ದಾಂಡೇಲಿ: ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸಿಪಿಐಎಂನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ, ಮಾಜಿ ಸಂಸದ ಸೀತಾರಾಂ ಯೆಚೂರಿ ಅವರ ಅಗಲಿಕೆ ದೇಶದ ರಾಜಕಾರಣಕ್ಕೆ, ಶೋಷಿತ ಸಮುದಾಯ ಹಾಗೂ ದೇಶದ ದುಡಿಯುವ ಜನತೆಯ ಪಕ್ಷಪಾತಿ ಕಮ್ಯುನಿಸ್ಟ್ ಚಳವಳಿಗೆ ಬಹುದೊಡ್ಡ ನಷ್ಟ ಉಂಟುಮಾಡಿದೆ ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.
ನಿಸ್ವಾರ್ಥಿ, ನಿಗರ್ವಿ, ಮುತ್ಸದ್ದಿ ನಾಯಕರಾಗಿದ್ದ ಸೀತಾರಾಂ ಯಚೂರಿ ಅವರು ವಿದ್ಯಾರ್ಥಿ ದೆಸೆಯಿಂದಲೆ ಹೋರಾಟದ ಕಣಕ್ಕೆ ಧುಮುಕಿದ್ದರು. ಮಾತ್ರವಲ್ಲ, ಎಸ್‌ಎಫ್‌ಐ ಅಖಿಲ ಭಾರತ ಅಧ್ಯಕ್ಷರಾಗಿ ದೇಶದ ವಿದ್ಯಾರ್ಥಿ ಚಳವಳಿ ಮುನ್ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಮಾರ್ಕ್ಸ್‌ವಾದಕ್ಕೆ ಆಕರ್ಷಿತರಾಗಿ, ಸಿಪಿಐಎಂ ಪಕ್ಷದ ಕಾರ್ಯಕರ್ತರಾಗಿ, ನಾಯಕರಾಗಿ ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ, ಸಮಾಜ ಪರಿವರ್ತನೆಗಾಗಿ ಮುಡಿಪಾಗಿಟ್ಟಿದ್ದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಅದನ್ನು ವಿರೋಧಿಸಿ ನೇರವಾಗಿ ಇಂದಿರಾ ಗಾಂಧಿ ಅವರನ್ನೇ ಎದುರಿಸಿದ ದಿಟ್ಟತನ ಅವರದ್ದು. ಅಂದಿನಿಂದ ಅವರು ಭಾರತದಾದ್ಯಂತ ಬಹು ಬೇಡಿಕೆಯ ವಾಗ್ಮಿಯಾಗಿ ಪ್ರಸಿದ್ಧರಾಗಿದ್ದರು. ಪಾರ್ಲಿಮೆಂಟ್‌ನಲ್ಲಿ ರಾಜ್ಯಸಭಾ ಸದಸ್ಯರಾಗಿ ದೇಶದ ಸಮಗ್ರ ಅಭಿವೃದ್ಧಿ ಹಾಗೂ ಸಮಗ್ರತೆ, ಏಕತೆಯ ಮೇಲೆ ನ್ಯಾಯಯುತ ವಿದ್ವತ್ ಪೂರ್ಣ ವಿಷಯಗಳನ್ನು ಮಂಡಿಸಿದ್ದಾರೆ ಎಂದರು.
ಡಿ.ಎಚ್.ಎಸ್. ರಾಜ್ಯ ಸಮಿತಿ ಸದಸ್ಯ ಡಿ. ಸ್ಯಾಮ್ಸನ್ ಮಾತನಾಡಿ, ಜೆ.ಎನ್.ಯು. ವಿದ್ಯಾರ್ಥಿ ಸಂಘಟನೆ ಸಾಮಾಜಿಕ ಬದ್ಧತೆಯುಳ್ಳ ಪ್ರಖರ ಬೌದ್ಧಿಕತೆಯ ವಿದ್ವಾಂಸರನ್ನು ರೂಪಿಸುವ, ವಿಶ್ವವಿದ್ಯಾಲಯದೊಳಗಿನ ಅಕಾಡೆಮಿಕ್ ಪ್ರಜಾಪ್ರಭುತ್ವದ ಮಾದರಿಯಾಗಿ ಹಾಕಿದ ಅಡಿಪಾಯ ಇಂದಿಗೂ ದೇಶದೊಳಗೆ ಮಾತ್ರವಲ್ಲ ವಿಶ್ವದೊಳಗೂ ಮಾದರಿಯಾಗಿದೆ. ಮಾರ್ಕ್ಸ್ವಾದದ ಹಲವು ಆಯಾಮಗಳಲ್ಲಿ ಆಳವಾದ ಪರಿಣತಿ ಅವರನ್ನು ವಿಶ್ವದ ಮುಖ್ಯ ಮಾರ್ಕ್ಸವಾದಿ ಚಿಂತಕರನ್ನಾಗಿಸಿತ್ತು ಎಂದರು.ಡಿವೈಎಫ್‌ಐ ಜಿಲ್ಲಾ ಮುಖಂಡ ಇಮ್ರಾನ್ ಖಾನ್ ಮಾತನಾಡಿ, ಭಾರತದ ಯುವಜನತೆಗೆ ಸೀತಾರಾಮ ಯೆಚೂರಿ ಅವರ ಬದ್ಧತೆಯ ಜೀವನ ದೇಶದ ವಿದ್ಯಾರ್ಥಿ ಯುವಜನತೆಗೆ ಎಂದಿಗೂ ಮಾದರಿಯಾದುದು ಎಂದರು.
ಜಿಲ್ಲಾ ಮುಖಂಡರಾದ ಕಾಂತರಾವ್ ಜಾನಾ, ಮಹಮದ್ ಗೌಸ್ ಬಿಚ್ಚಣ್ಣವರ, ಸಮೀರ್ ಕಳಸೂರ, ಸಲ್ಮಾನರಾಜ್ ಇಲ್ಲೂರಿ, ವೆಂಕಟೇಶ ಲಮಾಣಿ, ಸೀತಾರಾಮ್ ನಕಾಡಿ, ರಾಜು ಖಾನಾಪುರೆ, ಬಾಬುರಾವ್ ಗಜ, ಚಿನ್ನರಾಮಾಂಜನೇಯ, ರಾಜು ಪವಾರ ಉಪಸ್ಥಿತರಿದ್ದರು.ಎಚ್೧೪.೯-ಡಿಎನ್‌ಡಿ೧: ಇತ್ತೀಚೆಗೆ ನಿಧನರಾದ ಸೀತಾರಾಮ ಯೆಚೂರಿ ಅವರಿಗೆ ದಾಂಡೇಲಿಯಲ್ಲಿ ವಿವಿಧ ಸಂಘಟನೆ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.