ಸವಣೂರು: ಜಿಲ್ಲೆಯಲ್ಲಿ ೧೯೧೮ ಅಂಗನವಾಡಿಗಳನ್ನು ಪರಿಶೀಲಿಸುತ್ತಿದ್ದೇವೆ. ತಾಲೂಕಿನಲ್ಲಿ ಎಷ್ಟು ಜನರು ಅಂಗನವಾಡಿ ಮೇಲ್ವಿಚಾರಕರಿದ್ದಾರೆ. ಅವರು ಎಷ್ಟು ದಿನಕ್ಕೊಮ್ಮೆ ಅಂಗನವಾಡಿಗಳಿಗೆ ಭೇಟಿ ನೀಡುತ್ತಾರೆ ಎಂಬುದನ್ನು ಗಮನಿಸಿ ಅಂಗನವಾಡಿಗಳ ಕುರಿತು ಸಮಗ್ರ ಮಾಹಿತಿ ಪಡೆದುಕೊಳ್ಳಿ, ನಿಮ್ಮ ಮೇಲ್ವಿಚಾರಕರು ಸಾಕಷ್ಟು ಸಂಬಳ ಪಡೆಯುತ್ತಿದ್ದಾರೆ. ಒಂದು ಅಂಗನವಾಡಿ ಭೇಟಿ ನೀಡಿ ಇನ್ನೊಂದು ಅಂಗನವಾಡಿ ಭೇಟಿ ನೀಡಲು ನೂರು ದಿನ ತೆಗೆದುಕೊಳ್ಳುತ್ತಿದ್ದಾರೆಂದು ಹಾವೇರಿ ಲೋಕಾಯುಕ್ತ ಡಿ.ಎಸ್ಪಿ ಬಿ.ಪಿ. ಚಂದ್ರಶೇಖರ ಹೇಳಿದರು.ಪಟ್ಟಣದ ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿಗಳ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಘಟಕ ಹಾವೇರಿ ಅವರ ವತಿಯಿಂದ ಏರ್ಪಡಿಸಲಾಗಿದ್ದ ಸಾರ್ವಜನಿಕ ಕುಂದು ಕೊರತೆ ಮತ್ತು ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ನಿಮ್ಮ ಇಲಾಖೆಗಳ ಪ್ರಯೋಜನಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಹೇಳುತ್ತಿದಂತೆ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಯನ್ನು ಸಭೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡು ನಿಮ್ಮ ಇಲಾಖೆ ಉಪ ನಿರ್ದೇಶಕರಿಗೂ ಸಹ ಮಾಹಿತಿ ನೀಡಲಾಗಿದೆ. ನಿಮ್ಮ ಇಲಾಖೆಯ ಮೇಲ್ವೀಚಾರಕರು ಸರಕಾರದ ಯೋಜನೆಗಳೊಂದಿಗೆ ಲಕ್ಷಗಟ್ಟಲೇ ಸಂಬಳ ಪಡೆದುಕೊಳ್ಳುತ್ತಿದ್ದಾರೆ. ಅವರಿಗೆ ಸರಿಯಾಗಿ ಕೆಲಸ ಮಾಡಲು ಏನಿದೆ ತೊಂದರೆ? ಕೂಡಲೇ ತಾವು ಕಾರ್ಯಪ್ರವೃತ್ತರಾಗಿ ಅನಿರೀಕ್ಷಿತವಾಗಿ ಅಂಗನವಾಡಿಗಳಿಗೆ ಭೇಟಿ ನೀಡಿ ನಿಮ್ಮ ಮೇಲ್ವಿಚಾರಕರ ಕಾರ್ಯದಕ್ಷತೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಿ. ಲೋಕಾಯುಕ್ತ ಅಧಿಕಾರಿಗಳು ಸಹ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸುತ್ತಾರೆ ಎಂದು ಎಚ್ಚರಿಸಿದರು.
