ದೊಡ್ಡಬಳ್ಳಾಪುರ: ಹಾವು ಕಡಿದಾಗ ಗಾಬರಿಯಾಗದೆ ಸಮಯ ವ್ಯರ್ಥಮಾಡದೆ ಕೂಡಲೇ ಸಮೀಪದ ಸರ್ಕಾರಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಹಾವು ಕಡಿತಕ್ಕೆ ಚುಚ್ಚುಮದ್ದು ಲಭ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಂಜುನಾಥ್ ತಿಳಿಸಿದರು
ದೊಡ್ಡಬಳ್ಳಾಪುರ: ಹಾವು ಕಡಿದಾಗ ಗಾಬರಿಯಾಗದೆ ಸಮಯ ವ್ಯರ್ಥಮಾಡದೆ ಕೂಡಲೇ ಸಮೀಪದ ಸರ್ಕಾರಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಹಾವು ಕಡಿತಕ್ಕೆ ಚುಚ್ಚುಮದ್ದು ಲಭ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಂಜುನಾಥ್ ತಿಳಿಸಿದರು.
ಬೆಂ.ಗ್ರಾ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ “ಅಂತಾರಾಷ್ಟ್ರೀಯ ಹಾವು ಕಡಿತ ಜಾಗೃತಿ ದಿನ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾವು ಕಡಿತದಿಂದ ಹೆಚ್ಚಾಗಿ ರೈತರು, ಕೂಲಿ ಕಾರ್ಮಿಕರು ಮೃತಪಡುತ್ತಿದ್ದು, ರಾತ್ರಿ ವೇಳೆ ಜಮೀನುಗಳಿಗೆ ಹೋದಾಗ ಮನ್ನೆಚೆಕೆಗಾಗಿ ಕಡ್ಡಾಯವಾಗಿ ಟಾರ್ಚ್‌ಲೈಟ್ ಮತ್ತು ಶೂಗಳನ್ನು ಬಳಸಬೇಕು. ಸೂಕ್ತ ಕಳೆ, ಹುಲ್ಲುಗಾವಲು, ಅರಣ್ಯ ಪ್ರದೇಶ, ಜಮೀನಿನಲ್ಲಿ ಕೆಲಸ ಮಾಡುವಾಗ ಗಮ್ ಬೂಟ್ ಬಳಸುವುದು ಸೂಕ್ತ. ಹಾವು ಕಚ್ಚಿದಾಗ, ಗಾಯವನ್ನು ಕತ್ತರಿಸುವುದು, ವಿಷವನ್ನು ಬಾಯಿಯಿಂದ ಹೀರುವುದು, ಗಾಯವನ್ನು ಸುಡುವುದು, ಬಿಗಿಯಾಗಿ ಹಗ್ಗ ಕಟ್ಟುವುದು ಅಥವಾ ಮನೆಮದ್ದು ಹಚ್ಚುವುದು ಮಾಡಬಾರದು. ಮಂತ್ರ-ತಂತ್ರದ ಅಥವಾ ಇತರ ಮೂಡನಂಭಿಕೆ ಚಿಕಿತ್ಸೆಗಾಗಿ ಸಮಯ ವ್ಯರ್ಥ ಮಾಡದೇ ಹತ್ತಿರದ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದರೆ ಹಾವು ಕಚ್ಚಿದವರು ಬದುಕುಳಿಯುತ್ತಾರೆ ಎಂದರು.ಹಾವು ಕಚ್ಚಿದ ದೇಹದ ಭಾಗದಲ್ಲಿರುವ ಪಾದರಕ್ಷೆ, ಕಾಲುಂಗುರ, ಬೆಲ್ಟ್, ಆಭರಣಗಳು, ವಾಚ್, ಬಿಗಿಯಾದ ಬಟ್ಟೆಯನ್ನು ಕಳಚಬೇಕು. ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಿ, ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ, ರೈತರು, ಕಾರ್ಮಿಕರು ಮತ್ತು ಮಕ್ಕಳು ಹಾವಿನ ಕಡಿತಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಹಾವು ಕಡಿತ ಜಾಗತಿಕ ಸಮಸ್ಯೆಯಾಗಿದೆ. ಹಾವಿನ ಕಡಿತ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಹಾವು ಕಡಿತಕ್ಕೆ ಉಚಿತ ಚಿಕಿತ್ಸೆ ಲಭ್ಯ. ತುರ್ತು ಪರಿಸ್ಥಿಗಳಿಗಾಗಿ, ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಆಂಬ್ಯುಲೆನ್ಸ್ ಸೇವೆಗೆ ತಕ್ಷಣ ಕರೆ ಮಾಡಿ ಎಂದು ತಿಳಿಸಿದರು.ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗೇಶ್ ಮಾತನಾಡಿ, ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಹಾವು ಕಡಿತದ ಅಪಾಯಗಳು, ತಕ್ಷಣದ ವೈದ್ಯಕೀಯ ಚಿಕಿತ್ಸೆಯ ಮಹತ್ವ ಹಾಗೂ ತಪ್ಪು ಕಲ್ಪನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ದೊಡ್ಡಬಳ್ಳಾಪುರ ತಾಲೂಕಿನ ಶಸ್ತ್ರ ಚಿಕಿತ್ಸರಾದ ಡಾ ವಿಜಯ, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ವೀಣಾ, ಡಾ.ಶಾರದ, ಡಾ.ರಮೇಶ್, ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದಿಂದ ಡಾ. ಲೇಖ, ಡಾ.ಸಿನಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.23ಕೆಡಿಬಿಪಿ1- ಬೆಂ.ಗ್ರಾ ಜಿಲ್ಲಾಡಳಿತ ಭವನದಲ್ಲಿ ಅಂತಾರಾಷ್ಟ್ರೀಯ ಹಾವು ಕಡಿತ ಜಾಗೃತಿ ದಿನಾಚರಣೆ ನಡೆಯಿತು.