ಕನ್ನಡಪ್ರಭ ವಾರ್ತೆ ಹಳೇಬೀಡು
ಗ್ರಾಮಾಂತರ ಮಟ್ಟದಲ್ಲಿ ಖಾಸಗಿ ಶಾಲೆಗಳನ್ನು ನಡೆಸುವುದು ಕಷ್ಟಕರ ಸಂಗತಿ ಎಂದು ಮೈಸೂರಿನ ಸುಕೃತಿ ಏಜೆನ್ಸಿಸ್ ಮಾಲೀಕರಾದ ಜಿ.ಎಸ್. ಶ್ರೀಧರ ಮೂರ್ತಿ ತಿಳಿಸಿದರು.ಹಳೇಬೀಡಿನ ಶ್ರೀ ಶಾರದಾ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ವಾರ್ಷಿಕೋತ್ಸವನ್ನು ಉದ್ಘಾಟನೆ ನಡೆಸಿ ಮಾತನಾಡುತ್ತ, ಖಾಸಗಿ ಶಾಲೆಗಳಿಗೆ ಬರುವಂತ ಮಕ್ಕಳಿಗೆ ನಾವು ಹೆಚ್ಚಿನ ರೀತಿಯಲ್ಲಿ ವ್ಯಾಸಂಗದ ಬಗ್ಗೆ ಮಾಹಿತಿ ನೀಡಬೇಕು. ಶಾಲಾ ಆಡಳಿತ ಒಳ್ಳೆಯ ಪ್ರಕಾಶಕರ(ಪಬ್ಲಿಷರ್) ಪುಸ್ತಕ ಆಯ್ಕೆ ಮಾಡಿಕೊಂಡು ಅದರಲ್ಲಿರುವ ಒಳ್ಳೆಯ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಮಕ್ಕಳಿಗೆ ಬೋಧನೆ ಮಾಡಿದರೆ ಗ್ರಾಮಾಂತರ ಪ್ರದೇಶದಲ್ಲಿ ಖಾಸಗಿ ಶಾಲೆಗಳು ಮುಂದೆ ಬರಲು ಕಾರಣವಾಗುತ್ತದೆ ಎಂದು ತಿಳಿಸಿದರು.
ಬೇಲೂರು ತಾಲೂಕು ಪತ್ರಕರ್ತ ಸಂಘದ ಉಪಾಧ್ಯಕ್ಷ ರಘುನಾಥ್ ಮಾತನಾಡುತ್ತಾ, ಮಕ್ಕಳಿಗೆ ಶಿಕ್ಷಣದಲ್ಲಿ ದೇಶದ ಸಂಸ್ಕೃತಿ, ಸಂಸ್ಕಾರವನ್ನು ನೀಡಬೇಕು. ಆಗ ಮಕ್ಕಳಿಗೆ ಅನುಕೂಲವಾಗುತ್ತದೆ. ಶಾಲೆಯ ಮಕ್ಕಳು ಇಂದಿನ ದಿನಗಳಲ್ಲಿ ಪುಸ್ತಕ ಓದುವುದಕ್ಕಿಂತ ಹೆಚ್ಚು ಮೊಬೈಲ್ ನೋಡುವುದು ಹೆಚ್ಚಾಗಿದೆ. ಪೋಷಕರು ಸಹ ಅದರ ಬಗ್ಗೆ ಯೋಚನೆ ಮಾಡದೇ ಮಕ್ಕಳ ಕೈಗೆ ಮೊಬೈಲ್ ನೀಡುವುದು ದೊಡ್ಡ ಅಪರಾಧವಾಗುತ್ತದೆ. ಇಂದಿನ ಮಕ್ಕಳಿಗೆ ಆಟದ ಮೈದಾನದ ಬಗ್ಗೆ ಆಸಕ್ತಿಯೇ ಇಲ್ಲ. ನೆರಳಿನಲ್ಲೇ ಕೂತುಕೊಂಡು ಮೊಬೈಲು ನೋಡುವುದರಿಂದ ಕಣ್ಣಿನ ದೃಷ್ಟಿ ಕಳೆದುಕೊಳ್ಳಬೇಕಾಗುತ್ತದೆ. ಹೊರಗಡೆ ಆಟದ ಮೈದಾನದಲ್ಲಿ ಆಟವಾಡಿದರೆ ದೈಹಿಕ-ಮಾನಸಿಕವಾಗಿ ವ್ಯಾಯಾಮ ಸಿಗುತ್ತದೆ. ಸೂರ್ಯನ ಕಿರಣಗಳಿಂದ ದೇಹಕ್ಕೆ ಉತ್ತಮವಾದ ಆರೋಗ್ಯ ಸಿಗುತ್ತದೆ. ಇಂದಿನ ದಿನದಲ್ಲಿ ಗ್ರಾಮಾಂತರ, ಪಟ್ಟಣ ಎಂಬ ಭೇದಭಾವ ಇಲ್ಲದೆ ಎಲ್ಲಾ ಮಕ್ಕಳು ಸಹ ಮೊಬೈಲ್‌ನ್ನು ಹೆಚ್ಚಾಗಿ ನೋಡುತ್ತಿರುವುದು ಮುಂದಿನ ದಿನಗಳಲ್ಲಿ ಭಾರಿ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.ಜಾವಗಲ್ ಸ್ವಾತಿಕ್ ಕಿಡ್ಸ್ ಫ್ರೀ ಸ್ಕೂಲ್ ಕಾರ್ಯದರ್ಶಿ ಉಷಾ ರಘು ಮಾತನಾಡಿದರು. ಶ್ರೀ ಶಾರದಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸಿ. ಎಸ್. ನಂದಿನಿ ಮಾತನಾಡುತ್ತಾ, ನಮ್ಮ ಶಾಲೆಯಲ್ಲಿ ಚಿಕ್ಕ ಮಕ್ಕಳಿಗೆ ಪ್ರಥಮ ಹಂತದಲ್ಲಿ ಹೆಚ್ಚಿನ ಸಂಸ್ಕಾರದ ಬಗ್ಗೆ ಆದ್ಯತೆ ನೀಡುತ್ತಾ ಬರುತ್ತಿದ್ದೇವೆ.ಎಂದು ತಿಳಿಸಿದರು.
.ಕಾರ್ಯಕ್ರಮದಲ್ಲಿ ಹಳೇಬೀಡು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ್, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.