ಸ್ವಾತಂತ್ರ್ಯ ಸಂಗ್ರಾಮದ ನೆನಪು ಮಾಡಿಕೊಡುವ ಉದ್ದೇಶದಿಂದ ಬಿಜೆಪಿ ಹಮ್ಮಿಕೊಂಡಿರುವ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ನಗರದ ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯ ಮುಂಭಾಗದ ಸರ್ಕಾರಿ ಶಾಲೆ ಬಳಿ ಹಮ್ಮಿಕೊಂಡಿದ್ದ ಅಭಿಯಾನ

 ಬೆಂಗಳೂರು : ಸ್ವಾತಂತ್ರ್ಯ ಸಂಗ್ರಾಮದ ನೆನಪು ಮಾಡಿಕೊಡುವ ಉದ್ದೇಶದಿಂದ ಬಿಜೆಪಿ ಹಮ್ಮಿಕೊಂಡಿರುವ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ನಗರದ ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯ ಮುಂಭಾಗದ ಸರ್ಕಾರಿ ಶಾಲೆ ಬಳಿ ಹಮ್ಮಿಕೊಂಡಿದ್ದ ತ್ರಿವರ್ಣ ಧ್ವಜ ಯಾತ್ರೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷಗಳ ನಾಯಕರಾದ ಆರ್.ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಪಕ್ಷದ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಮತ್ತಿತರ ನಾಯಕರು ಪಾಲ್ಗೊಂಡಿದ್ದರು.

ಹರ್ ಘರ್ ತಿರಂಗಾ ಯಾತ್ರೆ

ಈ ವೇಳೆ ಮಾತನಾಡಿದ ವಿಜಯೇಂದ್ರ, ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆಯಂತೆ ರಾಜ್ಯ ಮತ್ತು ದೇಶಾದ್ಯಂತ ಹರ್ ಘರ್ ತಿರಂಗಾ ಯಾತ್ರೆಗೆ ನಾವು ಇವತ್ತು ಚಾಲನೆ ನೀಡಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವುದು, ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಮೂಡಿಸುವ ಉದ್ದೇಶ ಇದರಲ್ಲಿದೆ ಎಂದರು.

ನಕಲಿ ಗಾಂಧಿಗಳಿಗೆ ಬಿಜೆಪಿ ಟೀಕಿಸುವ ಯಾವುದೇ ನೈತಿಕತೆ ಇಲ್ಲ

ಅಶೋಕ್‌ ಮಾತನಾಡಿ, ನಕಲಿ ಗಾಂಧಿಗಳಿಗೆ ಬಿಜೆಪಿ ಟೀಕಿಸುವ ಯಾವುದೇ ನೈತಿಕತೆ ಇಲ್ಲ. ಈಗಿರುವ ಕಾಂಗ್ರೆಸ್ ನಕಲಿ ಗಾಂಧಿಗಳದ್ದು. ಒರಿಜಿನಲ್ ಗಾಂಧಿಗಳು ಎಂದೋ ಕಾಣೆಯಾಗಿದ್ದಾರೆ. ಒಂದೇ ಮನೆಯ ಡೂಪ್ಲಿಕೇಟ್ ಗಾಂಧಿಗಳು ಈಗ ಉಳಿದಿದ್ದಾರೆ. ಇವರು ಬಿಜೆಪಿ ಟೀಕಿಸುತ್ತಾರೆ. ಹಳೆಯ ಕಾಂಗ್ರೆಸ್ ಅನ್ನು ವಿಸರ್ಜನೆ ಮಾಡಿ ಅಂತ ಮಹಾತ್ಮ ಗಾಂಧಿ ಅವರು ಅಂದೇ ಹೇಳಿದ್ದರು. ಆದರೆ ಹಾಗೆ ಮಾಡಲಿಲ್ಲ. ಇಂಥವರೆಲ್ಲ ಸೇರಿಕೊಂಡು ಬಿಜೆಪಿ ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಹರ್ಘರ್ ತಿರಂಗಾ ಅಭಿಯಾನದಲ್ಲಿ ನಾಗರಿಕರು ಸಕ್ರಿಯವಾಗಿ, ಉತ್ಸಾಹದಿಂದ ಭಾಗವಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ನಾವೆಲ್ಲ ಸೇರಿ ಈ ಅಭಿಯಾನವನ್ನು ಯಶಸ್ವಿಗೊಳಿಸೋಣ. ಇದರ ಅಂಗವಾಗಿ ಇಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮನೆಮನೆಗೆ ತಿರಂಗವನ್ನು ಕೊಂಡೊಯ್ಯಯವ ಕೆಲಸವನ್ನು ಬಿಜೆಪಿ ಹಮ್ಮಿಕೊಂಡಿದೆ ಎಂದು ವಿವರಿಸಿದರು.