ಕನ್ನಡಪ್ರಭ ವಾರ್ತೆ ವಿಜಯಪುರಆಧುನಿಕ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತುವ ಸಂಸ್ಕಾರ ಅತ್ಯಗತ್ಯ. ವಿದ್ಯಾರ್ಥಿಗಳು ಕೇವಲ ರ‍್ಯಾಂಕ್ ಗಳಿಗಷ್ಟೇ ಜ್ಞಾನವನ್ನು ಸೀಮಿತಗೊಳಿಸದೇ ರಾಷ್ಟ್ರಪ್ರೇಮ, ಸ್ವಚ್ಛತೆ, ಪರಿಸರ ಪ್ರೇಮ, ಮಾನವ ಬಂಧುತ್ವ ಗಟ್ಟಿಗೊಳಿಸುವ ಕಡೆಗೂ ಬೆಳೆಸಿಕೊಳ್ಳಬೇಕು ಎಂದು ನಿಡಸೋಸಿಯ ದುರದುಂಡೇಶ್ವರ ಸಿದ್ದಮಹಾಸಂಸ್ಥಾನ ಮಠದ ನಿಜಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.
ಈ ವೇಳೆ ಮಾತನಾಡಿದ ಅವರು, ಕಡಿಮೆ ಅವಧಿಯಲ್ಲಿ ಪರಿಣಾಮಕಾರಿ ಶಿಕ್ಷಣ ನೀಡಿ, ಉತ್ತಮ ಸಾಧಕ ವಿದ್ಯಾರ್ಥಿಗಳನ್ನು ತರಬೇತಿಗೊಳಿಸುತ್ತಿರುವ ಎಕ್ಸಲಂಟ್ ಕಾಲೇಜಿನ ಸೇವಾ ಮನೋಭಾವ ಮೆಚ್ಚುವಂತಹದ್ದಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ, ಸಾಧಕರ ಪಾಲಿನ ಸ್ವರ್ಗವಾಗಿರುವ ಈ ಕಾಲೇಜು ನಾಡಿಗೆ ಮತ್ತಷ್ಷು ಕೊಡುಗೆ ನೀಡಲಿ ಎಂದು ಶುಭ ಹಾರೈಸಿದರು.
ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಮಾತನಾಡಿ, ಮೊದಲಿನಿಂದಲೂ ನಾವು ಹರ-ಗುರು-ಚರಮೂರ್ತಿಗಳ ಆಶೀರ್ವಾದ ಹಾರೈಕೆ ಬಲದಂತೆಯೇ ನಡೆಯುತ್ತಿದ್ದೇವೆ. ಸಂತ ಮಹಾಂತರ ಕೃಪೆ ಹಾಗೂ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರ ಶ್ರಮದಿಂದ ವಿದ್ಯಾರ್ಥಿಗಳು ಉತ್ಕೃಷ್ಟ ಸಾಧನೆ ಮಾಡುತ್ತಿದ್ಧಾರೆ. ಈ ಮೊದಲು ಹತ್ತನೇ ತರಗತಿ ಮುಗಿದ ಮೇಲೆ ಪಾಲಕರು ತಮ್ಮ ಮಕ್ಕಳನ್ನು ಕಾಲೇಜು ಶಿಕ್ಷಣಕ್ಕಾಗಿ ಬೇರೆ ಜಿಲ್ಲೆಗೆ ಕಳುಹಿಸುತ್ತಿದ್ದರು. ಆದರೆ, ಇಂದು ಎಕ್ಸಲಂಟ್ ಕಾಲೇಜು ನೀಡುವ ಪರಿಪೂರ್ಣವಾದ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕ್ರಮವನ್ನು ಮೆಚ್ಚಿಕೊಂಡು ಬೇರೆ ಜಿಲ್ಲೆಯವರು ಕೂಡ ಇಂದು ವಿಜಯಪುರಕ್ಕೆ ಬರುತ್ತಿದ್ದಾರೆ. ಕಾಲೇಜಿನ ಮೇಲೆ ವಿಶ್ವಾಸ ಇಟ್ಟು ಸಹಕರಿಸುತ್ತಿರುವ ಸರ್ವರಿಗೂ ಚಿರಋಣಿಯಾಗಿದ್ದೇವೆ ಎಂದರು.ನಿಡಸೋಸಿಯಿಂದ ಆಗಮಿಸಿದ ಆಡಳಿತ ಮಂಡಳಿ ನಿರ್ದೇಶಕರಾದ ಜಿ.ಎಮ್.ಪಾಟೀಲ, ರಾಹುಲ್ ಪಾಟೀಲ, ಆರ್ಕಿಟೆಕ್ಚರ್ ಎಜಿನಿಯರ್ ಕಾಶೀನಾಥ ಗುರವ ಹಾಗೂ ಉದ್ಯಮಿ ಶಾಂತೇಶ ಕಳಸಗೊಂಡ ಮತ್ತು ಪ್ರಾಚಾರ್ಯ ಶ್ರೀಕಾಂತ ಕೆ.ಎಸ್., ಆಡಳಿತಾಧಿಕಾರಿ ಪರಶುರಾಮ ಭಾವಿಕಟ್ಟಿ, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪೂಜ್ಯರನ್ನು ಸನ್ಮಾನಿಸಲಾಯಿತು, ಕಾಲೇಜಿನ ಆವರಣದಲ್ಲಿ ಶ್ರೀ ಸಸಿನೆಟ್ಟು ಶುಭ ಹಾರೈಸಿದರು.