಾಡದೆ ಹಣವನ್ನು ಪಂಚಾಯಿತಿಯಿಂದ ಬಿಡುಗಡೆ ಮಾಡಿರುವುದನ್ನು ಬಹಿರಂಗ ಪಡಿಸಬೇಕೆಂಬ ಪಟ್ಟನ್ನು ಗ್ರಾಮಸ್ಥರು ಮಾಡಿದರು. ಸಭೆ ಉದ್ವಿಗ್ನ: ಗ್ರಾಮ ಸಭೆಯಲ್ಲಿ ನೀಡಲಾದ ವರದಿಗೆ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ಸಹಿ ಹಾಕಬೇಕೆಂಬ ಪಟ್ಟನ್ನು ಗ್ರಾಮದ ಒಂದು ತಂಡ ಮಾಡಿದರೆ, ಇನ್ನೊಂದು ತಂಡ ಯಾವುದೇ ಕಾರಣಕ್ಕೂ ಸಹಿ ಮಾಡಬಾರದು ಎಂದು ಅಧ್ಯಕ್ಷರ ಪರವಾಗಿ ನಿಂತುಕೊಂಡಿತು. ಇದರಿಂದ ಗ್ರಾಮ ಸಭೆ ಉದ್ವಿಗ್ನ ಪರಿಸ್ಥಿತಿಗೆ ತಲುಪಿತು. ಇದರ ಜತೆಗೆ ೨೦೧೦ರಿಂದ ನಡೆದ ಕಾಮಗಾರಿಗಳ ವಿಚಾರದಲ್ಲೂ ತನಿಖೆ ನಡೆಯಬೇಕೆಂಬ ಆಗ್ರಹ ಕೇಳಿ ಬಂತುತಮ್ಮ ಮೇಲಿನ ಆರೋಪಗಳಿಂದ ಕೆಂಡಾಮಂಡಲರಾದ ಗ್ರಾಪಂ ಅಧ್ಯಕ್ಷೆ ನಫೀಸಾ ಸಭೆಯಲ್ಲಿ ಆಕ್ರೋಶದಿಂದ ಮಾತನಾಡಿದರು. ಹೆಣ್ಣು ಅನ್ನೋ ಕಾರಣಕ್ಕೆ ನನ್ನ ತೇಜೋವಧೆ ಮಾಡಲಾಗುತ್ತಿದೆ. ನಾನು ಪಂಚಾಯಿತಿಯಲ್ಲಿ ಒಂದು ರುಪಾಯಿ ಅವ್ಯವಹಾರ ಮಾಡಿದ್ದರೂ ರಾಜಿನಾಮೆ ನೀಡುವುದಾಗಿ ಹೇಳಿಕೆ ನೀಡಿದರು.
ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಆಗಮಿಸಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ಮಧ್ಯ ಪ್ರವೇಶಿಸಿ ಚೆಕ್ ಸೇರಿ ಉಳಿದ ವಿಚಾರಗಳಿಗೆ ಸಹಿ ಮಾಡಿದ ಮೇಲೆ ಗ್ರಾಮಸಭೆ ವರದಿಗೆ ಸಹಿ ಮಾಡಬಹುದೆಂಬ ಸೂಚನೆ ನೀಡಿದರು. ಇದಕ್ಕೆ ಒಪ್ಪದಿದ್ದಾಗ ಪಂಚಾಯಿತಿ ಸದಸ್ಯರೇ ಈ ಬಗ್ಗೆ ನಿರ್ಣಯ ಕೈಗೊಂಡು ಮುಂದಿನ ಕ್ರಮಕೈಗೊಳ್ಳಿ ಎಂಬ ಸಲಹೆಯನ್ನು ನೀಡಿ ಪೊಲೀಸ್ ಭದ್ರತೆಯಲ್ಲಿ ಸಭೆಯನ್ನು ಮುಂದುವರಿಸಿದರು.ಗ್ರಾಮಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಫೀಸಾ ವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್ ಎ., ಉಪಾಧ್ಯಕ್ಷೆ ಲಲಿತಾ, ಸದಸ್ಯರು ಉಪಸ್ಥಿತರಿದ್ದರು.