ಸ್ಥಳೀಯ ಪುರಸಭೆಯು ಭ್ರಷ್ಟಾಚಾರಕ್ಕೆ ರಾಜ್ಯದಲ್ಲಿ ಪ್ರತೀತಿ ಪಡೆದಿದೆ. ಈ ಹಿಂದೆ ಓರ್ವ ರೈತ ಲಂಚದ ಹಣದ ಬದಲು ಎತ್ತುಗಳನ್ನು ತೆಗೆದುಕೊಂಡು ಬಂದ ಪ್ರಕರಣದ ಕುರಿತು ಪುರಸಭೆ ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು. ನಂತರ ಪುರಸಭೆಯಿಂದ ಲೋಕಾಯುಕ್ತಕ್ಕೆ ಹಲವಾರು ದೂರುಗಳು ಬಂದಿದ್ದು ನಿಮ್ಮ ಅಧೀನ ಸಿಬ್ಬಂದಿಗಳಲ್ಲಿ ಗುಂಪುಗಾರಿಕೆ ಇದೇ ಅವರಿಗೆ ಸರಿಯಾದ ತಿಳುವಳಿಕೆ ನೀಡಿ ಕಾರ್ಯಪ್ರವೃತ್ತರಾಗಲು ತಿಳಿಸಿ ಇಲ್ಲವಾದರೆ ನಿಮ್ಮನ್ನೆ ಬಲಿಪಶು ಮಾಡುವ ಲಕ್ಷಣಗಳಿವೆ. ಆದ್ದರಿಂದ ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಜನರನ್ನು ಅಲೆದಾಡಿಸದೆ ಅವರಿಗೆ ಪ್ರಾಮಾಣಿಕ ಸೇವೆಯನ್ನು ನೀಡಲು ಮಂದಾಗಬೇಕೆಂದರು.ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗೈರಿನಿಂದಾಗಿ ಆಕ್ರೋಶಗೊಂಡ ಲೋಕಾಯುಕ್ತ ಡಿ.ಎಸ್ಪಿ ಸಭೆ ಮಾಹಿತಿ ಇದ್ದರೂ ಕೂಡಾ ಸಭೆಗೆ ಬಾರದೇ ಹಾವೇರಿಯಲ್ಲಿ ಸಭೆ ಇದೆ ನೆಪ ಹೇಳಿದ್ರೆ ಪರಿಶೀಲನೆ ಕೈಗೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಏಚ್ಚರಿಕೆ ನೀಡಿದರು. ನಿಮ್ಮ ಸೇವಾವಧಿಯ ನಿವೃತ್ತಿ ಹಂತದಲ್ಲಿ ಹೇಳಿಕೊಳ್ಳಲು ಏನಾದರೂ ಸಾಧನೆ ಇರಬೇಕಲ್ಲವೇ? ಎಂದು ಕೆಲ ಅಧಿಕಾರಿಗಳಿಗೆ ಪ್ರಶ್ನಿಸಿದರು.
ಅಬಕಾರಿ ಇಲಾಖೆಯ ಅಧಿಕಾರಿಗಳು ತಾಲೂಕಿನಲ್ಲಿರುವ ಎಲ್ಲ ವೈನ್‌ಶಾಪ್‌ಗಳಲ್ಲಿ ಕಡ್ಡಾಯವಾಗಿ ಉತ್ತಮ ಗುಣಮಟ್ಟದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಸೂಚನೆ ನೀಡಬೇಕು. ಅಪರಾಧಗಳನ್ನು ತಡೆಗಟ್ಟಲು ಸಿಸಿ ಕ್ಯಾಮೇರಾಗಳನ್ನು ಅಳವಡಿಸುವುದು ಅವಶ್ಯವಾಗಿದೆ. ಕಾಟಾಚಾರಕ್ಕೆ ಕ್ಯಾಮೆರಾಗಳನ್ನು ಅಳವಡಿಸದೇ ಉತ್ತಮ ಗುಣಮಟ್ಟದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಸೂಚಿಸಬೇಕೆಂದು ತಿಳಿಸಿದರು.ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯ ಕುರಿತು ಹಾಗೂ ಆಡಳಿತ ವೈದ್ಯಾಧಿಕಾರಿಯ ಕುರಿತು ಸಾಕಷ್ಟು ದೂರುಗಳು ಬರುತ್ತಿವೆ. ಸರಿಯಾಗಿ ಕಾರ್ಯನಿರ್ವಹಿಸಿ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಮುಂದಾಗಬೇಕು. ವೈದ್ಯೋ ನಾರಾಯಾಣೋ ಹರಿ ಎಂಬುದನ್ನು ಮೆರೆತು ಕಾರ್ಯ ನಿರ್ವಹಿಸಿದ್ದು ಕಂಡು ಬಂದರೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಬಳಿಕ ಪಿ.ಐ ಮುಸ್ತಾಕ ಅಹ್ಮದ ಮಾತನಾಡಿ, ಅಧಿಕಾರಿಗಳು ಜನರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸಿದರೆ ನಿಮ್ಮ ಸೇವೆ ಸಾರ್ಥಕವಾಗಲಿದೆ. ನಿಮ್ಮ ಇಲಾಖೆಯ ಯೋಜನೆಗಳನ್ನು ಸಕಾಲಕ್ಕೆ ಜನರಿಗೆ ಒದಗಿಸುವ ಕಾರ್ಯಗಳಾಗಬೇಕು. ಅಧಿಕಾರಿಗಳು ಒಳ್ಳೆಯ ಕೆಲಸ ಕೈಗೊಂಡರೆ ಜನರ ಪ್ರಶಂಸೆಗೆ ಪಾತ್ರರಾಗುತ್ತೀರಿ. ನಿಮ್ಮ ಸ್ಪಂದನೆ ಜನರೊಂದಿಗೆ ಇರದಿದ್ದರೆ, ಜನರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ತದನಂತರ ಪರಿಶೀಲಿಸಿ ಕಾನೂನು ಪ್ರಕಾರ ತಮ್ಮ ಮೇಲೆ ಕ್ರಮ ಕೈಗೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಭರತರಾಜ್ ಕೆ.ಎನ್. ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.