ಬಾಕಿ ವ್ಯಾಜ್ಯ ಇತ್ಯರ್ಥಕ್ಕೆ ಲೋಕ ಅದಾಲತ್ ಸಹಕಾರಿ

KannadaprabhaNewsNetwork |  
Published : Sep 15, 2024, 01:47 AM IST
ಬಳ್ಳಾರಿಯ ಜಿಲ್ಲಾ ನ್ಯಾಯಾಲಯದ ವಿಸಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಕೆ.ಜಿ ಶಾಂತಿ ಅವರು ರಾಷ್ಟ್ರೀಯ ಲೋಕ-ಅದಾಲತ್ ಕುರಿತು ಮಾತನಾಡಿದರು.  | Kannada Prabha

ಸಾರಾಂಶ

ಸಾರ್ವಜನಿಕರು ಬಾಕಿ ಇರುವ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಲು ಲೋಕ-ಅದಾಲತ್ ಸುವರ್ಣಾವಕಾಶವಾಗಿದೆ.

ಬಳ್ಳಾರಿ: ಸಾರ್ವಜನಿಕರು ಬಾಕಿ ಇರುವ ವ್ಯಾಜ್ಯಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಮಾಡಿಕೊಳ್ಳಲು ರಾಷ್ಟ್ರೀಯ ಲೋಕ-ಅದಾಲತ್ ಸುವರ್ಣವಕಾಶವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ನ್ಯಾ.ಕೆ.ಜಿ ಶಾಂತಿ ಹೇಳಿದರು.

ನಗರದ ತಾಳೂರು ರಸ್ತೆ ನ್ಯಾಯಾಲಯದ ವಿಸಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಅಖಂಡ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಸೇರಿದಂತೆ 31 ನ್ಯಾಯಾಲಯಗಳಲ್ಲಿನ ಬಾಕಿ ಇರುವ 64,811 ಪ್ರಕರಣಗಳಲ್ಲಿ 12,438 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಹುದು ಎಂದು ಗುರುತಿಸಲಾಗಿತ್ತು. ಅವುಗಳಲ್ಲಿ ಕೆಲವು ದಿನಗಳಿಂದ ನ್ಯಾಯಾಧೀಶರು ಮತ್ತು ನ್ಯಾಯವಾದಿ ಸಂಧಾನಕಾರರ ಸಮ್ಮುಖದಲ್ಲಿ ನ್ಯಾಯಾಲಯದ ಅಧಿಕಾರಿಗಳು ಮತ್ತು ಸಂಧಾನಕಾರರು ಕಕ್ಷಿದಾರರ ಮನವೊಲಿಸಿ 7,568 ಪ್ರಕರಣಗಳನ್ನು ರಾಜಿಗೆ ತೆಗೆದುಕೊಂಡು ಸಂಧಾನದ ಮೂಲಕ ಇತ್ಯರ್ಥಗೊಳಿಸಿದ್ದಾರೆ ಎಂದರು.

ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿಗೆ ತೆಗೆದುಕೊಂಡಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇಲ್ಲಿಯವರೆಗೂ 2,36,000 ಕ್ಕೂ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, ಇದರಿಂದ ಕಕ್ಷಿದಾರರು ನೆಮ್ಮದಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.

ಶನಿವಾರ ಹಮ್ಮಿಕೊಂಡಿರುವ ರಾಷ್ಟ್ರೀಯ ಲೋಕ್‌ ಅದಾಲತ್‌ನಲ್ಲಿ 10 ಸಾವಿರ ಬಾಕಿ ಇರುವ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸುವ ಆಶಯವಿದ್ದು, ಒಟ್ಟಾರೆಯಾಗಿ 2,60,000 ಪ್ರಕರಣಗಳು ರಾಜಿಯಾಗುವ ಉದ್ದೇಶ ಹೊಂದಲಾಗಿದೆ ಎಂದರು.

ನ್ಯಾಯಾಲಯದ ನ್ಯಾಯಾಧೀಶರು, ವಕೀಲರು, ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಯ ಸಹಕಾರದೊಂದಿಗೆ ಮುಂದಿನ ದಿನಮಾನಗಳಲ್ಲಿ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ಕಾರ್ಯಪ್ರವೃತ್ತರಾಗುತ್ತಾರೆ ಎಂದು ಹೇಳಿದರು.

ಇದೇ ವೇಳೆ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ನ್ಯಾ.ಕೆ.ಜಿ. ಶಾಂತಿ ವ್ಯಾಜ್ಯ ವಿಚಾರಣೆ ನಡೆಯುವ ನ್ಯಾಯಲಯ ಕೊಠಡಿಗಳಿಗೆ ಖುದ್ದಾಗಿ ಭೇಟಿ ನೀಡಿ ವ್ಯಾಜ್ಯಗಳ ಪರಿಶೀಲನೆ ಮಾಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆದ ರಾಜೇಶ್ ಎನ್.ಹೊಸಮನೆ ಅವರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